ಹ್ಯಾನೋಯ್ : ವಿದೇಶಿ ಪ್ರವಾಸಕ್ಕೆಂದು ತೆರಳಿದ್ದ ಭಾರತೀಯ ಮೂಲದ ಪ್ರವಾಸಿಗರಿಗೆ ವಿಯೆಟ್ನಾಂನಲ್ಲಿ ಭೀಕರ ಜಲಗಂಡಾಂತರ ಎದುರಾಗಿದೆ. ವಿಯೆಟ್ನಾಂನ ಪ್ರಸಿದ್ಧ ‘ಫೂ ಕ್ವೋಕ್ ದ್ವೀಪ’ದ (Phu Quoc Island) ಬಳಿ ಶನಿವಾರದಂದು ಹಲವಾರು ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಸಮುದ್ರದಲ್ಲಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು (Boat Capsized)15 ಭಾರತೀಯ ಪ್ರವಾಸಿಗರು ದಾರುಣವಾಗಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. ಘಟನೆ ಸಂಭವಿಸಿದಾಗ ಬೋಟ್‌ನಲ್ಲಿ ಒಟ್ಟು 36 ಪ್ರವಾಸಿಗರು ಹಾಗೂ ಸಿಬ್ಬಂದಿ ಇದ್ದರು ಎನ್ನಲಾಗಿದೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಈ ಬೋಟ್‌ನಲ್ಲಿ 32 ಭಾರತೀಯ ಪ್ರವಾಸಿಗರು, ಮೂರು ಜನ ಬೋಟ್ ಸಿಬ್ಬಂದಿ ಹಾಗೂ ಒಬ್ಬ ಅಟೆಂಡೆಂಟ್ ಸೇರಿ ಒಟ್ಟು 36 ಜನರಿದ್ದರು. ಪ್ರವಾಸಿಗರಿದ್ದ ಈ ಬೋಟ್ ‘ಹಾನ್ ಮೇ ರುತ್ ನ್ಗೋಯ್’ ದ್ವೀಪದಿಂದ ಹೊರಟು ‘ಆನ್ ಥೋಯ್’ ಬಂದರಿನ ಕಡೆಗೆ ಸಾಗುತ್ತಿತ್ತು. ಈ ವೇಳೆ ಸಮುದ್ರದಲ್ಲಿ ದಿಢೀರನೆ ಭಾರಿ ಗಾಳಿ ಮತ್ತು ಭೀಕರ ಅಲೆಗಳ ಆರ್ಭಟ ಶುರುವಾಗಿದ್ದರಿಂದ, ಬೋಟ್ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡು ಮುಗುಚಿ ಬಿದ್ದಿದೆ. ಪರಿಣಾಮವಾಗಿ ಬೋಟ್‌ನಲ್ಲಿದ್ದ ಎಲ್ಲರೂ ನೀರಿಗೆ ಬಿದ್ದಿದ್ದಾರೆ.
ಇಲ್ಲಿದೆ ನೋಡಿ ಪೋಸ್ಟ್:
In a tragic incident, a boat carrying several Indian tourists has capsized near Phu Quoc Island in Vietnam a few hours ago.
Exact details of the incident are being ascertained as search and rescue operations by local authorities are ongoing.
In order to provide information…
— India in Vietnam (@AmbHanoi) July 11, 2026
ಸ್ಥಳೀಯ ರಕ್ಷಣಾ ಸಿಬ್ಬಂದಿ ತಕ್ಷಣವೇ ಜಂಟಿ ಕಾರ್ಯಾಚರಣೆ ನಡೆಸಿ ನೀರಿನಲ್ಲಿದ್ದ 21 ಜನರನ್ನು ಯಶಸ್ವಿಯಾಗಿ ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ದಾಖಲಾಗಿರುವವರ ಪೈಕಿ ಇಬ್ಬರ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇತ್ತ ಭಾರತೀಯ ರಾಯಭಾರ ಕಚೇರಿಯು (Indian Embassy) ಘಟನೆಯನ್ನು ಖಚಿತಪಡಿಸಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸದ್ಯ ಆ ಭಾಗದಲ್ಲಿ ತೀವ್ರ ಶೋಧ ಕಾರ್ಯ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಈ ಘಟನೆಯಲ್ಲಿ ಆಂಧ್ರಪ್ರದೇಶದ ಪ್ರವಾಸಿಗರೂ ಸಿಲುಕಿರುವ ಬಲವಾದ ಶಂಕೆ ವ್ಯಕ್ತವಾಗಿದೆ. ಈ ಕುರಿತು ತಕ್ಷಣವೇ ಕಾರ್ಯಪ್ರವೃತ್ತರಾಗಿರುವ ಆಂಧ್ರಪ್ರದೇಶದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ನಾರಾ ಲೋಕೇಶ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ನವದೆಹಲಿಯಲ್ಲಿರುವ ಎಪಿ ಭವನದ (AP Bhavan) ಅಧಿಕಾರಿಗಳು ಹಾಗೂ ರಾಜ್ಯ ಇಲಾಖೆಯಿಂದ ಸಂಪೂರ್ಣ ಮಾಹಿತಿಯನ್ನು ಕೋರಿದ್ದಾರೆ. ಸಂತ್ರಸ್ತರಿಗೆ ಮತ್ತು ಅವರ ಕುಟುಂಬಸ್ಥರಿಗೆ ಅಗತ್ಯವಿರುವ ಎಲ್ಲಾ ರೀತಿಯ ತುರ್ತು ನೆರವು ಹಾಗೂ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂತ್ರಸ್ತರ ಕುಟುಂಬಗಳಿಗೆ ನೆರವಾಗಲು ಎರಡು ಪ್ರಮುಖ ನಗರಗಳಲ್ಲಿ ತುರ್ತು ನಿಯಂತ್ರಣ ಕೊಠಡಿಗಳನ್ನು (Control Rooms) ತೆರೆದಿದ್ದು, ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ:
1. ಹೋ ಚಿ ಮಿನ್ ಸಿಟಿಯಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿ:
+84 36 281 7930
+84 91 552 37 14
+84 33 452 0414
2. ಹ್ಯಾನೋಯ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ:
+84 91 308 9165
ಘಟನೆಗೆ ಸಂಬಂಧಿಸಿದ ಯಾವುದೇ ಮಾಹಿತಿ, ವಿಚಾರಣೆ ಅಥವಾ ತಕ್ಷಣದ ವೈದ್ಯಕೀಯ ಮತ್ತು ಕಾನೂನು ಬೆಂಬಲಕ್ಕಾಗಿ ಈ ಮೇಲಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

