ಐಚಿ-ನಗೋಯ : ಜಪಾನ್ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್ ವಿತ್ಯಾ ರಾಮ್ರಾಜ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳೆಯರ 400 ಮೀಟರ್ ಹರ್ಡಲ್ಸ್ (ತಡೆ ಓಟ) ಸ್ಪರ್ಧೆಯಲ್ಲಿ ಭರ್ಜರಿ ಪ್ರದರ್ಶನ ನೀಡಿದ ವಿತ್ಯಾ, ಭಾರತದ ಜಲಪರಿ, ದಿಗ್ಗಜ ಅಥ್ಲೀಟ್ ಪಿ.ಟಿ. ಉಷಾ ಹೆಸರಲ್ಲಿದ್ದ ಬರೋಬ್ಬರಿ 42 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿದು ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ವಿತ್ಯಾ ರಾಮ್ರಾಜ್ 54.75 ಸೆಕೆಂಡ್ಗಳಲ್ಲಿ ಗುರಿ ತಲುಪಿ ತಮ್ಮ ವೈಯಕ್ತಿಕ ಸಾರ್ವಕಾಲಿಕ ಶ್ರೇಷ್ಠ ಸಮಯವನ್ನು ದಾಖಲಿಸಿದರು.
ಭಾರತದ ಕ್ರೀಡಾ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಿದ್ದ ಈ ದಾಖಲೆಯನ್ನು ಪಿ.ಟಿ. ಉಷಾ ಅವರು 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಬರೆದಿದ್ದರು. ಅಂದು ಉಷಾ 55.42 ಸೆಕೆಂಡ್ಗಳಲ್ಲಿ ಗುರಿ ತಲುಪಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಾರಿಂದಲೂ ಮುರಿಯಲಾಗದಿದ್ದ ಈ ಐತಿಹಾಸಿಕ ಸಾಧನೆಯನ್ನು ಇದೀಗ ತಮಿಳುನಾಡಿನ ಯುವ ಅಥ್ಲೀಟ್ ವಿತ್ಯಾ ಧೂಳೀಪಟ ಮಾಡಿದ್ದಾರೆ. ಸ್ಪರ್ಧೆಯಲ್ಲಿ ಯುಎಇ (UAE) ದೇಶದ ಮರಿಯಮ್ ಕರೀಮ್ 54.31 ಸೆಕೆಂಡ್ಗಳಲ್ಲಿ ಗುರಿ ತಲುಪಿ ಏಷ್ಯನ್ ಗೇಮ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರೆ, ಕಜಕಿಸ್ತಾನದ ಅಡೆಲಿನಾ ಝೆಮ್ಸ್ (54.58 ಸೆಕೆಂಡ್) ಬೆಳ್ಳಿ ಪದಕ ಪಡೆದರು. ರೇಸ್ನಲ್ಲಿದ್ದ ಮತ್ತೊಬ್ಬ ಭಾರತೀಯ ಅಥ್ಲೀಟ್ ಅನು ರಾಘವನ್ 55.88 ಸೆಕೆಂಡ್ಗಳಲ್ಲಿ ಗುರಿ ತಲುಪಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
Congratulations Vithya!!
Records are meant to be broken & there is no greater reward for an athlete than to see the next generation go beyond the boundaries we once set. Vithya Ramraj breaking my 43-year-old national record in the 400m hurdles is an incredibly special moment. pic.twitter.com/zkmgDjvMfY— P.T. USHA (@PTUshaOfficial) September 28, 2026
ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ (IOA) ಅಧ್ಯಕ್ಷೆಯಾಗಿ ಪ್ರಸ್ತುತ ಜಪಾನ್ನಲ್ಲಿರುವ ಪಿ.ಟಿ. ಉಷಾ, ವಿತ್ಯಾ ಅವರ ಈ ಮಹತ್ತರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ (X) ಅಭಿನಂದನೆ ಸಲ್ಲಿಸಿರುವ ಅವರು, “ಅಭಿನಂದನೆಗಳು ವಿತ್ಯಾ! ದಾಖಲೆಗಳು ಇರುವುದೇ ಮುರಿಯುವುದಕ್ಕೆ. ನಾವು ಒಮ್ಮೆ ನಿರ್ಮಿಸಿದ ಗಡಿಗಳನ್ನು ದಾಟಿ ಮುಂದಿನ ಪೀಳಿಗೆಯ ಅಥ್ಲೀಟ್ಗಳು ಸಾಧನೆ ಮಾಡುವುದನ್ನು ನೋಡುವುದಕ್ಕಿಂತ ದೊಡ್ಡ ಸಂತೋಷ ಮತ್ತೊಂದಿಲ್ಲ. 400 ಮೀಟರ್ ಹರ್ಡಲ್ಸ್ನಲ್ಲಿ ನನ್ನ 42 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು ವಿತ್ಯಾ ಮುರಿದಿರುವುದು ಅತ್ಯಂತ ವಿಶೇಷ ಹಾಗೂ ಹೆಮ್ಮೆಯ ಕ್ಷಣ.” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಾಕಿ ‘ಇ-ಚಲನ್’ ಟ್ರಾಫಿಕ್ ದಂಡ ಕಟ್ಟುವುದು ಇನ್ಮುಂದೆ ಕಡ್ಡಾಯ: ದಂಡವನ್ನು ವಿದ್ಯುತ್ ಬಿಲ್ ಜೊತೆ ಲಿಂಕ್ ಮಾಡಲು ಸುಪ್ರೀಂ ಕೋರ್ಟ್ ಸೂಚನೆ
“ದಾಖಲೆಯೊಂದರ ನಿಜವಾದ ಪರಂಪರೆ ಎಂದರೆ ಅದು ಎಷ್ಟು ವರ್ಷ ಕಾಯ್ದುಕೊಂಡಿದೆ ಎಂಬುದಲ್ಲ, ಬದಲಿಗೆ ಅದು ಮುಂದಿನ ಪೀಳಿಗೆಯ ಕ್ರೀಡಾಪಟುಗಳಿಗೆ ಅದನ್ನೂ ಮೀರಲು ಹೇಗೆ ಪ್ರೇರಣೆಯಾಗುತ್ತದೆ ಎಂಬುದು. ಕ್ರೀಡೆಯ ಬೆಳವಣಿಗೆಗೆ ಇದು ಅತ್ಯಗತ್ಯ.” ಎಂದು ಟಿ. ಉಷಾ ಹೇಳಿದ್ದಾರೆ. ಮಹಿಳೆಯರ 400 ಮೀಟರ್ ಹರ್ಡಲ್ಸ್ನಲ್ಲಿ ಗಳಿಸಿದ ಈ ಕಂಚಿನ ಪದಕವು, ಪ್ರಸ್ತುತ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ವಿತ್ಯಾ ರಾಮ್ರಾಜ್ ಅವರ ಎರಡನೇ ಪದಕವಾಗಿದೆ. ಇದಕ್ಕೂ ಮುನ್ನ ಅವರು ಭಾರತದ ‘ಮಿಶ್ರ 4×400 ಮೀಟರ್ ರಿಲೇ’ (Mixed 4x400m Relay) ತಂಡದ ಭಾಗವಾಗಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ತಮ್ಮ ಕಠಿಣ ಪರಿಶ್ರಮ ಹಾಗೂ ನಿರಂತರ ಶ್ರಮದಿಂದ ಭಾರತದ ಅಥ್ಲೆಟಿಕ್ಸ್ ರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ವಿತ್ಯಾಗೆ ದೇಶಾದ್ಯಂತ ಕ್ರೀಡಾಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

