FIR ದಾಖಲಾದ ಬೆನ್ನಲ್ಲೇ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಖಡಕ್ ರಿಯಾಕ್ಷನ್: “ದೊಂಬಿ ಮಾಡಿಲ್ಲ, ನೋಟೀಸ್‌ಗೆ ಹೆದರಲ್ಲ”

ಉಡುಪಿ: ತಮ್ಮ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿರುವ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, “ಪೊಲೀಸರು ಅವರ ಕರ್ತವ್ಯ ಮಾಡಿದ್ದಾರೆ, ಕಾನೂನುಬದ್ಧವಾಗಿ ಯಾವುದೇ ನೋಟೀಸ್ ನೀಡಿದರೂ ಸ್ವೀಕರಿಸಲು ನಾನು ಸಿದ್ಧನಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.

“ನಾನು ಯಾವುದೇ ದೇಶವಿರೋಧಿ ಚಟುವಟಿಕೆ ನಡೆಸಿಲ್ಲ, ಡಕಾಯಿತಿ ಅಥವಾ ದೊಂಬಿ ಮಾಡಿಲ್ಲ. ಜಾಗತಿಕವಾಗಿ ಗೌರವಿಸಲ್ಪಡುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಗುರವಾಗಿ ನಿಂದಿಸಿದ್ದಕ್ಕೆ ಪ್ರತಿಯಾಗಿ ಮಾತನಾಡಿದ್ದೇನೆ. ನನ್ನ ಮಾತಿನ ಬಗ್ಗೆ ನನಗೆ ಹೆಮ್ಮೆ ಇದೆ,” ಎಂದು ಶಾಸಕರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

“ಇಡೀ ವಿಶ್ವವೇ ಪ್ರಧಾನಿ ಮೋದಿಯವರನ್ನು ಗೌರವಿಸುತ್ತಿದೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಸಂಸತ್ತಿನಲ್ಲಿ ‘ಈಡಿಯಟ್’ ನಂತಹ ಪದಗಳನ್ನು ಬಳಸುವುದು ಕಾಂಗ್ರೆಸ್ ಪಕ್ಷಕ್ಕೆ ಗೌರವ ತರುವಂತಹುದಲ್ಲ.”

“ದೆಹಲಿ ಪ್ರತಿಭಟನೆಯಲ್ಲಿ ‘ನೀಟ್’ ಪರೀಕ್ಷೆ ಹೊರತಾಗಿ ಬೇರೆ ವಿಷಯಗಳ ಬಗ್ಗೆ ಮಾತನಾಡಲಾಗಿದೆ. ಅಲ್ಲಿ ಭಾಗವಹಿಸಿದ ಅನೇಕರಿಗೆ ಕ್ರಿಮಿನಲ್ ಹಿನ್ನೆಲೆ ಇದೆ. ಇಂತಹ ದೇಶದ್ರೋಹಿಗಳ ಬಗ್ಗೆ ಕಾಂಗ್ರೆಸ್ ಮೊದಲು ಮಾಹಿತಿ ಪಡೆಯಲಿ. ಉಡುಪಿ ಜಿಲ್ಲೆಯ ಶಿಕ್ಷಣ ವ್ಯವಸ್ಥೆಗೆ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಸಿಗುತ್ತಿಲ್ಲ. ಶಾಲಾ ಕಟ್ಟಡಗಳು ಸೋರಿಕೆಯಾಗುತ್ತಿವೆ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಮೊಟ್ಟೆ ಸಿಗುತ್ತಿಲ್ಲ. ಕರಾವಳಿ ಭಾಗಕ್ಕೆ ಸರ್ಕಾರ ಅನುದಾನದಲ್ಲಿ ತಾರತಮ್ಯ ಮಾಡುತ್ತಿದೆ.” ಎಂದು ಹೇಳಿದ್ದರು.

“ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಮಾಜಿ ಸಚಿವರೊಬ್ಬರು ಠಾಣೆಗೆ ಹೋಗಿ ದೂರು ಕೊಟ್ಟಿದ್ದಾರೆ. ಇದು ಉಡುಪಿಯಲ್ಲಿ ಬಿಜೆಪಿಯ ಶಕ್ತಿಯನ್ನು ತೋರಿಸುತ್ತದೆ. ಸರ್ಕಾರಗಳು ಶಾಶ್ವತವಲ್ಲ, ಅಧಿಕಾರಿಗಳು ರಾಜಕೀಯ ಒತ್ತಡಗಳಿಗೆ ಮಣಿಯದೆ ನ್ಯಾಯಯುತವಾಗಿ ಕೆಲಸ ಮಾಡಲಿ. ಯುವ ಮೋರ್ಚಾ ನೀಡಿದ್ದ ದೂರಿನ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಸುವರ್ಣ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಸಂಸದರಾದ್ರೂ ಬಿಗುವಿಲ್ಲ, ಸಾಮಾನ್ಯ ಪ್ರಜೆಯ ಕರೆಗೆ ಸ್ಪಂದನೆ: ರಾಜಕೀಯ ಕ್ಷೇತ್ರದಲ್ಲಿ ನೈಜ ಭರವಸೆ ಕೋಟ

ಈ ಘಟನೆಯ ಹಿನ್ನೆಲೆ ಏನು?

ಇತ್ತೀಚೆಗೆ ‘ನೀಟ್’ (NEET) ಪರೀಕ್ಷೆ ಅಕ್ರಮ ಹಾಗೂ ದೇಶಾದ್ಯಂತ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಬೆಂಬಲಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸಿದ ಪ್ರತಿಭಟನೆ ಹಾಗೂ ನೀಡಿದ ಹೇಳಿಕೆಗಳನ್ನು ವಿರೋಧಿಸಿ ಉಡುಪಿಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರಚೋದನಕಾರಿ ಹಾಗೂ ಕಠಿಣ ಪದ ಬಳಸಿ ವೈಯಕ್ತಿಕ ವಾಗ್ದಾಳಿ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಶಾಸಕರ ಈ ಹೇಳಿಕೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *