ಕಾಸರಗೋಡು: ಸಾರ್ವಜನಿಕರಿಂದ ಭ್ರಷ್ಟಾಚಾರ ಮತ್ತು ಲಂಚದ ದೂರುಗಳು ವ್ಯಾಪಕವಾಗಿ ಕೇಳಿಬಂದ ಹಿನ್ನೆಲೆಯಲ್ಲಿ, ಕಾಸರಗೋಡು ಪ್ರಾದೇಶಿಕ ಸಾರಿಗೆ ಕಚೇರಿ (RTO) ಮೇಲೆ ವಿಜಿಲೆನ್ಸ್ ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯ ವೇಳೆ ಕಚೇರಿಯ ಮುಂಭಾಗದಲ್ಲಿ ಅಲಂಕಾರಕ್ಕಾಗಿ ಇಟ್ಟಿದ್ದ ಗಿಡದ ಕುಂಡಗಳ (Flower Pots) ಅಡಿಯಲ್ಲಿ ಬಚ್ಚಿಟ್ಟಿದ್ದ ಲಂಚದ ಹಣದ ಕಂತೆಗಳನ್ನು ಅಧಿಕಾರಿಗಳು ಪತ್ತೆಹಚ್ಚಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಕಾಸರಗೋಡು ಆರ್‌ಟಿಒ ಕಚೇರಿಯಲ್ಲಿ ದಲ್ಲಾಳಿಗಳು (Middlemen) ಹಾಗೂ ಏಜೆಂಟ್‌ಗಳ ಹಸ್ತಕ್ಷೇಪವಿಲ್ಲದೆ ಮತ್ತು ಅವರಿಗೆ ಲಂಚ ನೀಡದೆ ಸಾರ್ವಜನಿಕರ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂದು ವಿಜಿಲೆನ್ಸ್ ಇಲಾಖೆಗೆ ಸರಣಿ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ವಿಜಿಲೆನ್ಸ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (DySP) ಉನ್ನಿಕೃಷ್ಣನ್ ಅವರ ನೇತೃತ್ವದಲ್ಲಿ ವಿಶೇಷ ತಂಡ ಈ ಸಪ್ರೈಸ್ ರೈಡ್ ಕೈಗೊಂಡಿದೆ. ಪರಿಶೀಲನೆಯ ವೇಳೆ ಕಚೇರಿಯ ಮುಂಭಾಗದ ಕುಂಡಗಳ ಕೆಳಗೆ ಅಡಗಿಸಿಡಲಾಗಿದ್ದ ಒಟ್ಟು 17,150 ರೂಪಾಯಿ ನಗದು ಹಣ ಪತ್ತೆಯಾಗಿದೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಸಿಸಿಬಿ ಪೊಲೀಸರ ಭರ್ಜರಿ ಬೇಟೆ!: ಪ್ರತ್ಯೇಕ ದಾಳಿ ನಡೆಸಿ ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ
ಕಚೇರಿಯ ಸಿಬ್ಬಂದಿ ಹಾಗೂ ಏಜೆಂಟ್‌ಗಳು ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದಾರೆ ಎಂಬ ದೂರು ಕಾಂಞಂಗಾಡ್ ಆರ್‌ಟಿಒ ಕಚೇರಿಯ ಮೇಲೂ ಇದ್ದಿದ್ದರಿಂದ, ಅಧಿಕಾರಿಗಳು ಎರಡೂ ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ ಅರ್ಹ ನಾಗರಿಕರಿಗೆ ಸೇರಬೇಕಿದ್ದ ಪ್ರಮುಖ ದಾಖಲೆಗಳು, ಏಜೆಂಟ್‌ಗಳ ಮೂಲಕ ನಗದಿನೊಂದಿಗೆ ಸಲ್ಲಿಕೆಯಾಗಿದ್ದ ವಿವಿಧ ವಾಹನ ಸಂಬಂಧಿತ ಅರ್ಜಿಗಳು ಮತ್ತು ವಿನಂತಿ ಪತ್ರಗಳನ್ನು ವಿಜಿಲೆನ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಾಂಞಂಗಾಡ್ ಕಚೇರಿಯಿಂದಲೂ ಹತ್ತಾರು ಅನಧಿಕೃತ ದಾಖಲೆ ಹಾಗೂ ಅರ್ಜಿಗಳನ್ನು ಜಪ್ತಿ ಮಾಡಲಾಗಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ಧ ತನಿಖೆ ಚುರುಕುಗೊಂಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


