ತೆಹ್ರಾನ್: ಅಂತಾರಾಷ್ಟ್ರೀಯ ಜಲಪ್ರದೇಶದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಸ್ಫೋಟಕ ಹಂತ ತಲುಪಿದೆ. ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ (Submarine) ನಡೆಸಿದ ದಾಳಿಗೆ ಇರಾನ್‌ನ ಪ್ರಬಲ ಯುದ್ಧನೌಕೆ ‘ಐಆರ್‌ಐಎಸ್ ದೇನಾ’ (IRIS Dena) ಸಮುದ್ರಪಾಲಾಗಿದೆ. ಈ ಭೀಕರ ದಾಳಿಯಲ್ಲಿ ಕನಿಷ್ಠ 87 ಮಂದಿ ಇರಾನ್ ನೌಕಾಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮುಳುಗಡೆಯಾದ ಇರಾನ್‌ನ ಈ ಯುದ್ಧನೌಕೆಯು ಕೆಲವೇ ವಾರಗಳ ಹಿಂದೆ ಭಾರತದಲ್ಲಿ ನಡೆದ ನೌಕಾ ಸಮರಾಭ್ಯಾಸದಲ್ಲಿ ಭಾಗವಹಿಸಿತ್ತು. ಭಾರತದಿಂದ ಮರಳಿ ಇರಾನ್‌ಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಇರಾನ್ ಯುದ್ಧನೌಕೆಯನ್ನು ಹೊಡೆದುರುಳಿಸಿದ್ದು ತಾನೇ ಎಂದು ಅಮೆರಿಕದ ರಕ್ಷಣಾ ಇಲಾಖೆ ದೃಢಪಡಿಸಿದೆ. ಅಮೆರಿಕದ ರಕ್ಷಣಾ ಸಚಿವ ಪೀಟ್ ಹೆಗ್ಸೆತ್, “ಇದು ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕದ ಜಾಗತಿಕ ಶಕ್ತಿಗೆ ಸಾಕ್ಷಿ” ಎಂದು ಹೇಳಿಕೆ ನೀಡಿದ್ದಾರೆ.

ಇರಾನ್ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರದಿಂದಾಗಿ ಅಮೆರಿಕದ 500 ಯೋಧರು ಇರಾನ್‌ನ ಪ್ರತಿದಾಳಿಗೆ ಬಲಿಯಾಗಿದ್ದಾರೆ ಎಂದು ಇರಾನ್ ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿಕೊಂಡಿದೆ.ಈ ಘಟನೆಯಿಂದಾಗಿ ಹಿಂದೂ ಮಹಾಸಾಗರ ಮತ್ತು ಪರ್ಷಿಯನ್ ಕೊಲ್ಲಿಯಲ್ಲಿ ಯುದ್ಧದ ಭೀತಿ ಆವರಿಸಿದ್ದು, ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆ ಮತ್ತು ಹಡಗು ಸಂಚಾರದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

