ಹುಲಿಕಲ್ ಘಾಟ್‌ನಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಅಗ್ನಿ ಅವಘಡ: ಧಗಧಗನೆ ಹೊತ್ತಿ ಉರಿದ ‘ದುರ್ಗಾಂಬಾ’ ಬಸ್

ಹೊಸನಗರ: ಉಡುಪಿ ಜಿಲ್ಲೆಯ ಕುಂದಾಪುರದ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ ರಸ್ತೆಯಲ್ಲಿ ಶನಿವಾರ ಧಗಧಗನೆ ಹೊತ್ತಿ ಉರಿದು ಸಂಪೂರ್ಣ ಭಸ್ಮವಾಗಿದೆ. ಬಸ್‌ನಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರೂ, ಚಾಲಕನ ಸಮಯಪ್ರಜ್ಞೆಯಿಂದಾಗಿ ಯಾವುದೇ ಪ್ರಾಣಹಾನಿಯಾಗದೆ ಎಲ್ಲರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಂದಾಪುರ ಮೂಲದ ಪ್ರಸಿದ್ಧ ‘ಶ್ರೀ ದುರ್ಗಾಂಬಾ’ ಸಂಸ್ಥೆಗೆ ಸೇರಿದ ಬಸ್ ಇದಾಗಿದ್ದು, ಎಂದಿನಂತೆ ಹುಲಿಕಲ್ ಘಾಟ್‌ನ ತಿರುವುಗಳ ರಸ್ತೆಯಲ್ಲಿ ಚಲಿಸುತ್ತಿತ್ತು. ಈ ವೇಳೆ ಹಠಾತ್ ಆಗಿ ಬಸ್‌ನ ಎಂಜಿನ್ ಭಾಗದಿಂದ ದಟ್ಟವಾದ ಹೊಗೆ ಬರಲಾರಂಭಿಸಿದೆ. ತಕ್ಷಣವೇ ಅಪಾಯವನ್ನು ಅರಿತ ಬಸ್ ಚಾಲಕ ರಸ್ತೆ ಬದಿಗೆ ವಾಹನವನ್ನು ನಿಲ್ಲಿಸಿದ್ದಾನೆ. ಚಾಲಕ ಹಾಗೂ ನಿರ್ವಾಹಕರು ತಕ್ಷಣವೇ ಎಲ್ಲ ಪ್ರಯಾಣಿಕರನ್ನು ಬಸ್‌ನಿಂದ ಕೆಳಗಿಳಿಯುವಂತೆ ಸೂಚಿಸಿದ್ದಾರೆ. ಪ್ರಯಾಣಿಕರೆಲ್ಲರೂ ಕೆಳಗಿಳಿಯುತ್ತಿದ್ದಂತೆ ಕ್ಷಣಾರ್ಧದಲ್ಲೇ ಬೆಂಕಿ ಇಡೀ ಬಸ್ಸ್‌ಗೆ ವ್ಯಾಪಿಸಿದ್ದು, ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಚಾಲಕನ ಈ ದಿಢೀರ್ ನಿರ್ಧಾರದಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಭೀಕರ ಅಪಘಾತ: ಆ್ಯಂಬ್ಯುಲೆನ್ಸ್ ಹಾಗೂ ಕಾರು ನಡುವೆ ಡಿಕ್ಕಿ

ವಿಷಯ ತಿಳಿಯುತ್ತಿದ್ದಂತೆ ಹೊಸನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ (SI) ಶಿವಾನಂದ್ ಕೆ. ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸ್‌ಗೆ ಬೆಂಕಿ ಬಿದ್ದ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಶಾರ್ಟ್ ಸರ್ಕ್ಯೂಟ್ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ. ಈ ಕುರಿತು ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಶೇಷವೆಂದರೆ, ಇದೇ ಹುಲಿಕಲ್ ಘಾಟ್ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಿರುವ ಎರಡನೇ ಅಗ್ನಿ ಅವಘಡ ಇದಾಗಿದ್ದು, ಘಾಟ್ ರಸ್ತೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು