ಬೆಂಗಳೂರು: ರಾಜ್ಯದ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಮತ್ತು ಸಾರ್ವಜನಿಕರಿಗೆ ವೈದ್ಯಕೀಯ ಸೇವೆಗಳನ್ನು ಇನ್ನಷ್ಟು ಹತ್ತಿರವಾಗಿಸಲು ನೂತನ ಆರೋಗ್ಯ ಸಚಿವ ಯು.ಟಿ. ಖಾದರ್ (U.T. Khader) ಅವರು ಹಲವು ಮಹತ್ವದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಆರೋಗ್ಯ ಇಲಾಖೆಯು ಅತ್ಯಂತ ಜವಾಬ್ದಾರಿಯುತ ದೊಡ್ಡ ಖಾತೆಯಾಗಿದ್ದು, ವೈದ್ಯರ ನೇಮಕಾತಿಯಿಂದ ಹಿಡಿದು ಸೂಕ್ತ ನೀತಿ ರೂಪಿಸುವಿಕೆ ಹಾಗೂ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಲು ತಾವು ಮೊದಲ ಆದ್ಯತೆ ನೀಡುವುದಾಗಿ ಸಚಿವರು ತಿಳಿಸಿದ್ದಾರೆ. ಇದೇ ವೇಳೆ, ಹಿಂದಿನ ಸಚಿವರಾದ ದಿನೇಶ್ ಗುಂಡು ರಾವ್ ಅವರು ಮಾಡಿದ್ದ ಉತ್ತಮ ಕೆಲಸಗಳನ್ನು ಇನ್ನಷ್ಟು ದಕ್ಷತೆಯಿಂದ ಮುಂದುವರಿಸಿಕೊಂಡು ಹೋಗುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಆಯುಷ್ಮಾನ್ ಕರ್ನಾಟಕ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಈ ಯೋಜನೆಯಡಿ ಚಿಕಿತ್ಸೆ ನೀಡುವ ಯಾವುದೇ ಖಾಸಗಿ ಆಸ್ಪತ್ರೆಗಳು ರೋಗಿಗಳಿಂದ ಬಿಲ್ ಮೊತ್ತದ ಹೊರತಾಗಿ ಬಿಡಿಗಾಸನ್ನೂ ಹೆಚ್ಚುವರಿ ಶುಲ್ಕವಾಗಿ ವಸೂಲಿ ಮಾಡುವಂತಿಲ್ಲ ಎಂದು ಖಡಕ್ ಆದೇಶ ನೀಡಿದ್ದಾರೆ. ಒಂದು ವೇಳೆ ಯಾವುದೇ ಆಸ್ಪತ್ರೆಗಳು ನಿಯಮ ಮೀರಿ ಹೆಚ್ಚುವರಿ ಹಣ ಪೀಡಿಸಿದರೆ, ಸಾರ್ವಜನಿಕರು ತಕ್ಷಣವೇ ಜಿಲ್ಲಾ ಮಟ್ಟದ ‘ಆರೋಗ್ಯ ಮಿತ್ರರ’ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ (DHO) ದೂರು ನೀಡಬೇಕು. ಅಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಆಹಾರ ಖಾತೆ ಸಿಕ್ಕಿದ್ದಕ್ಕೆ ಬಹಿರಂಗ ಆಕ್ರೋಶ; ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್. ಮುನಿಯಪ್ಪ ಚಿಂತನೆ!
ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಎಂಬಿಬಿಎಸ್ (MBBS) ಪದವೀಧರ ವೈದ್ಯರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ ಸಿಕ್ಕಿದೆ. ಇನ್ಮುಂದೆ ವೈದ್ಯರು ಯಾವುದೇ ಕಠಿಣ ಪ್ರಕ್ರಿಯೆಯಿಲ್ಲದೆ ನೇರವಾಗಿ ‘ವಾಕ್-ಇನ್’ (Walk-in Interview) ಸಂದರ್ಶನದ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿಗೆ ಪತ್ರ ಸಲ್ಲಿಸಬಹುದು. ಪತ್ರ ನೀಡಿದ ಕೇವಲ ಒಂದು ವಾರದ ಒಳಗಾಗಿ ಅವರನ್ನು ನೇಮಕ ಮಾಡಿಕೊಂಡು ಪೋಸ್ಟಿಂಗ್ ನೀಡಬೇಕು ಎಂದು ಯು.ಟಿ. ಖಾದರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ರೀತಿ ನೇಮಕವಾಗುವ ವೈದ್ಯರಿಗೆ ಪ್ರತಿ ತಿಂಗಳು ಭರ್ಜರಿ ₹60,000 ವೇತನವನ್ನು ನಿಗದಿಪಡಿಸಲಾಗಿದೆ. ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಸಾರ್ವಜನಿಕರಿಂದ ಹಾಗೂ ವೈದ್ಯಕೀಯ ವಲಯದಿಂದ ಮುಕ್ತ ಸಲಹೆಗಳನ್ನು ಆಹ್ವಾನಿಸುವುದಾಗಿ ಸಚಿವರು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


