ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳಿಂದ ಇಬ್ಬರು ಮಹಿಳೆಯರ ಮೇಲೆ ಚಿನ್ನದ ಸರ ಕಳವು ಯತ್ನ; ಉಪ್ಪಿನಂಗಡಿಯಲ್ಲಿ ರೋಚಕ ಘಟನೆ ಸಿಸಿಟಿವಿಯಲ್ಲಿ ಸೆರೆ

ಪುತ್ತೂರು: ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಗುರುವಾರ (ನ.12) ಬೈಕ್‌ನಲ್ಲಿ ಬಂದಿಳಿದು ಇಬ್ಬರು ದುಷ್ಕರ್ಮಿಗಳು ಮಹಿಳೆಯರ ಚಿನ್ನದ ಸರ ಕಳವಿಗೆ ಯತ್ನಿಸಿರುವ ರೋಚಕ ಘಟನೆ ನಡೆದಿದೆ. ಕಾರ್ ಸ್ಟ್ರೀಟ್‌ನಲ್ಲಿ ಇಬ್ಬರು ಮಹಿಳೆಯರನ್ನು ಗುರಿಯಾಗಿಸಿ ಸರ ಕಳವಿಗೆ ವಿಫಲ ಯತ್ನ ನಡೆಸಿದ ಕಳ್ಳರನ್ನು, ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ತಮ್ಮ ಕಾರಿನಲ್ಲಿ ಬೆನ್ನಟ್ಟಿದರೂ ಕೊನೆಗೆ ದಟ್ಟಣೆಯ ಲಾಭ ಪಡೆದು ಪರಾರಿಯಾಗಿರುವ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗುರುವಾರ ಬೆಳಿಗ್ಗೆ 11:15ರ ಸುಮಾರಿಗೆ ಉಪ್ಪಿನಂಗಡಿಯ ಕಾರ್ ಸ್ಟ್ರೀಟ್‌ನಲ್ಲಿರುವ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಬಳಿ ಈ ಘಟನೆ ನಡೆದಿದೆ. ಆಂಧ್ರಪ್ರದೇಶ ಮೂಲದ ಸ್ವಪ್ನಾ ಎಂಬುವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಬೈಕ್‌ನಲ್ಲಿ ಬಂದಿಬ್ಬರು ದುಷ್ಕರ್ಮಿಗಳು ಏಕಾಏಕಿ ಅವರ ಚಿನ್ನದ ಸರ ಕಸಿದುಕೊಳ್ಳಲು ಯತ್ನಿಸಿದ್ದಾರೆ.

Advertisement

 ಸ್ವಪ್ನಾ ಅವರ ಜೋರಾದ ಕಿರುಚಾಟ ಕೇಳಿ ಗ್ರಾಮ ಆಡಳಿತ ಅಧಿಕಾರಿ (VA) ಕಚೇರಿ ಸಮೀಪವಿದ್ದ ಸಾಮಾಜಿಕ ಕಾರ್ಯಕರ್ತ ನಾಗೇಶ್ ಪ್ರಭು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ವಿಷಯ ತಿಳಿದ ಅವರು ತಮ್ಮ ಕಾರಿನಲ್ಲಿ ಕಳ್ಳರನ್ನು ಬೆನ್ನಟ್ಟಲು ಮುಂದಾಗಿದ್ದಾರೆ. ಅಷ್ಟರಲ್ಲೇ ದುಷ್ಕರ್ಮಿಗಳು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಎದುರು ಮತ್ತೊಬ್ಬ ಮಹಿಳೆಯ ಮೇಲೂ ಸರ ಕಳವಿಗೆ ವಿಫಲ ಯತ್ನ ನಡೆಸಿದ್ದಾರೆ.

ನಾಗೇಶ್ ಪ್ರಭು ಅವರು ತಮ್ಮ ಕಾರಿನಲ್ಲಿ ಕಳ್ಳರ ಹಿಂದೆ ಬರುವುದನ್ನು ಗಮನಿಸಿದ ದುಷ್ಕರ್ಮಿಗಳು, ಇಂದ್ರಪ್ರಸ್ಥ ವಿದ್ಯಾಲಯದ ಎದುರಿನ ರಸ್ತೆಯ ಮೂಲಕ ಉಪ್ಪಿನಂಗಡಿ ಪಟ್ಟಣದ ಕಡೆಗೆ ಅತಿವೇಗವಾಗಿ ಬೈಕ್ ಚಲಾಯಿಸಿಕೊಂಡು ಪರಾರಿಯಾಗಿದ್ದಾರೆ. ಕಳ್ಳರನ್ನು ಹಿಡಿಯಲು ಮುಂದಾದ ನಾಗೇಶ್ ಪ್ರಭು ಅವರ ಕಾರು ರಸ್ತೆ ದಟ್ಟಣೆಯಲ್ಲಿ (Traffic) ಸಿಲುಕಿಕೊಂಡಿತು. ಇದನ್ನು ಬಳಸಿಕೊಂಡ ಚೈನ್ ಸ್ನ್ಯಾಚರ್ಸ್‌ಗಳು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮೂಲಕ ಪರಾರಿಯಾಗುವಲ್ಲಿ ಯಶಸ್ವಿಯಾದರು.

Advertisement

ಇದನ್ನೂ ಓದಿ: ಅಸ್ಸಾಂನ ಕಾಜಿರಂಗಾ ಬಳಿ ಭೀಕರ ರಸ್ತೆ ಅಪಘಾತ: ಟ್ರಕ್-ಮಿನಿಬಸ್ ನಡುವೆ ಮುಖಾಮುಖಿ ಡಿಕ್ಕಿ; 23 ಮಂದಿ ಸಾವು

ಹೈಡ್ರಾಮಾ ಸೃಷ್ಟಿಸಿದ ಈ ಸಂಪೂರ್ಣ ಘಟನೆಯು ಆ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಈ ಕುರಿತು ಸಂತ್ರತ ಮಹಿಳೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.

Advertisement

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ