ಕಾರ್ಕಳ : ವಿವಿಧ ಹಂತದ ಶ್ರೇಣೀಕರಣದ ಆಧಾರದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಳ್ಕಾಡು ಎಳ್ಳಾರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಕೇಂದ್ರ ಸರ್ಕಾರದ ಸ್ವಚ್ಛ್ ಏವಂ ಹರಿತ್ ವಿದ್ಯಾಲಯ ರೇಟಿಂಗ್ ಪ್ರಶಸ್ತಿಯ ರಾಷ್ಟ್ರಮಟ್ಟದ ಹಂತಕ್ಕೆ ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿಯಾಗಿ ಜಿಲ್ಲೆಯಿಂದ ಒಟ್ಟು 1107 ಶಾಲೆಗಳು ನೋಂದಾಯಿಸಿದ್ದವು. ಈ ಪೈಕಿ ಮುಳ್ಕಾಡು ಶಾಲೆ ಸೇರಿದಂತೆ 8 ಶಾಲೆಗಳನ್ನು ಮುಂದಿನ ಹಂತದ ಪ್ರಕ್ರಿಯೆಗೆ ಆಯ್ಕೆ ಮಾಡಲಾಯಿತು. ಈ ಪ್ರಕ್ರಿಯೆ ನಂತರ ಸರ್ವ ಶಿಕ್ಷಣ ಅಭಿಯಾನ ರಾಜ್ಯ ಕಚೇರಿಯ ತಂಡ ಜಿಲ್ಲೆಗೆ ಭೇಟಿ ನೀಡಿ ಶಾಲೆಯ ಸ್ವಚ್ಛತೆ, ಸೌಕರ್ಯಗಳು, ಶಿಕ್ಷಣದ ಕ್ರಮ, ಶೌಚಾಲಯ, ಪರಿಸರ ವ್ಯವಸ್ಥೆ ಇತ್ಯಾದಿಗಳನ್ನು ಪರಿಶೀಲಿಸಿತು. ಈ ಎಲ್ಲವನ್ನು ಪರಿಗಣಿಸಿ ನೀಡಲಾದ ಶ್ರೇಣೀಕರಣದ ಮೇಲೆ ಮುಳ್ಕಾಡು ಶಾಲೆಯನ್ನು ರಾಷ್ಟ್ರಮಟ್ಟಕ್ಕೆ ಶಿಫಾರಸು ಮಾಡಲಾಯಿತು.
1959ರಲ್ಲಿ ಸ್ಥಾಪಿಸಲಾದ ಈ ಶಾಲೆ ಬಸ್ ಸೌಲಭ್ಯಗಳಿಲ್ಲದ ಗ್ರಾಮೀಣ ಪ್ರದೇಶದಲ್ಲಿದ್ದರೂ ಗ್ರಾಮೀಣ ಶಿಕ್ಷಣಕ್ಕೆ ಮಾದರಿಯಾಗಿ ಬೆಳೆದು ನಿಂತಿದೆ. ಪ್ರಸ್ತುತ 55 ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯಲ್ಲಿ ಸ್ಪೋಕನ್ ಇಂಗ್ಲಿಷ್ ತರಬೇತಿ, ಕಂಪ್ಯೂಟರ್ ತರಬೇತಿ, ಯೋಗಾಭ್ಯಾಸ, ಕರಾಟೆ, ಆರೋಗ್ಯ ಶಿಕ್ಷಣ, ಬ್ಯಾಂಡ್ ಇತ್ಯಾದಿ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಅಲ್ಲದೆ, ವಿಜ್ಞಾನ ಪ್ರಯೋಗಾಲಯವನ್ನು ಹೊಂದಿರುವ ಈ ಶಾಲೆಯು, ಔಷಧಿ ಸಸ್ಯ ತೋಟ, ಆಟದ ಬಾಲವನ, ಭೋಜನದ ಹಾಲ್, ಆಟದ ಮೈದಾನ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹೊಂದಿದೆ.


ರಾಜ್ಯದ 20, ದೇಶದ 200 ಶಾಲೆಗಳು ಆಯ್ಕೆ ;
ಕರ್ನಾಟಕ ರಾಜ್ಯದ 20 ಶಾಲೆಗಳು ಸೇರಿದಂತೆ ದೇಶದ ಒಟ್ಟು 200 ಶಾಲೆಗಳು ಏವಂ ಹರಿತ್ ವಿದ್ಯಾಲಯ ರೇಟಿಂಗ್ ಪ್ರಶಸ್ತಿಯ ರಾಷ್ಟ್ರಮಟ್ಟಕ್ಕೆ ಶಿಫಾರಸುಗೊಂಡಿವೆ. ಶೀಘ್ರದಲ್ಲೇ ಕೇಂದ್ರ ಸರ್ಕಾರದ ರಾಷ್ಟ್ರಮಟ್ಟದ ತಂಡಗಳು ಶಿಫಾರಸುಗೊಂಡ ಶಾಲೆಗಳಿಗೆ ಭೇಟಿ ನೀಡಿ ಅಂತಿಮ ಪರಿಶೀಲನೆ ನಡೆಸಲಿವೆ.
ಪ್ರಶಸ್ತಿಗೆ ಆಯ್ಕೆಯಾದ ಶಾಲೆಗಳಿಗೆ 1 ಲಕ್ಷ ರೂ. ನಗದು ಬಹುಮಾನದ ಜೊತೆಗೆ ಪ್ರಮಾಣಪತ್ರ ಮತ್ತು ಗೌರವ ಪ್ರಶಸ್ತಿ ಲಭಿಸಲಿದೆ. ಸಾಧಕ ಶಿಕ್ಷಕರಿಗೆ ಹಾಗೂ ದೇಶದ ವಿವಿಧ ರಾಜ್ಯಗಳ ಆಯ್ಕೆಯಾದ 200 ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಧ್ಯಯನ ಪ್ರವಾಸ ಕೈಗೊಳ್ಳುವ ಅವಕಾಶ ದೊರೆಯಲಿದೆ.

ಇದನ್ನೂ ಓದಿ :Puttur: ಮೂರು ದಿನಗಳ ಕೃಷಿ ಮೇಳ – ಸಸ್ಯ ಜಾತ್ರೆ ಸಮಾರೋಪ
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

