ಪುಣೆ: ಪ್ರಮುಖ ಐಟಿ ಸಂಸ್ಥೆ ವಿಪ್ರೋ ಟೆಕ್ನಾಲಜೀಸ್ನ (Wipro Technologies) ಪುಣೆ ಕಚೇರಿಯಲ್ಲಿ ಹಿಂದೂ ಮಹಿಳಾ ಉದ್ಯೋಗಿಯೊಬ್ಬರಿಗೆ ಧಾರ್ಮಿಕ ಕಿರುಕುಳ ಹಾಗೂ ಬಲವಂತದ ಮತಾಂತರಕ್ಕೆ ಯತ್ನಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ವಿವಾದ ಇಡೀ ದೇಶಾದ್ಯಂತ ಭಾರಿ ಸಂಚಲನ ಮೂಡಿಸುತ್ತಿದ್ದಂತೆ ಎಚ್ಚೆತ್ತಿರುವ ವಿಪ್ರೋ ಸಂಸ್ಥೆ, ತನ್ನ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಯಾವುದೇ ರೀತಿಯ ದುರ್ನಡತೆ ಅಥವಾ ತಾರತಮ್ಯದ ವಿರುದ್ಧ ಕಂಪನಿಯು “ಶೂನ್ಯ ಸಹಿಷ್ಣುತೆ” (Zero-tolerance) ನೀತಿಯನ್ನು ಅನುಸರಿಸುತ್ತದೆ ಮತ್ತು ತನಿಖೆ ನಡೆಸುತ್ತಿರುವ ಕಾನೂನು ಜಾರಿ ಅಧಿಕಾರಿಗಳಿಗೆ ಸಂಪೂರ್ಣವಾಗಿ ಸಹಕರಿಸುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಉದ್ಯೋಗಿಗಳ ಕಲ್ಯಾಣ ಮತ್ತು ಗೌರವವೇ ಕಂಪನಿಯ ಪ್ರಮುಖ ಮೌಲ್ಯಗಳಾಗಿವೆ ಎಂದು ಹೇಳಿರುವ ವಿಪ್ರೋ, “ವಿಪ್ರೋದಲ್ಲಿ ಉದ್ಯೋಗಿಗಳ ಹಿತರಕ್ಷಣೆ, ಘನತೆ ಮತ್ತು ಗೌರವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಯಾವುದೇ ರೀತಿಯ ತಾರತಮ್ಯ, ಕಿರುಕುಳ ಅಥವಾ ವ್ಯಕ್ತಿಯ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ಕ್ರಮಗಳ ವಿರುದ್ಧ ನಾವು ಕಠಿಣ ನಿಲುವನ್ನು ಹೊಂದಿದ್ದೇವೆ. ಈ ವಿಷಯದಲ್ಲಿ ನಾವು ಪುಣೆ ಪೊಲೀಸರೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಮತ್ತು ತನಿಖೆಗೆ ಅಗತ್ಯವಿರುವ ಎಲ್ಲಾ ದಾಖಲೆಗಳು ಹಾಗೂ ಮಾಹಿತಿಯನ್ನು ಹಂಚಿಕೊಂಡಿದ್ದೇವೆ. ಪ್ರಕರಣದ ತನಿಖೆ ಪ್ರಗತಿಯಲ್ಲಿರುವುದರಿಂದ, ನಾವು ಸದ್ಯಕ್ಕೆ ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ” ಎಂದು ತಿಳಿಸಿದೆ.
ವಿಪ್ರೋದ ರಾಜೀವ್ ಗಾಂಧಿ ಇನ್ಫೋಟೆಕ್ ಪಾರ್ಕ್ ಕ್ಯಾಂಪಸ್ನಲ್ಲಿ ಮೇ 2019 ರಿಂದ ಆಗಸ್ಟ್ 2025 ರವರೆಗೆ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳಾ ಎಂಜಿನಿಯರ್, ಹಿಂಜವಾಡಿ ಪೊಲೀಸ್ ಠಾಣೆಗೆ ತೆರಳಿ ವಿವರವಾದ ದೂರು ನೀಡಿದ ನಂತರ ಈ ವಿವಾದ ಸ್ಫೋಟಗೊಂಡಿದೆ. ಪುಣೆಯಲ್ಲಿ ‘ಹಿಂದೂ ಜನಜಾಗೃತಿ ಸಮಿತಿ’ (HJS) ಆಯೋಜಿಸಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತೆ ಮತ್ತು ಅವರ ವಕೀಲರು ಈ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ದೂರಿನ ಪ್ರಕಾರ, ದುಬೈ ಮೂಲದ ಪ್ರಾಜೆಕ್ಟ್ ಒಂದರ ಕೆಲಸದ ಸಮಯದಲ್ಲಿ ಸಹೋದ್ಯೋಗಿ ಶಾಹಿನಾ ರಫೀಕ್ ಎಂಬಾಕೆ ಸಂತ್ರಸ್ತೆಯ ಪರಿಚಯ ಮಾಡಿಕೊಂಡಿದ್ದಳು. ತದನಂತರ ಆಕೆ ಸಂತ್ರಸ್ತೆಯ ವೈಯಕ್ತಿಕ ಫೋನ್ಗೆ ಕರೆ ಮಾಡಿ, ಮುಸ್ಲಿಂ ಧರ್ಮವನ್ನು ಸ್ವೀಕರಿಸುವಂತೆ ನಿರಂತರವಾಗಿ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. “ದುಬೈನ ಶೇಖ್ಗಳಿಗೆ ಭಾರೀ ಕಾಂಟ್ಯಾಕ್ಟ್ಸ್ ಇದೆ. ನೀನು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರೆ, ನಾನು ನಿನಗೆ ಅವರೊಂದಿಗೆ ಮದುವೆ ಮಾಡಿಸುತ್ತೇನೆ. ನೀನು ಕೋಟಿ ಕೋಟಿ ಸಂಪಾದಿಸಿ ಸುಖವಾಗಿರಬಹುದು” ಎಂದು ಆಮಿಷ ಒಡ್ಡಿದ್ದಳು ಮತ್ತು ದುಬೈಗೆ ಹೋಗುವಂತೆ ಒತ್ತಡ ಹೇರಿದ್ದಳು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಈ ಕುರಿತು ದುಬೈ ಪ್ರಾಜೆಕ್ಟ್ ಹೆಡ್ ರಾಮ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳಾದ ವಾಸಿಮ್ ಮುಸ್ಕರ್, ಹೇಮಂತ್ ಪಟೋಲೆ ಮತ್ತು ಜೀಶನ್ ಅಹ್ಮದ್ ಅವರಿಗೆ ಆಂತರಿಕ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಹಿಳೆ ದೂರಿದ್ದಾರೆ. ಮಾತುಕತೆ ನಡೆಸಿದ ನಂತರ ತನ್ನನ್ನು ಪ್ರಾಜೆಕ್ಟ್ನಿಂದ ತೆಗೆದುಹಾಕಿ ಬೆಂಚ್ಗೆ (Bench) ಹಾಕಲಾಯಿತು. ಆಗಸ್ಟ್ 2025 ರಲ್ಲಿ ಮೈಕ್ರೋಸಾಫ್ಟ್ ಟೀಮ್ಸ್ (Microsoft Teams) ಮೀಟಿಂಗ್ ಕರೆದು, ತನ್ನ ವಾದ ಆಲಿಸದೆ ಬಲವಂತವಾಗಿ ರಾಜೀನಾಮೆ ಬರೆಸಿಕೊಳ್ಳಲಾಯಿತು ಎಂದು ಅವರು ಆರೋಪಿಸಿದ್ದಾರೆ. ಈ ಕೃತ್ಯದಲ್ಲಿ ಪ್ರಶಾಂತ್ ಖುರೇಷಿ, ಜೀವನ್ ಅಹ್ಮದ್ ಮತ್ತು ಕೃಷ್ಣ ಕುಮಾರಿ ಎಂಬುವವರು ತಮಗೆ ಬೆದರಿಕೆ ಹಾಕಿದ್ದರು ಎಂದು ಹೆಸರಿಸಲಾಗಿದೆ.
ಇದನ್ನೂ ಓದಿ: ಕಾಸರಗೋಡು ಆರ್ಟಿಒ ಕಚೇರಿ ಮೇಲೆ ವಿಜಿಲೆನ್ಸ್ ಸಪ್ರೈಸ್ ರೈಡ್!: ಗಿಡದ ಕುಂಡಗಳ ಅಡಿಯಲ್ಲಿ ಸಿಕ್ಕಿತು ಲಂಚದ ಹಣದ ಕಂತೆ
50 ಲಕ್ಷ ರೂ. ಪರಿಹಾರ ಹಾಗೂ ಕಾನೂನು ಹೋರಾಟದ ಎಚ್ಚರಿಕೆ
ಸಂತ್ರಸ್ತೆಯ ಪರ ವಕೀಲ ವಿವೇಕ್ ಭೋಸಲೆ ಅವರು ವಿಪ್ರೋ ಕಂಪನಿಗೆ ಲೀಗಲ್ ನೋಟಿಸ್ ಜಾರಿ ಮಾಡಿದ್ದು, ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ:
ರಾಜೀನಾಮೆಯನ್ನು ರದ್ದುಗೊಳಿಸಿ, ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು.
ಹಿಂಬಾಕಿ ಸಂಬಳ (Back wages) ನೀಡಬೇಕು.
ಮಾನಸಿಕ ಕಿರುಕುಳ ಮತ್ತು ಮಾನಹಾನಿಗಾಗಿ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು.
ಕಂಪನಿಯು ಲಿಖಿತವಾಗಿ ಕ್ಷಮೆಯಾಚಿಸಬೇಕು ಮತ್ತು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಕಂಪನಿಗೆ 15 ದಿನಗಳ ಗಡುವು ನೀಡಲಾಗಿದ್ದು, ವಿಫಲವಾದರೆ ಕಾರ್ಮಿಕ ನ್ಯಾಯಾಲಯ ಹಾಗೂ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ. ಅಲ್ಲದೆ, ವಾಟ್ಸಾಪ್ ಚಾಟ್ಗಳು, ಕಾಲ್ ರೆಕಾರ್ಡ್ಸ್ ಮತ್ತು ಇಮೇಲ್ಗಳಂತಹ ಡಿಜಿಟಲ್ ಪುರಾವೆಗಳನ್ನು ಸಂರಕ್ಷಿಸುವಂತೆ ಪೊಲೀಸರಿಗೆ ಮನವಿ ಮಾಡಲಾಗಿದೆ. ಈ ಹಿಂದೆ ಟಿಸಿಎಸ್ (TCS) ನಾಶಿಕ್ ಕಚೇರಿಯಲ್ಲೂ ಇಂತಹದ್ದೇ ವಿವಾದ ಕೇಳಿಬಂದಿದ್ದು, ಇದೀಗ ವಿಪ್ರೋ ಪ್ರಕರಣ ಮಹಾರಾಷ್ಟ್ರ ರಾಜಕಾರಣ ಮತ್ತು ಐಟಿ ವಲಯದಲ್ಲಿ ತಲ್ಲಣ ಮೂಡಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


