ಧರ್ಮಶಾಲಾ : ಹಿಮಾಚಲ ಪ್ರದೇಶದ ಧರ್ಮಶಾಲಾದ ಸರ್ಕಾರಿ ಡಿಗ್ರಿ ಕಾಲೇಜಿನಲ್ಲಿ ನಡೆದ ಗಂಭೀರ ಘಟನೆಯಲ್ಲಿ, ದ್ವಿತೀಯ ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿದ ನಂತರ, ಮೂವರು ವಿದ್ಯಾರ್ಥಿನಿಯರು ಮತ್ತು ಒಬ್ಬ ಪ್ರಾಧ್ಯಾಪಕರ ವಿರುದ್ಧ ರ‍್ಯಾಗಿಂಗ್ ಹಾಗೂ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾವಿಗೆ ಮುನ್ನ ವಿದ್ಯಾರ್ಥಿನಿಯು ತನ್ನ ಅನುಭವಗಳನ್ನು ವಿವರಿಸುವ ಮೊಬೈಲ್ ವೀಡಿಯೊವನ್ನು ದಾಖಲಿಸಿದ್ದಳು. ಆ ವೀಡಿಯೊದಲ್ಲಿ, ಪ್ರಾಧ್ಯಾಪಕರು ಅಸಭ್ಯವಾಗಿ ಸ್ಪರ್ಶಿಸಿದ್ದು, ತರಗತಿಯಲ್ಲಿ ಮತ್ತು ಕಾಲೇಜು ಆವರಣದಲ್ಲಿ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಆಕೆ ಹೇಳಿದ್ದಾಳೆ.

ತಂದೆಯ ಪ್ರಕಾರ, ಪ್ರಾಧ್ಯಾಪಕರ ಅಸಭ್ಯ ವರ್ತನೆ ಮತ್ತು ಮಾನಸಿಕ ಕಿರುಕುಳದಿಂದ ಮಗಳು ತೀವ್ರ ಒತ್ತಡಕ್ಕೆ ಒಳಗಾಗಿ, ಆಕೆಯ ಆರೋಗ್ಯ ಕ್ರಮೇಣ ಹದಗೆಟ್ಟಿತು. ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಳಿಕ, ಡಿಸೆಂಬರ್ 26ರಂದು ಲುಧಿಯಾನಾದ ಡಿಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಕುಟುಂಬದವರು, ಮಗಳ ಸಾವಿನ ಶಾಕ್‌ನಿಂದಾಗಿ ತಕ್ಷಣ ದೂರು ನೀಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಆದರೆ, ಸಾವಿಗೆ ಮುನ್ನ ಮಗಳು ಮೊಬೈಲ್‌ನಲ್ಲಿ ದಾಖಲಿಸಿದ ವೀಡಿಯೊ ದೊರಕಿದ ನಂತರ, ದೂರು ದಾಖಲಿಸಲು ನಿರ್ಧರಿಸಿದರು. ತಂದೆಯ ಹೇಳಿಕೆಗೆ ಅನುಸಾರ, ಡಿಸೆಂಬರ್ 20ರಂದು ಅವರು ಪೊಲೀಸರು ಮತ್ತು ಮುಖ್ಯಮಂತ್ರಿ ಸಹಾಯವಾಣಿಗೆ ದೂರು ನೀಡಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂದು ತಿಳಿಸಿದ್ದಾರೆ.
ಪ್ರಕರಣದಿಂದ ಕಾಲೇಜು ಆಡಳಿತವು ಅಂತರ ಕಾಯ್ದುಕೊಂಡಿದೆ. ಕಾಲೇಜು ಪ್ರಾಂಶುಪಾಲ ರಾಕೇಶ್ ಪಠಾಣಿಯಾ ಅವರ ಪ್ರಕಾರ, ವಿದ್ಯಾರ್ಥಿನಿ ಮೊದಲ ವರ್ಷದಲ್ಲಿ ಅನುತ್ತೀರ್ಣಳಾಗಿದ್ದರೂ, ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆಯಲು ಯತ್ನಿಸಿದ್ದಳು. “ಆಕೆ ಮೊದಲ ವರ್ಷದಲ್ಲಿ ಮೂರು ವಿಷಯಗಳಲ್ಲಿ ಫೇಲ್ ಆಗಿದ್ದಾಳೆ. ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ದ್ವಿತೀಯ ವರ್ಷಕ್ಕೆ ಉತ್ತೀರ್ಣಗೊಳ್ಳಲು ಸಾಧ್ಯವಿರಲಿಲ್ಲ. ಆಕೆ ತನ್ನ ಮುಖ್ಯ ವಿಷಯವಾದ ಭೂಗೋಳಶಾಸ್ತ್ರ ಬೋಧಿಸುವ ಪ್ರಾಧ್ಯಾಪಕರನ್ನು ಸಂಪರ್ಕಿಸಿದ್ದಳು. ನಿಯಮಾನುಸಾರ ಮತ್ತೆ ಮೊದಲ ವರ್ಷಕ್ಕೆ ಪ್ರವೇಶ ಪಡೆಯಬೇಕೆಂದು ತಿಳಿಸಲಾಯಿತು. ಇದರಿಂದ ಆಕೆ ಮನನೊಂದುಕೊಂಡಿದ್ದಳು,” ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಪ್ರಾಧ್ಯಾಪಕರ ವಿರುದ್ಧದ ಕಿರುಕುಳ ಆರೋಪಗಳ ಬಗ್ಗೆ ಮಾತನಾಡುತ್ತಾ, “ಆ ಪ್ರಾಧ್ಯಾಪಕರು ಹಲವು ವರ್ಷಗಳಿಂದ ಬೋಧಿಸುತ್ತಿದ್ದಾರೆ. ಈ ವಿಷಯದಲ್ಲಿ ಹೆಚ್ಚಿನದನ್ನು ಹೇಳಲು ಇಚ್ಛಿಸುವುದಿಲ್ಲ. ಇದು ಪೊಲೀಸರ ತನಿಖೆಯ ವಿಷಯ,” ಎಂದು ಅವರು ಹೇಳಿ ಮೌನಕ್ಕೆ ಶರಣಾಗುತ್ತಾರೆ.

