ಆಹಾರ ಖಾತೆ ಸಿಕ್ಕಿದ್ದಕ್ಕೆ ಬಹಿರಂಗ ಆಕ್ರೋಶ; ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಕೆ.ಎಚ್. ಮುನಿಯಪ್ಪ ಚಿಂತನೆ!

ದೇವನಹಳ್ಳಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಖಾತೆ ಹಂಚಿಕೆಯ ಬೆಂಕಿ ಈಗ ಮತ್ತಷ್ಟು ಜೋರಾಗಿದೆ. ಬೆಂಗಳೂರಿನ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಪ್ರಕಟಣೆಯ ಬೆನ್ನಲ್ಲೇ, ಮತ್ತೊಬ್ಬ ಹಿರಿಯ ನಾಯಕ ಹಾಗೂ ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು ಸಹ ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಗಂಭೀರ ಚಿಂತನೆ ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಕೆ.ಎಚ್. ಮುನಿಯಪ್ಪ, ತಮಗೆ ಹಂಚಿಕೆ ಮಾಡಲಾಗಿರುವ ಆಹಾರ ಖಾತೆಯ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. “ನಾನು 8 ಬಾರಿ ಗೆದ್ದಿರುವ ಹಿರಿಯ ನಾಯಕ. ರಾಮಲಿಂಗಾರೆಡ್ಡಿ ಮತ್ತು ನಾನು 7-8 ಬಾರಿ ಗೆದ್ದಿದ್ದರೂ ಖಾತೆ ಹಂಚಿಕೆಯಲ್ಲಿ ನಮ್ಮ ಸೀನಿಯರಿಟಿಯನ್ನು ಪರಿಗಣಿಸಿಲ್ಲ, ಸಂಪುಟದಲ್ಲಿ ಸಮತೋಲನ ಕಾಯ್ದುಕೊಂಡಿಲ್ಲ. ಖಾತೆಗಳ ಹಂಚಿಕೆ ಸರಿಯಾಗಿಲ್ಲ, ಇದೇ ರೀತಿ ಮುಂದುವರಿದರೆ ಮುಂದೆ 2028ರ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಕಷ್ಟ ಎದುರಾಗಲಿದೆ” ಎಂದು ಹೈಕಮಾಂಡ್‌ಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದಲ್ಲಿ ತಾಯಿ ಸ್ಥಾನದಲ್ಲಿದ್ದಾರೆ, ಅವರು ಎಲ್ಲರನ್ನೂ ಒಂದೇ ರೀತಿ ನೋಡಬೇಕು. ನಾನು ಈಗಾಗಲೇ ಎಐಸಿಸಿ ಅಧ್ಯಕ್ಷ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಈಗಾಗಲೇ ಮೂರು ವರ್ಷ ಆಹಾರ ಇಲಾಖೆಯನ್ನು ನಿಭಾಯಿಸಿದ್ದೇನೆ. ಹಾಗಾಗಿ ನನಗೆ ಜನಸೇವೆ ಮಾಡಲು ಮುಕ್ತ ಅವಕಾಶವಿರುವ ಸಮಾಜ ಕಲ್ಯಾಣ ಅಥವಾ ಕೃಷಿ ಖಾತೆಯನ್ನು ನೀಡುವಂತೆ ಮನವಿ ಮಾಡಿದ್ದೇನೆ” ಎಂದು ಮುನಿಯಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ:ಖಾತೆ ಹಂಚಿಕೆ ಬೆನ್ನಲ್ಲೇ ಸಚಿವ ಸ್ಥಾನಕ್ಕೆ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ದಿಢೀರ್ ರಾಜೀನಾಮೆ; ಕಾಂಗ್ರೆಸ್‌ನಲ್ಲಿ ತಲ್ಲಣ!

ಖಾತೆ ಬದಲಾವಣೆ ಮಾಡದಿದ್ದರೆ ರಾಜೀನಾಮೆ ನೀಡುವ ದಾರಿಯನ್ನಷ್ಟೇ ಮುನಿಯಪ್ಪ ಅವರೂ ಯೋಚಿಸುತ್ತಿದ್ದು, ಈ ಗೊಂದಲವನ್ನು ವರಿಷ್ಠರು ಶೀಘ್ರದಲ್ಲೇ ಸರಿಪಡಿಸಲಿದ್ದಾರೆ ಎಂಬ ನಂಬಿಕೆಯನ್ನೂ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಯಕರ ಈ ಸರಣಿ ಬಂಡಾಯ ಸದ್ಯ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡಿಗೆ ಹೊಸ ತಲೆನೋವು ತಂದಿಟ್ಟಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು