RCB ಮಾರಾಟದ ಬೆನ್ನಲ್ಲೇ ವಿಜಯ್ ಮಲ್ಯ ಭಾವುಕ ಪತ್ರ: 450 ಕೋಟಿಯ ಹೂಡಿಕೆ ಇಂದು 16,500 ಕೋಟಿ!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL) ಅತ್ಯಂತ ಜನಪ್ರಿಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹೊಸ ಮಾಲೀಕರ ತೆಕ್ಕೆಗೆ ಸೇರುತ್ತಿದ್ದಂತೆಯೇ, ತಂಡದ ಸಂಸ್ಥಾಪಕ ಮಾಲೀಕ ವಿಜಯ್ ಮಲ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ತಮ್ಮ ಹೂಡಿಕೆಯನ್ನು ಟೀಕಿಸಿದವರಿಗೆ ತಿರುಗೇಟು ನೀಡುವುದರ ಜೊತೆಗೆ, ಬೆಂಗಳೂರಿನ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. “ಆರ್​ಸಿಬಿಯ ಹೊಸ ಮಾಲೀಕರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಐಪಿಎಲ್‌ನ ಅತ್ಯಂತ ಮೌಲ್ಯಯುತ ಫ್ರಾಂಚೈಸಿಯೊಂದಿಗೆ ನಿಮ್ಮ ಪಯಣ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ” ಎಂದು ಬರೆದಿದ್ದಾರೆ.

“2008ರಲ್ಲಿ ನಾನು 450 ಕೋಟಿ ರೂಪಾಯಿಗೆ ಈ ತಂಡವನ್ನು ಖರೀದಿಸಿದಾಗ ಅನೇಕರು ನನ್ನನ್ನು ನೋಡಿ ನಕ್ಕಿದ್ದರು. ನನ್ನ ಹೂಡಿಕೆಯನ್ನು ವ್ಯರ್ಥ ಎಂದು ಟೀಕಿಸಿದ್ದರು. ಆದರೆ ಇಂದು ನನ್ನ 450 ಕೋಟಿಯ ಹೂಡಿಕೆ 16,500 ಕೋಟಿ ರೂಪಾಯಿಗಳಿಗೆ ಬೆಳೆದಿರುವುದನ್ನು ನೋಡಿ ನನಗೆ ಅಪಾರ ತೃಪ್ತಿ ತಂದಿದೆ” ಎಂದಿದ್ದಾರೆ. “ರಾಯಲ್ ಚಾಲೆಂಜ್ ಬ್ರ್ಯಾಂಡ್ ಅನ್ನು ಕಟ್ಟುವ ಉದ್ದೇಶದಿಂದಲೇ ನಾನು ಈ ತಂಡಕ್ಕೆ RCB ಎಂದು ಹೆಸರಿಟ್ಟಿದ್ದೆ. ಇದು ಯಾವಾಗಲೂ ನನ್ನ ಡಿಎನ್ಎ (DNA) ಭಾಗವಾಗಿ ಉಳಿಯಲಿದೆ” ಎಂದು ಮಲ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಭಾರತ-ದಕ್ಷಿಣ ಆಫ್ರಿಕಾ ವನಿತೆಯರ ಟಿ20 ಸರಣಿ ವೇಳಾಪಟ್ಟಿ ಪ್ರಕಟ; ತಂಡದಲ್ಲಿ ಇಬ್ಬರು ಹೊಸಬರಿಗೆ ಅವಕಾಶ!

ಅಂದು ಯುವ ಆಟಗಾರನಾಗಿದ್ದ ವಿರಾಟ್ ಕೊಹ್ಲಿಯನ್ನು ತಂಡಕ್ಕೆ ಆಯ್ಕೆ ಮಾಡಿದ್ದನ್ನು ಮಲ್ಯ ವಿಶೇಷವಾಗಿ ಸ್ಮರಿಸಿದ್ದಾರೆ. “ಅಂದು ನಾನು ಆಯ್ಕೆ ಮಾಡಿದ್ದ ಯುವ ವಿರಾಟ್ ಕೊಹ್ಲಿ ಇಂದು ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ ಎಂಬುದು ಹೆಮ್ಮೆಯ ವಿಷಯ” ಎಂದು ಬಣ್ಣಿಸಿದ್ದಾರೆ. “ನನ್ನ ಅವಧಿಯಲ್ಲಿ ಮತ್ತು ನಂತರವೂ ತಂಡವನ್ನು ಬೆಂಬಲಿಸಿದ ಎಲ್ಲಾ ಆರ್​ಸಿಬಿ ಅಭಿಮಾನಿಗಳಿಗೆ ಧನ್ಯವಾದಗಳು. ಬೆಂಗಳೂರಿನ ಸಿಂಹದಂತಿರುವ (Lion of Bengaluru) ಈ ತಂಡವನ್ನು ಹೀಗೆಯೇ ಬೆಂಬಲಿಸಿ. ನಮಸ್ಕಾರ” ಎಂದು ಪತ್ರ ಮುಕ್ತಾಯಗೊಳಿಸಿದ್ದಾರೆ.

ಕ್ರಿಕೆಟ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ