ಲಕ್ಷದ್ವೀಪ: ಭಾರತದ ಅತ್ಯಂತ ಪುಟ್ಟ ಹಾಗೂ ಸುಂದರ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡುವ ಪ್ರವಾಸಿಗರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ದ್ವೀಪ ಸಮೂಹದಲ್ಲಿ ಕಳೆದ 47 ವರ್ಷಗಳಿಂದ ಜಾರಿಯಲ್ಲಿದ್ದ ಮದ್ಯಪಾನ ನಿಷೇಧವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ರದ್ದುಗೊಳಿಸಿದೆ. ಜೂನ್ 5 ರಂದು ಹೊರಡಿಸಲಾದ ವಿಶೇಷ ಗೆಜೆಟ್ ಅಧಿಸೂಚನೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದ್ದು, ಇನ್ನು ಮುಂದೆ ದ್ವೀಪದಲ್ಲಿ ಮದ್ಯ ಮಾರಾಟ ಮತ್ತು ಖರೀದಿಗೆ ಮುಕ್ತ ಅವಕಾಶ ಸಿಗಲಿದೆ.
ಅರೇಬಿಯನ್ ಸಮುದ್ರದ ಮಲಬಾರ್ ಕರಾವಳಿಯಲ್ಲಿರುವ ಲಕ್ಷದ್ವೀಪದಲ್ಲಿ ಇಸ್ಲಾಂ ಧರ್ಮದ ಜನಸಂಖ್ಯೆ ಹೆಚ್ಚಾಗಿರುವ ಕಾರಣ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಕಾಯ್ದುಕೊಳ್ಳಲು 1979 ರಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಇಲ್ಲಿನ ಸ್ಥಳೀಯರು ಮಲಯಾಳಂ ಭಾಷೆಯನ್ನು ಹೆಚ್ಚು ಮಾತನಾಡುತ್ತಾರೆ. ದ್ವೀಪದಲ್ಲಿ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ಈ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿದೆ.
2024 ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ರುದ್ರರಮಣೀಯ ನೈಸರ್ಗಿಕ ಸೌಂದರ್ಯದ ಚಿತ್ರಗಳನ್ನು ಹಂಚಿಕೊಂಡಿದ್ದರು. ಅಂದಿನಿಂದಲೇ ಲಕ್ಷದ್ವೀಪವನ್ನು ಮಾಲ್ಡೀವ್ಸ್ಗೆ ಪರ್ಯಾಯವಾಗಿ ಅಂತರರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಚಿಂತನೆ ನಡೆದಿತ್ತು. ಇದೀಗ ಮದ್ಯದ ಮೇಲಿನ ನಿಷೇಧ ತೆರವಾಗಿರುವುದರಿಂದ ಪ್ರತಿ ವರ್ಷ ಭೇಟಿ ನೀಡುವ ಸಾವಿರಾರು ಪ್ರವಾಸಿಗರ ಸಂಖ್ಯೆ ಲಕ್ಷ ದಾಟಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಸಿಎಂ ವಿಜಯ್ ಜತೆಗೆ ಚೆಸ್ ಆಡಿದ ಪ್ರಜ್ಞಾನಂದ: 50 ಲಕ್ಷ ರೂ. 50 ಲಕ್ಷ ರೂ. ನಗದು ನೀಡಿದ ತಮಿಳುನಾಡು ಮುಖ್ಯಮಂತ್ರಿ
ಹೊಸ ಅಬಕಾರಿ ನೀತಿಯ ಪ್ರಕಾರ, ಸರ್ಕಾರಿ ಸ್ವಾಮ್ಯದ ನಿಗಮಗಳು ಮತ್ತು ಏಜೆನ್ಸಿಗಳಿಗೆ ಮಾತ್ರ ಆಲ್ಕೋಹಾಲ್ ಉತ್ಪನ್ನಗಳನ್ನು ಆಮದು, ರಫ್ತು ಮತ್ತು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇದರೊಂದಿಗೆ ಲಕ್ಷದ್ವೀಪದ ಆಡಳಿತಾಧಿಕಾರಿಗಳಿಗೆ ಮದ್ಯ ಮಾರಾಟದ ಮೇಲೆ ಸಂಪೂರ್ಣ ನಿಯಂತ್ರಣದ ಅಧಿಕಾರ ನೀಡಲಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಯಾವುದೇ ನಿರ್ದಿಷ್ಟ ಪ್ರದೇಶದಲ್ಲಿ ಮದ್ಯ ಮಾರಾಟವನ್ನು ನಿಷೇಧಿಸುವ ಹಕ್ಕು ಅವರಿಗೆ ಇರಲಿದೆ.
ಬಿಳಿ ಮರಳಿನ ಪ್ರಶಾಂತ ಕಡಲತೀರಗಳು, ವರ್ಣರಂಜಿತ ಹವಳದ ಬಂಡೆಗಳು, ಸ್ಕೂಬಾ ಡೈವಿಂಗ್, ಸ್ನಾರ್ಕೆಲಿಂಗ್, ಕಯಾಕಿಂಗ್ ಹಾಗೂ ವಿಂಡ್ ಸರ್ಫಿಂಗ್ನಂತಹ ಸಾಹಸ ಕ್ರೀಡೆಗಳಿಗೆ ಹೆಸರಾಗಿರುವ ಲಕ್ಷದ್ವೀಪಕ್ಕೆ ಈ ಹೊಸ ನಿರ್ಧಾರವು ಆರ್ಥಿಕವಾಗಿ ಮತ್ತು ಪ್ರವಾಸೋದ್ಯಮದ ದೃಷ್ಟಿಯಿಂದ ಹೊಸ ದಿಕ್ಸೂಚಿ ನೀಡಲಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


