Puttur: ಮೂರು ದಿನಗಳ ಕೃಷಿ ಮೇಳ – ಸಸ್ಯ ಜಾತ್ರೆ ಸಮಾರೋಪ

ಪುತ್ತೂರು: ಕೃಷಿಕ ಸಮಾಜದ ವತಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಗದ್ದೆಯಲ್ಲಿ ಆಯೋಜಿಸಲಾದ ಮೂರು ದಿನಗಳ ಕೃಷಿ ಮೇಳ ಹಾಗೂ ಸಸ್ಯ ಜಾತ್ರೆ ಜ. 12 ರಂದು ಸಮಾರೋಪಗೊ‌ಂಡಿತು. ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ ವತಿಯಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಟ್ರಸ್ಟ್, ಪುತ್ತೂರು ಮಹತೋಭಾರ ಶ್ರೀ‌ಮಹಾಲಿಂಗೇಶ್ವರ ದೇವಾಲಯ, ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಅರಿವು ಕೇಂದ್ರ ಹಾಗೂ ರೈತ ಕುಡ್ಲ ಪ್ರತಿಷ್ಠಾನದ ಸಹಯೋಗದಲ್ಲಿ ಈ ಮೇಳವನ್ನು ಆಯೋಜಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮುಖ್ಯ ಅತಿಥಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಎಲ್ಲಾ ರೈತರನ್ನು ಮೂರು ದಿನಗಳ ಕಾಲ ಒಗ್ಗೂಡಿಸಿಕೊಂಡು ಕೃಷಿ ಮೇಳ ಆಯೋಜಿಸಿರುವುದು ಸವಾಲಿನ ಸಂಗತಿಯೇ ಸರಿ. ಅಲ್ಲದೇ, ಕೃಷಿಯಲ್ಲಿ ಹೆಚ್ಚಿನವರು ಆಸಕ್ತಿ ಹೊಂದಿದ್ದಾರೆ ಎಂಬುದಕ್ಕೆ ಕೃಷಿ ಮೇಳದಲ್ಲಿನ ಸ್ಟಾಲ್ ಗಳ ಮುಂದೆ ಜಮಾಯಿಸಿದ ಜನರೇ ಸಾಕ್ಷಿ. ಕೃಷಿ ಲಾಭದಾಯಿಕ ಎನ್ನುವುದಕ್ಕಿಂತ ನಮ್ಮ ಸಾಂಸ್ಕೃತಿಕ ಪರಂಪರೆ ಎಂದು ನಂಬಿಕೊಂಡು ಹಿರಿಯರು ಜೀವನ ಸಾಗಿಸಿದರು‌ ಎಂದರು.

Advertisement

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಬುದ್ಧಿವಂತರ ರೈತರಿರುವ ಜಿಲ್ಲೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಮೇಳಗಳು ಕಡಿಮೆಯಾಗುತ್ತಿರುವ ನಡುವೆ ಕೃಷಿಕ ಸಮಾಜವು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಕೃಷಿ ಮೇಳ ಆಯೋಜಿಸಿರುವುದು ಸಂತಸದ ವಿಷಯವಾಗಿದೆ. ರೈತನಿಗೆ ಉಪಯೋಗವಾಗಲೆಂದು ದೇಶದಲ್ಲಿ ಅನೇಕ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ವಿವಿಧ ರೈತೋಪಕಾರಿ ಯೋಜನೆಗಳನ್ನೂ ಜಾರಿಗೆ ತರಲಾಗಿದೆ‌. ಕಬ್ಬು ಬೆಳೆಯುತ್ತಿರುವ ರೈತರು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಸರ್ಕಾರದ ಮೇಲೆ ಒತ್ತಡ ಹೇರಿ ಪರಿಹಾರ ಪಡೆಯುವಷ್ಟು ಶಕ್ತರಾಗಿದ್ದಾರೆ. ಆದರೆ ಕರಾವಳಿ ಭಾಗದ ಅಡಿಕೆ ಬೆಳೆಗಾರರ ವಿಷಯಕ್ಕೆ ಬಂದಾಗ ಹಾಗಿಲ್ಲ ಎಂದರು.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಕೃಷಿ ಮೇಳದಲ್ಲಿ ನಡೆದ ಗೋಷ್ಠಿಗಳಿಂದ ರೈತರಿಗೆ ಅನುಕೂಲವಾಗಿದೆ ಎಂದರು.

Advertisement

ಸನ್ಮಾನ ಸ್ವೀಕರಿಸಿ ಮಾತನಾಡಿದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮಾತನಾಡಿ, ಈ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಕೈ ಜೋಡಿಸಿದ್ದಾರೆ. ಎಲ್ಲಾ ಸವಾಲೂಗಳನ್ನು ಸ್ವೀಕರಿಸಿ ಆಯೋಜಿಸಲಾದ ಈ ಕೃಷಿ ಮೇಳವು ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜಯ ಕುಮಾರ್ ರೈ ಕೋರಂಗ, ಕೃಷಿಕ ಸಮಾಜದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಷ್ಟು ದೊಡ್ಡ ಕಾರ್ಯಕ್ರಮ ನಡೆದಿದೆ. ಈ ಮೇಳಕ್ಕಾಗಿ ಬೇರೆ ಬೇರೆ ಸ್ಥಳಗಳನ್ನು ನೋಡಿದ್ದರೂ ಪುತ್ತೂರು ಸೂಕ್ತ ಸ್ಥಳವೆಂದು ಅರಿತು ಪುತ್ತೂರಿನಲ್ಲೇ ಆಯೋಜಿಸಿದೆವು ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆ ಬ್ಯಾಂಕ್ ಕರೆಸ್ಪೋಂಡೆಂಟ್ ನ ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಮಾತನಾಡಿ, ಕರಾವಳಿ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಅತ್ಯುತ್ತಮವಾಗಿದೆ. ಹೀಗಾಗಿ ಕೃಷಿಕರಿಗೆ , ಉದ್ಯಮಿಗಳಿಗೆ ಅನುಕೂಲಕರವಾಗಿದೆ. ಇಂತಹ ಕೃಷಿ ಮೇಳಗಳು ರೈತರಿಗೆ ಆರ್ಥಿಕವಾಗಿ ಸಹಕಾರಿಯಾಗಲಿದೆ ಎಂದರು.

ಕರ್ನಾಟಕ ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ಪದ್ಮನಾಭ ರೈ ಕಲ್ಲಡ್ಕ ಮಾತನಾಡಿ, ಯಶಸ್ಸಿಗೆ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿದರು.

ಕ್ಯಾಂಪ್ಕೋದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಆರ್.ಸತೀಶ್ಚಂದ್ರ ಅವರನ್ನು ಕೃಷಿಕ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಜೊತೆಗೆ, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಇದನ್ನೂ ಓದಿ :Sullia : ಸುಳ್ಯ ಜಾತ್ರೆಯ ಪ್ರಯುಕ್ತ ನಡೆಯಬೇಕಿದ್ದ ಕೋಳಿಅಂಕ ಈ ಬಾರಿ ನಿಷೇಧ

=====

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು