ಮತ್ತೆ ವಕ್ಕರಿಸಿದ ಮಹಾಮಾರಿ: ಭಾರತ ಎಚ್ಚರ….ಎಚ್ಚರ…

ಬುನಿಯಾ : ಈ ಹಿಂದೆ ಆಫ್ರಿಕಾದಲ್ಲಿ ಲಕ್ಷಾಂತರ ಜನರಿಗೆ ಹಬ್ಬಿ ಸಾವಿರಾರು ಮಂದಿಯ ಪ್ರಾಣ ಬಲಿಪಡೆದಿದ್ದ ‘ಎಬೋಲಾ’ (Ebola) ಮಹಾಮಾರಿ ಇದೀಗ ಕಾಂಗೋ ದೇಶದಲ್ಲಿ ಮತ್ತೆ ಭೀಕರ ಸ್ವರೂಪದಲ್ಲಿ ವಕ್ಕರಿಸಿದೆ. ಕಾಂಗೋ ಆರೋಗ್ಯ ಸಚಿವಾಲಯ ಗುರುವಾರ (ನವೆಂಬರ್ 26) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಇದುವರೆಗೆ 12,021 ಮಂದಿಗೆ ಎಬೋಲಾ ಸೋಂಕು ದೃಢಪಟ್ಟಿದ್ದು, ಸೋಂಕಿತರಲ್ಲಿ ಸುಮಾರು ಅರ್ಧದಷ್ಟು ಜನರು ಮೃತಪಟ್ಟಿದ್ದಾರೆ.

2014-16ರ ದಾಖಲೆ ಮೀರಿಸುವ ಆತಂಕ; ಲಸಿಕೆ ಇಲ್ಲದ ಅಪರೂಪದ ‘ಬುಂಡಿಬುಗ್ಯೊ’ ತಳಿ ಪತ್ತೆ!

Advertisement

ಕಾಂಗೋದಲ್ಲಿ ಈವರೆಗೆ ಕಾಣಿಸಿಕೊಂಡಿರುವ 17 ಎಬೋಲಾ ಸೋಂಕು ಪ್ರಕರಣಗಳ ಪೈಕಿ ಇದು ಅತ್ಯಂತ ಮಾರಕವಾಗಿದ್ದು, ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಹರಡುತ್ತಿರುವ ಸೋಂಕು ಎಂದು ಗುರುತಿಸಲಾಗಿದೆ. 2014ರಿಂದ 2016ರ ಅವಧಿಯಲ್ಲಿ ಪಶ್ಚಿಮ ಆಫ್ರಿಕಾದಲ್ಲಿ ಎಬೋಲಾದಿಂದ 11 ಸಾವಿರ ಮಂದಿ ಮೃತಪಟ್ಟಿದ್ದರು; ಇದೀಗ ಕಾಂಗೋದಲ್ಲಿನ ಸೋಂಕು ಸಾವಿನ ಸಂಖ್ಯೆಯಲ್ಲೂ ಆ ದಾಖಲೆಯನ್ನು ಮೀರಿಸುವ ಆತಂಕ ಎದುರಾಗಿದೆ.

ಕಳೆದ ಮೇ ತಿಂಗಳಲ್ಲಿ ಕಾಣಿಸಿಕೊಂಡಿರುವ ಈ ಸೋಂಕಿಗೆ ಅಪರೂಪದ ‘ಬುಂಡಿಬುಗ್ಯೊ’ (Bundibugyo) ತಳಿಯ ಎಬೋಲಾ ವೈರಸ್ ಕಾರಣವಾಗಿದೆ. ಈ ನಿರ್ದಿಷ್ಟ ವೈರಸ್ ತಳಿಗೆ ಇದುವರೆಗೆ ಅಧಿಕೃತವಾಗಿ ಅನುಮೋದನೆ ಪಡೆದ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲದಿರುವುದು ಆರೋಗ್ಯ ವಲಯದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

Advertisement

ಸೇನೆ-ಬಂಡುಕೋರರ ಸಂಘರ್ಷದಿಂದ ನಿಯಂತ್ರಣ ಕಾರ್ಯಾಚರಣೆಗೆ ಅಡ್ಡಿ:

ಸೋಂಕು ನಿಯಂತ್ರಿಸಲು ಆರೋಗ್ಯ ಕಾರ್ಯಕರ್ತರು ಹರಸಾಹಸ ಪಡುತ್ತಿದ್ದರೂ, ದೇಶದಲ್ಲಿ ಸೇನೆ ಮತ್ತು ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿರುವುದು ಕಾರ್ಯಾಚರಣೆಗೆ ದೊಡ್ಡ ಸವಾಲಾಗಿದೆ. ಇದರ ಜೊತೆಗೆ ಹದಗೆಟ್ಟ ರಸ್ತೆ ಸಂಪರ್ಕ, ಸ್ಥಳೀಯರಲ್ಲಿರುವ ತಪ್ಪು ಕಲ್ಪನೆಗಳು ಹಾಗೂ ಆರೋಗ್ಯ ವ್ಯವಸ್ಥೆಯ ಮೇಲಿನ ಅಪನಂಬಿಕೆ ಸೋಂಕು ತಡೆಗೆ ಅಡ್ಡಿಯಾಗಿ ಪರಿಣಮಿಸಿವೆ.

Advertisement

ಇದನ್ನೂ ಓದಿ:ಹೃದಯದ ಆರೋಗ್ಯಕ್ಕೆ ಯಾವ ಎಣ್ಣೆ ಉತ್ತಮ?: ಅಡುಗೆಗೆ ಯಾವ ಎಣ್ಣೆ ಬಳಸಿದರೆ ಸೂಕ್ತ?

ಎಬೋಲಾ ಸೋಂಕಿತ ವ್ಯಕ್ತಿಯ ರಕ್ತ ಅಥವಾ ದೇಹದ ಇತರ ದ್ರವಗಳ ನೇರ ಸಂಪರ್ಕದಿಂದ ವೈರಸ್ ಹರಡುತ್ತದೆ. ಸೋಂಕು ನಿಯಂತ್ರಿಸಲು ರೋಗಿಗಳನ್ನು ತ್ವರಿತವಾಗಿ ಗುರುತಿಸಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡುವುದು, ಸೋಂಕಿತರ ಸಂಪರ್ಕಕ್ಕೆ ಬಂದವರ ಮೇಲೆ ನಿಗಾ ಇಡುವುದು ಮತ್ತು ಮೃತದೇಹಗಳನ್ನು ಸುರಕ್ಷಿತವಾಗಿ ಅಂತ್ಯಸಂಸ್ಕಾರ ಮಾಡುವುದು ಅತ್ಯಗತ್ಯವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ