Breaking News

ಡ್ರೈವಿಂಗ್ ಪ್ರಿಯರಿಗೆ ಶುಭಸುದ್ದಿ: ಮ್ಯಾನುಯಲ್ ಕಾರುಗಳ ತಯಾರಿಕೆ ಮುಂದುವರಿಸಲು ಪೋರ್ಷೆ ನಿರ್ಧಾರ

ಜಾಗತಿಕ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗಳ ಹವಾ ಹೆಚ್ಚಾಗಿದ್ದು, ಸಾಂಪ್ರದಾಯಿಕ ಮ್ಯಾನುಯಲ್ ಗೇರ್‌ಬಾಕ್ಸ್‌ಗಳು (Manual Gearboxes) ಕಾಲಕ್ರಮೇಣ ಮರೆಯಾಗುತ್ತಿವೆ. ಆದರೆ, ಜರ್ಮನಿಯ ಪ್ರಸಿದ್ಧ ಸ್ಪೋರ್ಟ್ಸ್ ಕಾರ್ ತಯಾರಕ ಸಂಸ್ಥೆಯಾದ ಪೋರ್ಷೆ (Porsche), ತಕ್ಷಣಕ್ಕೆ ಮ್ಯಾನುಯಲ್ ಕಾರುಗಳ ತಯಾರಿಕೆಯನ್ನು ಕೈಬಿಡುವ ಯಾವುದೇ ಆಲೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ನಿಯಮಗಳು ಅನುಮತಿಸುವವರೆಗೆ ಹಾಗೂ ಗ್ರಾಹಕರ ಬೇಡಿಕೆ ಇರುವವರೆಗೂ ಮೂರು ಪೆಡಲ್ (ಮ್ಯಾನುಯಲ್) ಮಾದರಿಗಳ ಮಾರಾಟವನ್ನು ಮುಂದುವರಿಸುವುದಾಗಿ ಕಂಪನಿ ತಿಳಿಸಿದೆ.

ಮೊದಲಿಗೆ PDK ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಮಾತ್ರ ಘೋಷಿಸಲಾಗಿದ್ದ 2027 ಪೋರ್ಷೆ 911 ಕೆರೆರಾ S (Porsche 911 Carrera S) ಮಾದರಿಯಲ್ಲಿ, ಇದೀಗ 6-ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲು ಕಂಪನಿ ನಿರ್ಧರಿಸಿದೆ. ಪೋರ್ಷೆ ಕಾರ್ಸ್ ನಾರ್ತ್ ಅಮೆರಿಕಾದ ಪ್ರಸಿಡೆಂಟ್ ಮತ್ತು ಸಿಇಒ ಟಿಮೋ ರೆಶ್ (Timo Resch) ಅವರ ಪ್ರಕಾರ, ‘911 GT3’ ಮ್ಯಾನುಯಲ್ ಮಾದರಿಗೆ ಬಂದ ಬೃಹತ್ ಬೇಡಿಕೆಯೇ ಕೆರೆರಾ S ಮಾದರಿಯಲ್ಲೂ ಮ್ಯಾನುಯಲ್ ಆಯ್ಕೆಯನ್ನು ಮತ್ತೆ ತರಲು ಪ್ರೇರೇಪಿಸಿತು.

ಪೋರ್ಷೆ ತನ್ನ ಸಾಂಪ್ರದಾಯಿಕ ಚಾಲನಾ ಅನುಭವವನ್ನು ಉಳಿಸಿಕೊಳ್ಳಲು ಬದ್ಧವಾಗಿದ್ದು, ಭವಿಷ್ಯದ 911 ಸರಣಿಯ ಕಾರುಗಳಲ್ಲೂ ಮ್ಯಾನುಯಲ್ ಗೇರ್‌ಬಾಕ್ಸ್ ಮುಂದುವರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಎಲೆಕ್ಟ್ರಿಫಿಕೇಶನ್ (ಹೈಬ್ರಿಡ್/ಎಲೆಕ್ಟ್ರಿಕ್) ಹೆಚ್ಚಾಗುತ್ತಿರುವುದರಿಂದ ಮ್ಯಾನುಯಲ್ ಗೇರ್‌ಬಾಕ್ಸ್ ನೀಡುವುದು ಸವಾಲಿನ ಕೆಲಸವಾಗಿದೆ.

ನೂತನ 911 GTS ಹಾಗೂ ಟರ್ಬೊ S ಮಾದರಿಗಳು ಪೋರ್ಷೆಯ ‘T-ಹೈಬ್ರಿಡ್’ ತಂತ್ರಜ್ಞಾನವನ್ನು ಹೊಂದಿದ್ದು, ಪ್ರಸ್ತುತ ಇವುಗಳಲ್ಲಿ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಜೋಡಿಸಲು ಸಾಧ್ಯವಾಗಿಲ್ಲ. ಆದರೆ, ಪೋರ್ಷೆಯ ವೈಸಾಚ್ (Weissach) ಎಂಜಿನಿಯರ್‌ಗಳು ಭವಿಷ್ಯದಲ್ಲಿ ಹೈಬ್ರಿಡ್ ತಂತ್ರಜ್ಞಾನಕ್ಕೂ ಸೂಕ್ತವಾಗುವ ಮ್ಯಾನುಯಲ್ ಸಿಸ್ಟಮ್ ರೂಪಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ರೆಶ್ ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಕಾಡಿನ ರಸ್ತೆಯಲ್ಲಿ ಆನೆಗೆ ನಿರಂತರ ಹಾರ್ನ್ ಹಾಕಿ ಮುನ್ನುಗ್ಗಿದ ಕಾರು ಚಾಲಕಿ: ಕೂದಲೆಳೆಯ ಅಂತರದಲ್ಲಿ ಭಾರಿ ದುರಂತ ಪಾರು

ಮ್ಯಾನುಯಲ್ ಗೇರ್‌ಬಾಕ್ಸ್ ಕಡಿಮೆಯಾಗುತ್ತಿರುವುದು ಏಕೆ?

ಕಠಿಣ ಹೊರಸೂಸುವಿಕೆ ನಿಯಮಗಳು: ಮಾಲಿನ್ಯ ನಿಯಂತ್ರಣದ ಜಾಗತಿಕ ನಿಯಮಗಳು.

ಸುಧಾರಿತ ಚಾಲನಾ ತಂತ್ರಜ್ಞಾನ: ಆಧುನಿಕ Driver-Assistance ಸಿಸ್ಟಮ್‌ಗಳಿಗೆ ಆಟೋಮ್ಯಾಟಿಕ್ ಹೊಂದಿಕೊಳ್ಳುವುದು ಸುಲಭ.

ಹೈಬ್ರಿಡ್ ಇಂಜಿನ್ ಸವಾಲುಗಳು: ವಿದ್ಯುತ್ ಮತ್ತು ಇಂಧನ ಎರಡರ ಸಂಯೋಜನೆಯಲ್ಲಿ ಕಾರ್ಯನಿರ್ವಹಿಸುವ ಹೈಬ್ರಿಡ್ ವಾಹನಗಳಿಗೆ PDK/ಆಟೋಮ್ಯಾಟಿಕ್ ಸೂಕ್ತ.

ಬಿಡಿಭಾಗಗಳ ಪೂರೈಕೆ ಕೊರತೆ: ಮ್ಯಾನುಯಲ್ ಗೇರ್‌ಬಾಕ್ಸ್ ಬಿಡಿಭಾಗ ತಯಾರಕರ ಸಂಖ್ಯೆ ಜಾಗತಿಕವಾಗಿ ಕಡಿಮೆಯಾಗುತ್ತಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *