ಪುತ್ತೂರು ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ 7ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಘಟಕವಾಗಿರುವ ಪುತ್ತೂರಿನ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ 7ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಅತ್ಯಂತ ಸಂಭ್ರಮದಿಂದ ನಡೆಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ತೆಂಕಿಲದ ನರೇಂದ್ರ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರಸಾದ ಶಾನುಭಾಗ್, “ವಿದ್ಯಾರ್ಥಿಗಳನ್ನು ಓದಿನ ಕಡೆಗೆ ಹೆಚ್ಚು ಆಸಕ್ತಿವಹಿಸುವಂತೆ ಮಾಡುವುದು ಶಿಕ್ಷಕರ ಮುಂದಿರುವ ದೊಡ್ಡ ಸವಾಲಾಗಿದೆ” ಎಂದು ಅಭಿಪ್ರಾಯಪಟ್ಟರು.

Advertisement

“ಮಕ್ಕಳಿಗೆ ಐದು ವರ್ಷ ತುಂಬುವವರೆಗೆ ಪ್ರೀತಿ, ಕಾಳಜಿಯಿಂದ ಬೆಳೆಸಿ”: ಪ್ರಸಾದ ಶಾನುಭಾಗ್:

“ವಾರ್ಷಿಕೋತ್ಸವ ಮತ್ತು ಕ್ರೀಡೋತ್ಸವಗಳಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಸಿದ್ಧತೆ ನಡೆಸುತ್ತಾರೆ. ಆದರೆ ಶೈಕ್ಷಣಿಕ ವಿಚಾರಗಳಿಗೆ ಬಂದಾಗ ಅಷ್ಟೇ ಆಸಕ್ತಿ ತೋರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸುವ ಅಗತ್ಯವಿದೆ.”

Advertisement

“ಮಕ್ಕಳಿಗೆ ಐದು ವರ್ಷ ತುಂಬುವವರೆಗೆ ಪೋಷಕರು ಹೆಚ್ಚಿನ ಪ್ರೀತಿ ಮತ್ತು ಕಾಳಜಿಯಿಂದ ಬೆಳೆಸಬೇಕು. ಇಂದಿನ ಪರಿಸ್ಥಿತಿಯಲ್ಲಿ ಪೋಷಕರು ಮಕ್ಕಳಿಗಾಗಿ ಸಮಯ ಮೀಸಲಿಡುವುದು ಅತ್ಯಗತ್ಯ; ಅವರೊಂದಿಗೆ ಹೆಚ್ಚಿನ ಸಮಯ ಕಳೆಯುವುದರಿಂದ ಮೊಬೈಲ್ ವ್ಯಸನದಿಂದ ದೂರವಿಡಬಹುದು. ಮಕ್ಕಳಿಗೆ ಸಾಧ್ಯವಾದಷ್ಟು ಆಟವಾಡಲು ಅವಕಾಶ ನೀಡಿದರೆ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತದೆ” ಎಂದು ಹೇಳಿದ ಅವರು, ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನಲ್ಲಿ ಶಿಕ್ಷಣದ ಜೊತೆಗೆ ನೈತಿಕ ಹಾಗೂ ಧಾರ್ಮಿಕ ಶಿಕ್ಷಣ ನೀಡುತ್ತಿರುವುದನ್ನು ಶ್ಲಾಘಿಸಿದರು.

ಇದನ್ನೂ ಓದಿ:ಮತ್ತೊಂದು ಇತಿಹಾಸ ಬರೆದ ವೈಭವ್ ಸೂರ್ಯವಂಶಿ: ಯುಎಇ ವಿರುದ್ಧ 52 ಬಾಲ್‌ಗೆ ದ್ವಿಶತಕ, 53 ಎಸೆತಗಳಲ್ಲಿ 204 ರನ್

Advertisement

ಎಐ ತಂತ್ರಜ್ಞಾನ, ಜೆನ್-ಝೀ ಪೀಳಿಗೆ ಮತ್ತು ಸವಾಲು ಎದುರಿಸುವ ಕಲೆ: ಗಣ್ಯರ ನುಡಿ:

 ಮುಖ್ಯ ಅತಿಥಿಯಾಗಿದ್ದ ವಿವೇಕಾನಂದ ಪಿಯು ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಹರೀಶ್ ಶಾಸ್ತ್ರೀ ಬಿ. ಮಾತನಾಡಿ, “ಮಕ್ಕಳಿಗೆ ಕಷ್ಟವಾಗಬಾರದೆಂದು ಎಲ್ಲವನ್ನೂ ಪೋಷಕರೇ ಮಾಡಿಕೊಟ್ಟರೆ ಮುಂದೆ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಯುವುದಿಲ್ಲ. ಕಂಪ್ಯೂಟರ್ ಬಂದಾಗ ಮನುಷ್ಯರ ಪಾತ್ರವೇ ಇಲ್ಲವಾಗುತ್ತದೆ ಎನ್ನಲಾಗಿತ್ತು, ಈಗ ಕೃತಕ ಬುದ್ಧಿಮತ್ತೆ (AI) ಬಂದಾಗಲೂ ಅದೇ ಚರ್ಚೆಯಾಗುತ್ತಿದೆ. ಆದರೆ ಯಾವುದೇ ತಂತ್ರಜ್ಞಾನ ಬಂದರೂ ಮನುಷ್ಯನಿಗೆ ತನ್ನದೇ ಆದ ಮೌಲ್ಯವಿರುತ್ತದೆ. ಇಂದಿನ ಜೆನ್ ಝೀ (Gen-Z) ಪೀಳಿಗೆಯವರು ಪ್ರಶ್ನಿಸುವುದರ ಜೊತೆಗೆ ಕಾರ್ಯಪ್ರವೃತ್ತರಾಗುವ ಮನೋಭಾವ ಬೆಳೆಸಿಕೊಳ್ಳಬೇಕು. ಪಾಕೆಟ್ ಮನಿಯನ್ನು ಉಳಿಸಿ ಬಡ ವಿದ್ಯಾರ್ಥಿಗಳ ಶುಲ್ಕ ಪಾವತಿಸಲು ನೆರವಾಗುವಂತಹ ಸೇವಾ ಮನೋಭಾವ ಬೆಳೆಯಬೇಕು” ಎಂದರು.

ಫಸ್ಟ್ ಬೈಟ್ ಫಾಸ್ಟ್‌ನ ಸಹಸಂಸ್ಥಾಪಕ ಹಾಗೂ ಸಿಇಒ ಸ್ವಸ್ತಿಕ್ ಪದ್ಮ ಮಾತನಾಡಿ, ತಮ್ಮ ಬೆಳವಣಿಗೆಯಲ್ಲಿ ಈ ಶಾಲೆಯ ಶಿಕ್ಷಕರ ಪ್ರೋತ್ಸಾಹ ಮಹತ್ವದ್ದಾಗಿದ್ದು, ಸಂಶೋಧನೆ ಮತ್ತು ಸ್ಟಾರ್ಟ್‌ಅಪ್ ಕ್ಷೇತ್ರಗಳಲ್ಲಿ ವೈಫಲ್ಯಗಳಿಗೆ ಕುಗ್ಗದೆ ಸವಾಲು ಎದುರಿಸಬೇಕು ಎಂದರು.

ಶಾಲಾ ಸಂಚಿಕೆ ‘ಪ್ರೇರಣ’ ಬಿಡುಗಡೆಗೊಳಿಸಿ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ರವೀಂದ್ರ ಪಿ. ಮಾತನಾಡಿ, “ಮೊಬೈಲ್ ಚಾಳಿಯಿಂದ ಮಕ್ಕಳನ್ನು ದೂರವಿಡಲು ಪೋಷಕರು ಕಾಲಕ್ಕೆ ತಕ್ಕಂತೆ ಬದಲಾಗಿ ಉತ್ತಮ ವಿಷಯಗಳತ್ತ ಮಾರ್ಗದರ್ಶನ ನೀಡಬೇಕು. ಶಿಕ್ಷಣವೇ ಸಂಸ್ಕಾರ ಎಂಬ ಆಶಯದೊಂದಿಗೆ ನಮ್ಮ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ” ಎಂದರು.

ವಾರ್ಷಿಕ ವರದಿ ಮಂಡನೆ & ಸಾಂಸ್ಕೃತಿಕ ವೈಭವ:

ಕರೆಸ್ಪಾಂಡೆಂಟ್ ರವಿನಾರಾಯಣ ಎಂ. ಮಾತನಾಡಿ, ರಾಷ್ಟ್ರೀಯ ಚಿಂತನೆಯ ಆಧಾರದಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಪೋಷಕರ ನಿರೀಕ್ಷೆ ಮತ್ತು ಮಕ್ಕಳ ಅಗತ್ಯಗಳನ್ನು ಪೂರೈಸಲು ಬದ್ಧವಾಗಿದೆ ಎಂದರು. ಪ್ರಾಂಶುಪಾಲೆ ಸಿಂಧು ವಿ.ಎಸ್. ವಾರ್ಷಿಕ ವರದಿ ಮಂಡಿಸಿದರು.

ಆಡಳಿತ ಮಂಡಳಿ ಅಧ್ಯಕ್ಷ ವಿಷ್ಣುಪ್ರಸಾದ್ ಸಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಶ್ರೀದೇವಿ ಕೆ. ಹೆಗ್ಡೆ ವಂದಿಸಿದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಸುಜಾತ, ಹೆಡ್ ಬಾಯ್ ಅಜೇಯ ಸಚಿನ್ ಅಚ್ಚಲ್ಲಿ, ಹೆಡ್ ಗರ್ಲ್ ಸೃಷ್ಟಿ ಎಂ. ಸಾಲಿಯಾನ್ ಉಪಸ್ಥಿತರಿದ್ದರು. ಅವನಿ, ವೇದಿಕ ತಂಡ ಪ್ರಾರ್ಥಿಸಿದರೆ, ವಿದ್ಯಾರ್ಥಿಗಳಾದ ಸೃಷ್ಟಿ ಎ. ಮತ್ತು ಭಾರವಿ ಕೆ. ಭಟ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಧಾರ್ಮಿಕ ಶಿಕ್ಷಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿದ್ಯಾಭಾರತಿ ಸ್ಪರ್ಧೆ- ಗೆದ್ದವರಿಗೆ ಸನ್ಮಾನ

ವಿದ್ಯಾ ಭಾರತಿ ನ್ಯಾಷನಲ್ ಲೆವೆಲ್ ಸ್ವಿಮ್ಮಿಂಗ್ ಕಾಂಪಿಟಿಷನ್‌ನಲ್ಲಿ ಎಸ್‌ಜಿಎಫ್‌ಐಗೆ ಆಯ್ಕೆಯಾದ ಲಾಸ್ಯ ಕಿಶನ್ ಮತ್ತು ಚೆಸ್ ಸ್ಪರ್ಧೆಯಲ್ಲಿ ಎಸ್‌ಜಿಎಫ್‌ಐಗೆ ಆಯ್ಕೆಯಾದ ಸಾನಿಧ್ಯ ಎಸ್. ರಾವ್ ಅವರನ್ನು ಸನ್ಮಾನಿಸಲಾಯಿತು. ಗಣಿತ ವಿಜ್ಞಾನ ಮೇಳದ ಅಂಗವಾಗಿ ನಡೆದ ದಕ್ಷಿಣ ಮಧ್ಯ ವಲಯ ಮಟ್ಟದ ಹಾಗೂ ರಾಜ್ಯಮಟ್ಟದ ವಿದ್ಯಾಭಾರತಿ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿಜಯವಾಡದ ನೂತಕ್ಕಿಯಲ್ಲಿ ನಡೆದ ದಕ್ಷಿಣ ಮಧ್ಯ ವಲಯ ಮಟ್ಟದ ಗಣಿತ ಪ್ರಯೋಗ ಸ್ಪರ್ಧೆಯಲ್ಲಿ ರವಿಪ್ರಕಾಶ್ ಕೆ. ಮತ್ತು ವಿಜಯ ಸರಸ್ವತಿ ಬಿ. ದಂಪತಿಯ ಪುತ್ರ ಭಾರವಿ ಕೆ. ಭಟ್ ಅವರು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಬಳ್ಳಾರಿಯಲ್ಲಿ ನಡೆದ ರಾಜ್ಯಮಟ್ಟದ ವಿದ್ಯಾಭಾರತಿ ವೈದಿಕ ಗಣಿತ ರಸಪ್ರಶ್ನೆ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ. ತಂಡದ ಸದಸ್ಯರು: ಟಿ. ಪ್ರಥಮ್ ರಾವ್ (ಮುರಳೀಧರ ರಾವ್ ಮತ್ತು ಅಮಿತಾ ರಾವ್ ದಂಪತಿಯ ಪುತ್ರ), ಮನ್ವಿತ್ ಶಂಕರ್ ಯು. (ಸತ್ಯಶಂಕರ್ ಎಂ. ಮತ್ತು ವಿಜಯಲಕ್ಷ್ಮಿ ಕೆ. ದಂಪತಿ ಪುತ್ರ), ಚಿಂತನ ಶೆಟ್ಟಿ (ಹರೀಶ್ ಶೆಟ್ಟಿ ಮತ್ತು ಬಬಿತಾ ಶೆಟ್ಟಿ ದಂಪತಿ ಪುತ್ರ).

ಎಫ್‌ಜಿಸಿ ನ್ಯಾಷನಲ್ಸ್- ಭಾರತೀಯ ಯಂತ್ರ ಖೇಲ್ ಮಹೋತ್ಸವ: ಭಾರತ ಸರ್ಕಾರದ ಅಟಲ್ ಇನ್ನೋವೇಶನ್ ಮಿಷನ್ ಹಾಗೂ ಅಟಲ್ ಟಿಂಕರಿಂಗ್ ಲ್ಯಾಬ್ ಸಹಯೋಗದಲ್ಲಿ Sಖಿಇಒ ಶಿಕ್ಷಣದಡಿ ನೀಡಲಾಗುವ ಪ್ರತಿಷ್ಠಿತ ಕಲ್ಪನಾ ಚಾವ್ಲಾ ಧೈರ್ಯಶಾಲಿ ಸಾಧನೆ ಪ್ರಶಸ್ತಿ ವಿಜೇತರಾದ ಮೇಧಾ ಭಟ್, ಮಾನ್ವಿ ಕಜೆ, ಆರಾಧನಾ ಬಿ., ಪ್ರಣಮ್ಯ ಜೆ., ಸುದೀಕ್ಷಾ ಎಸ್. ಭಟ್ ಅವರನ್ನು ಗೌರವಿಸಲಾಯಿತು.

ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಕೂಲೆಸ್ಟ್ ಪ್ರಾಜೆಕ್ಟ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡು ರಾಷ್ಟ್ರಮಟ್ಟದ ಬೆಸ್ಟ್ ಫೇವರಿಟ್ ಪ್ರಶಸ್ತಿ ವಿಜೇತರಾಗಿ ಏಷ್ಯಾ ವಲಯದ ಟೆಕ್ನೊವೇಶನ್ ಗರ್ಲ್ಸ್ ಸ್ಪರ್ಧೆಯಲ್ಲಿ ಸೆಮಿಫೈನಲಿಸ್ಟ್‌ಗಳಾಗಿಯೂ ಆಯ್ಕೆಯಾಗಿರುವ ಸೃಷ್ಟಿ ಎಂ. ಸಾಲ್ಯಾನ್ ಮತ್ತು ಶ್ರಾವಣಿ ಪಿ. ಎಲ್ ಅವರನ್ನು ಗೌರವಿಸಲಾಯಿತು. ಅಲ್ಲದೆ, ಸ್ಕೌಟ್ ಮತ್ತು ಗೈಡ್ ರಾಜ್ಯ ಪುರಸ್ಕೃತರನ್ನು ಗೌರವಿಸಲಾಯಿತು. ಸಿಬಿಎಸ್‌ಇ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ