ಗೃಹ ಸಚಿವ ಖಾತೆ ಸಿಗುತ್ತಿದ್ದಂತೆ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್!: ಆರ್‌ಎಸ್‌ಎಸ್ ನೋಂದಣಿ ದಾಖಲೆ ಕೇಳಿ ಎಕ್ಸ್‌ನಲ್ಲಿ ವಾರ್ನಿಂಗ್

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸುತ್ತಿನ ಹೈ-ವೋಲ್ಟೇಜ್ ರಾಜಕೀಯ ಜಟಾಪಟಿ ಆರಂಭವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಐಟಿ-ಬಿಟಿ ಸಚಿವರಾಗಿದ್ದಾಗ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿರುದ್ಧ ಬಹಿರಂಗ ಸಮರ ಸಾರಿದ್ದ ಪ್ರಿಯಾಂಕ್ ಖರ್ಗೆ, ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಗೃಹ ಖಾತೆ ಸಿಗುತ್ತಿದ್ದಂತೆಯೇ ಆರ್‌ಎಸ್‌ಎಸ್‌ ಸಂಘಟನೆಯನ್ನು ಉದ್ದೇಶಿಸಿ ಅವರು ಮಾಡಿರುವ ಎಕ್ಸ್ (ಟ್ವಿಟರ್) ಪೋಸ್ಟ್ ಈಗ ಬಿಜೆಪಿಗರನ್ನು ಕೆರಳಿಸಿದೆ.

ಜೂನ್ 7ರಂದು ಎಕ್ಸ್ ಪೋಸ್ಟ್ ಮೂಲಕ ರಾಜ್ಯ ಬಿಜೆಪಿ ನಾಯಕರನ್ನು ಪ್ರಶ್ನಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, “ರಾಜ್ಯ ಬಿಜೆಪಿ ನಾಯಕರೇ ಏಕಿಷ್ಟು ಚಿಂತೆಗೊಳಗಾಗಿದ್ದೀರಿ? ನಾನು ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡು 48 ಗಂಟೆ ಕೂಡ ಆಗಿಲ್ಲ. ಆದರೆ ನಿಮ್ಮಲ್ಲಿನ ಭಯ, ಆತಂಕ, ನಿಮ್ಮಲ್ಲಿನ ದುಗುಡ ಎಲ್ಲವೂ ಎದ್ದು ಕಾಣುತ್ತಿದೆ. ಈಗಾಗಲೇ ಆರ್‌ಎಸ್‌ಎಸ್‌ನ್ನು ಬಳಸಿಕೊಂಡು ನನ್ನನ್ನು ನಿಂದಿಸುತ್ತಿದ್ದೀರಿ, ನನಗೆ ಜೀವ ಬೆದರಿಕೆ ಹಾಕುತ್ತಿದ್ದೀರಿ. ನೀವು ಮಾಡೋದನ್ನ ಮಾಡಿ. ಮುಖ್ಯವಾಗಿ, ನಿಮ್ಮ ‘ವ್ಯಕ್ತಿಗಳ ಸಂಘ’ಕ್ಕೆ ನನ್ನ ನಮಸ್ಕಾರವನ್ನೂ ತಿಳಿಸಿ. ನಿಮ್ಮ ರಾಜಕೀಯ ಮೇಲಧಿಕಾರದ ಸಂಘಟನೆಯ ನೋಂದಣಿಗಾಗಿ ದಾಖಲೆಗಳನ್ನು ಸಿದ್ಧವಾಗಿಡಲು ಹೇಳಿ” ಎಂದು ಬರೆಯುವ ಮೂಲಕ ಆರ್‌ಎಸ್‌ಎಸ್‌ ನೋಂದಣಿ ವಿಚಾರವನ್ನು ಕೆದಕಿದ್ದಾರೆ.

ಆರ್‌ಎಸ್‌ಎಸ್ ನೋಂದಣಿ ವಿಚಾರವಾಗಿ ಗೃಹ ಸಚಿವರ ಹೇಳಿಕೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಪ್ರಬಲವಾಗಿ ಸಮರ್ಥಿಸಿಕೊಂಡಿದ್ದಾರೆ. “ಗೃಹ ಸಚಿವರ ಹೇಳಿಕೆ ಸಂಪೂರ್ಣ ಸರಿಯಾಗಿದೆ. ಕಾನೂನು ಪ್ರಕಾರ ಕೆಲಸ ಮಾಡಲು ಯಾವುದೇ ಸಂಸ್ಥೆಗೆ ನೋಂದಣಿ ಅತ್ಯಗತ್ಯ. ನೋಂದಣಿ ಮಾಡಿಕೊಳ್ಳಲು ಆರ್‌ಎಸ್‌ಎಸ್‌ಗೆ ಏನು ಸಮಸ್ಯೆ? ಈ ದೇಶದಲ್ಲಿ ಯಾರೂ ಕಾನೂನಿಗಿಂತ ದೊಡ್ಡವರಲ್ಲ” ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರ ಈ ಹೇಳಿಕೆಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, “ರಾಷ್ಟ್ರೀಯ ಸ್ವಯಂಸೇವಕ ಸಂಘ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತ ಸೇರಿದಂತೆ ವಿಶ್ವದ 50ಕ್ಕೂ ಹೆಚ್ಚು ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ಸಂಘದ ನೋಂದಣಿ ಕುರಿತು ನಮ್ಮ ಸಂಘಟನೆಯ ಹಿರಿಯರೇ ಮಾತನಾಡಿದ್ದಾರೆ. ಹೀಗಾಗಿ ನಾವು ಉತ್ತರ ಕೊಡುವ ಅಗತ್ಯವಿಲ್ಲ, ಸಂಘವೇ ಸೂಕ್ತ ಉತ್ತರ ನೀಡುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: ಎನ್‌ಡಿಎ ರಾಜ್ಯಸಭಾ ಅಭ್ಯರ್ಥಿಯಾಗಿ ಪ್ರೊ. ಎಂ. ನಾಗರಾಜ: ಜೆಡಿಎಸ್‌ಗೆ ಶಾಕ್ ಕೊಟ್ಟ ಬಿಜೆಪಿ; ದೇವೇಗೌಡರ ಲೆಕ್ಕಾಚಾರ ಉಲ್ಟಾ!

ಇದೇ ವೇಳೆ ಇತಿಹಾಸವನ್ನು ನೆನಪಿಸಿದ ಕೋಟ ಶ್ರೀನಿವಾಸ್ ಪೂಜಾರಿ, “ಹಿಂದೆ ಜವಾಹರಲಾಲ್ ನೆಹರು ಅವರು ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಿದ್ದರು. ಆದರೆ ಅದೇ ನೆಹರು ನಿಷೇಧದ ಬಳಿಕ ಗಣರಾಜೋತ್ಸವ ಪರೇಡ್‌ನಲ್ಲಿ ಭಾಗವಹಿಸುವಂತೆ ಸಂಘಕ್ಕೆ ಮನವಿ ಮಾಡಿದ್ದರು. ಇಂದಿರಾ ಗಾಂಧಿ ಕೂಡ ಬ್ಯಾನ್ ಮಾಡಲು ಪ್ರಯತ್ನ ಪಟ್ಟು ಸೋತರು ಎಂಬುದನ್ನು ಕಾಂಗ್ರೆಸಿಗರು ನೆನಪಿನಲ್ಲಿಡಬೇಕು” ಎಂದು ನೆನಪಿಸಿದ್ದಾರೆ.

ಕೊನೆಯದಾಗಿ ಸಿಎಂ ಡಿಕೆಶಿ ಅವರ ನಡೆಯನ್ನು ಪ್ರಶ್ನಿಸಿದ ಅವರು, “ಸಿಎಂ ಶಿವಕುಮಾರ್ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ ಎನ್ನುತ್ತಾರೆ. ಆದರೆ ಅಪಪ್ರಚಾರ ಮಾಡುವ ವ್ಯಕ್ತಿಯನ್ನು ಗೃಹ ಮಂತ್ರಿಯನ್ನಾಗಿ ಮಾಡಿದ್ದಾರೆ. ಆರ್‌ಎಸ್‌ಎಸ್ ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ಜೈ ಎನ್ನುವ ಸಂಸ್ಥೆಯಲ್ಲ. ಆರ್‌ಎಸ್‌ಎಸ್‌ಗೆ ಕಿರುಕುಳ ಕೊಡುವುದನ್ನು ಬಿಟ್ಟು ಸಿಎಂ ಡಿಕೆಶಿ ಇತ್ತ ಗಮನಹರಿಸಲಿ. ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಇತಿಮಿತಿಗಳಲ್ಲಿ ಕೆಲಸ ಮಾಡಲಿ” ಎಂದು ಎಚ್ಚರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು