ಉತ್ತರ ಪ್ರದೇಶ ಚುನಾವಣೆಗೆ ಸಮಾಜವಾದಿ ಪಕ್ಷದ ಪ್ರಣಾಳಿಕೆ ಬಿಡುಗಡೆ: 25 ಲಕ್ಷ ಸರ್ಕಾರಿ ಉದ್ಯೋಗ, ಪದವೀಧರರಿಗೆ 5,000 ಭತ್ಯೆ ಮಹಿಳೆಯರಿಗೆ ವಾರ್ಷಿಕ 40,000 ರೂ.

ಲಕ್ನೋ: ಮುಂಬರುವ ಫೆಬ್ರವರಿ ವೇಳೆಗೆ ನಡೆಯಲಿರುವ 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ (SP) ತನ್ನ ಚುನಾವಣಾ ಪ್ರಣಾಳಿಕೆಯನ್ನು ಗುರುವಾರ (ನವೆಂಬರ್ 26) ಬಿಡುಗಡೆ ಮಾಡಿದೆ. ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಲಕ್ನೋದಲ್ಲಿ ಪ್ರಣಾಳಿಕೆ ಬಿಡುಗಡೆಗೊಳಿಸಿ, ರಾಜ್ಯದಲ್ಲಿ 25 ಲಕ್ಷ ಸರ್ಕಾರಿ ಉದ್ಯೋಗಗಳು, ಪದವೀಧರರಿಗೆ ಮಾಸಿಕ ₹5,000 ನಿರುದ್ಯೋಗ ಭತ್ಯೆ ಹಾಗೂ ಮಹಿಳೆಯರಿಗೆ ವಾರ್ಷಿಕ ₹40,000 ಆರ್ಥಿಕ ನೆರವು ಸೇರಿದಂತೆ ಹಲವು ಮಹತ್ವದ ಭರವಸೆಗಳನ್ನು ಘೋಷಿಸಿದ್ದಾರೆ.

“ಅಚ್ಛೇ ದಿನ್ ಬರಲೇ ಇಲ್ಲ, ಬುರೇ ದಿನ್ ಮುಗಿಯಲಿದೆ”: ಬಿಜೆಪಿಗೆ ಅಖಿಲೇಶ್ ತಿರುಗೇಟು:

Advertisement

ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಜೆಪಿಯ 2014ರ ‘ಅಚ್ಛೇ ದಿನ್’ ಘೋಷಣೆಯನ್ನು ವ್ಯಂಗ್ಯವಾಡಿದ ಅಖಿಲೇಶ್ ಯಾದವ್, “ಅಚ್ಛೇ ದಿನ್ ಬರಲೇ ಇಲ್ಲ, ಆದರೆ ಈಗ ಬುರೇ ದಿನ್ (ಕೆಟ್ಟ ದಿನಗಳು) ಕೊನೆಗೊಳ್ಳಲಿವೆ. ಜೆನ್-ಝಿ ಮತ್ತು ಜೆನ್ ಆಲ್ಫಾ ಯುವಜನರ ಆಕಾಂಕ್ಷೆಗಳನ್ನು ಈಡೇರಿಸುವುದು ನಮ್ಮ ಬದ್ಧತೆಯ ಭಾಗವಾಗಿರಲಿದೆ” ಎಂದರು.

ಯುವಕರು, ಮಹಿಳೆಯರು, ರೈತರು ಹಾಗೂ ಹಿಂದುಳಿದ ವರ್ಗಗಳನ್ನು ಕೇಂದ್ರೀಕರಿಸಿ ಈ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ವಿಶೇಷವಾಗಿ ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಸಾಮಾಜಿಕ ಮೈತ್ರಿಯನ್ನು ಗಮನದಲ್ಲಿಟ್ಟುಕೊಂಡು, ₹50 ಕೋಟಿ ವರೆಗಿನ ಸರ್ಕಾರಿ ಗುತ್ತಿಗೆಗಳಲ್ಲಿ ಪಿಡಿಎ ವರ್ಗಗಳಿಗೆ ಶೇ. 50ರಷ್ಟು ಮೀಸಲಾತಿ ನೀಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.

Advertisement

ಸಮಾಜವಾದಿ ಪಕ್ಷದ ಪ್ರಣಾಳಿಕೆಯ ಪ್ರಮುಖ ಘೋಷಣೆಗಳು:

25 ಲಕ್ಷ ಸರ್ಕಾರಿ ಉದ್ಯೋಗ ಸೃಷ್ಟಿ, ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ ₹5,000 ಭತ್ಯೆ, ಮಹಿಳೆಯರಿಗೆ ವರ್ಷಕ್ಕೆ ₹40,000, ಹಳೆ ಪಿಂಚಣಿ ಯೋಜನೆ (OPS) ಮರುಜಾರಿ ಹಾಗೂ ಪ್ರತಿಷ್ಠಿತ ಯಶ್ ಭಾರತಿ ರಾಜ್ಯ ಪ್ರಶಸ್ತಿಯನ್ನು ಪುನಃ ಆರಂಭಿಸುವ ಭರವಸೆ ನೀಡಲಾಗಿದೆ. ಉಚಿತ ಶಾಲಾ ಶಿಕ್ಷಣ, ಮುಚ್ಚಲ್ಪಟ್ಟಿರುವ ಪ್ರಾಥಮಿಕ ಶಾಲೆಗಳ ಪುನರಾರಂಭ, ಗುತ್ತಿಗೆ ಶಿಕ್ಷಕರಾದ ಶಿಕ್ಷಾ ಮಿತ್ರರಿಗೆ ವೇತನ ಹೆಚ್ಚಳ ಮತ್ತು ಕಾಯಂ ಉದ್ಯೋಗ ನೀಡುವುದಾಗಿ ತಿಳಿಸಲಾಗಿದೆ. ಜೊತೆಗೆ ವೈ-ಫೈ (Wi-Fi), ಬೀದಿದೀಪ, ನಿರಂತರ ವಿದ್ಯುತ್ ಮತ್ತು ಪಕ್ಕಾ ರಸ್ತೆಗಳನ್ನು ಒಳಗೊಂಡ “ಹೊಸ ಗ್ರಾಮ” (New Villages) ನಿರ್ಮಾಣದ ಭರವಸೆ ನೀಡಲಾಗಿದೆ.

Advertisement

ಉಚಿತ ಆರೋಗ್ಯ ಸೇವೆ ಮತ್ತು ಆಂಬ್ಯುಲೆನ್ಸ್ ಸೌಲಭ್ಯ, ಪೊಲೀಸ್ ವ್ಯವಸ್ಥೆಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ತಂತ್ರಜ್ಞಾನ ಬಳಕೆ, ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಹಾಗೂ ತ್ವರಿತ ನ್ಯಾಯಕ್ಕಾಗಿ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳ ಸ್ಥಾಪನೆಯನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ರಾಜ್ಯಮಟ್ಟದ ಪ್ರಣಾಳಿಕೆಯ ಜೊತೆಗೆ ಪ್ರತಿ ಜಿಲ್ಲೆಗೆ, ನಗರಗಳಿಗೆ ಹಾಗೂ ‘ಆಧಿ ಆಬಾದಿ’ (ಮಹಿಳೆಯರಿಗಾಗಿ) ಪ್ರತ್ಯೇಕ ಪ್ರಣಾಳಿಕೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅಖಿಲೇಶ್ ತಿಳಿಸಿದರು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೀಕರ ಅಪಘಾತ: ಕುದಿಯುವ ಬೆಲ್ಲದ ಕೊಪ್ಪರಿಗೆಗೆ ಬಿದ್ದು ಉತ್ತರ ಪ್ರದೇಶದ ಯುವಕ ದಾರುಣ ಸಾವು

ಸಂವಿಧಾನ ದಿನದ ಸಂದೇಶ; ಕಾಂಗ್ರೆಸ್ ಜೊತೆಗಿನ ಸೀಟು ಹಂಚಿಕೆ ಗೊಂದಲದ ನಡುವೆಯೇ ಪ್ರಣಾಳಿಕೆ:

2012-17ರ ತಮ್ಮ ಸರ್ಕಾರದ ಅವಧಿಯಲ್ಲಿ ಲಕ್ನೋಗೆ HCL ತಂದಿದ್ದು, ಐಟಿ ಸಿಟಿ, ವಿಶ್ವದರ್ಜೆಯ ಕ್ರೀಡಾಂಗಣ, ಮೇದಾಂತ ಆಸ್ಪತ್ರೆ, ಲುಲು ಮಾಲ್ ಮತ್ತು ರಿವರ್‌ಫ್ರಂಟ್ ನಿರ್ಮಿಸಿದ್ದನ್ನು ಸ್ಮರಿಸಿದ ಅಖಿಲೇಶ್, ಪ್ರಣಾಳಿಕೆಯಲ್ಲಿ ಇಲ್ಲದಿದ್ದರೂ ದೊಡ್ಡ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ ಎಂದರು. ಗುರುವಾರ ಸಂವಿಧಾನ ದಿನವಾಗಿದ್ದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, “ನಮ್ಮ ದೇಶ ಸಂವಿಧಾನದಿಂದ ನಡೆಯುತ್ತದೆಯೇ ಹೊರತು ಯಾರದ್ದೋ ಇಚ್ಛೆಯಿಂದ (ಮನ್‌ವಿಧಾನ್) ಅಲ್ಲ. ಸಂವಿಧಾನಕ್ಕೆ ತಪ್ಪು ತಿದ್ದುಪಡಿ ತರುವ ಯಾವುದೇ ಉದ್ದೇಶದ ವಿರುದ್ಧ ಪಿಡಿಎ ಒಗ್ಗಟ್ಟಾಗಿ ನಿಲ್ಲಲಿದೆ. ಇಲ್ಲಿಯವರೆಗೆ ಪಿಡಿಎ ಇತರರ ಸರ್ಕಾರ ರಚಿಸಿತ್ತು; ಈಗ ಪಿಡಿಎ ತನ್ನದೇ ಸರ್ಕಾರ ರಚಿಸಲಿದೆ” ಎಂದು ಹೇಳಿದರು. ಮಿತ್ರಪಕ್ಷ ಕಾಂಗ್ರೆಸ್‌ನೊಂದಿಗೆ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿರುವ ನಡುವೆಯೇ ಎಸ್‌ಪಿ ಮಂಗಳವಾರ ಐವರು ಅಭ್ಯರ್ಥಿಗಳನ್ನು ಘೋಷಿಸಿದ್ದು, ಈ ತಿಕ್ಕಾಟದ ನಡುವೆಯೇ ಪ್ರಣಾಳಿಕೆ ಬಿಡುಗಡೆಯಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ