ದಾವಣಗೆರೆಯಲ್ಲಿ ಲೋಕಾಯುಕ್ತರ ಭಾರಿ ಬೇಟೆ!: ಕೆಆರ್‌ಐಡಿಎಲ್, ಎನ್‌ಡಬ್ಲ್ಯೂಕೆಆರ್‌ಟಿಸಿ ಸೇರಿದಂತೆ ಮೂವರು ಬಿಗ್ ಬಾಸ್‌ಗಳಿಗೆ ‘ಖೆಡ್ಡಾ’; 12 ತಂಡಗಳಿಂದ ಏಕಕಾಲಕ್ಕೆ ದಾಳಿ!

ದಾವಣಗೆರೆ: ಭ್ರಷ್ಟಾಚಾರ ನಿಗ್ರಹ ದಳ ಮತ್ತು ಲೋಕಾಯುಕ್ತ ಅಧಿಕಾರಿಗಳು ಬುಧವಾರ (ಜೂನ್ 17, 2026) ಬೆಳ್ಳಂಬೆಳಿಗ್ಗೆ ರಾಜ್ಯದ ಪ್ರಮುಖ ಸರ್ಕಾರಿ ಅಧಿಕಾರಿಗಳಿಗೆ ಭಾರಿ ಬಿಸಿ ಮುಟ್ಟಿಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಮೂವರು ಹಿರಿಯ ಅಧಿಕಾರಿಗಳಿಗೆ ಸೇರಿದ ದಾವಣಗೆರೆ, ಹುಬ್ಬಳ್ಳಿ, ಚಿತ್ರದುರ್ಗ ಹಾಗೂ ಬೆಳಗಾವಿಯ ಮನೆ ಮತ್ತು ಕಚೇರಿಗಳು ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ದಾವಣಗೆರೆ ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ಅವರ ನೇತೃತ್ವದಲ್ಲಿ ಒಟ್ಟು 12 ತಂಡಗಳು ಈ ಬೃಹತ್ ಜಂಟಿ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿವೆ.

ಸಿದ್ದೇಶ್ವರ ಹೆಬ್ಬಾಳ್ (ಮುಖ್ಯ ಯಾಂತ್ರಿಕ ಇಂಜಿನಿಯರ್, NWKRTC, ಹುಬ್ಬಳ್ಳಿ) ಇವರಿಗೆ ಸೇರಿದ ಒಟ್ಟು 4 ಕಡೆಗಳಲ್ಲಿ ಲೋಕಾಯುಕ್ತರು ಶೋಧ ನಡೆಸುತ್ತಿದ್ದಾರೆ. ದಾವಣಗೆರೆ ನಗರದ ಆಂಜನೇಯ ಬಡಾವಣೆಯಲ್ಲಿರುವ ಸಿದ್ದೇಶ್ವರ್ ಹೆಬ್ಬಾಳ್ ಅವರ ಐಷಾರಾಮಿ ನಿವಾಸ ಹಾಗೂ ಹುಬ್ಬಳ್ಳಿಯಲ್ಲಿರುವ ಅವರ ಕಚೇರಿಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನು ಕೃಷ್ಣ ನಾಯ್ಕ್ (ಕಾರ್ಯದರ್ಶಿ, ಬಯಲು ಸೀಮೆ ಪ್ರಾಧಿಕಾರ, ಚಿತ್ರದುರ್ಗ) ಅವರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯ ಪ್ರಗತಿಯಲ್ಲಿದೆ. ದಾವಣಗೆರೆ ನಗರದ ಸಿದ್ದವೀರಪ್ಪ ಬಡಾವಣೆಯಲ್ಲಿರುವ ಅವರ ಸ್ವಂತ ಮನೆ ಮತ್ತು ಚಿತ್ರದುರ್ಗದಲ್ಲಿರುವ ಅವರ ಕಚೇರಿಗಳ ಮೇಲೆ ದಾಳಿ ನಡೆಸಿ ಬೆಲೆಬಾಳುವ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ;ಸಚಿವ ಹೆಚ್.ಸಿ. ಮಹದೇವಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು!: ಸಮಾಜ ಕಲ್ಯಾಣ ಇಲಾಖೆ ಟೆಂಡರ್‌ನಲ್ಲಿ ಭ್ರಷ್ಟಾಚಾರ ಆರೋಪ; ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಆಗ್ರಹ! 

ಕೆಆರ್‌ಐಡಿಎಲ್ ಅಧೀಕ್ಷಕ ಇಂಜಿನಿಯರ್ ಆಗಿರುವ ಸಣ್ಣ ಕೆಂಚಪ್ಪ ಅವರ ದಾವಣಗೆರೆಯ ನಿವಾಸ ಹಾಗೂ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಬೆಳಗಾವಿಯ ಮನೆ ಸೇರಿದಂತೆ ಒಟ್ಟು 5 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಮೂವರು ಅಧಿಕಾರಿಗಳ ನಿವಾಸಗಳಲ್ಲಿ ಪತ್ತೆಯಾಗಿರುವ ಚಿನ್ನಾಭರಣ, ನಗದು, ಬ್ಯಾಂಕ್ ಲಾಕರ್ ಮತ್ತು ಸ್ಥಿರಾಸ್ತಿ (ಆಸ್ತಿ ಪತ್ರಗಳು) ಹೂಡಿಕೆಗಳ ದಸ್ತಾವೇಜುಗಳನ್ನು ಅಧಿಕಾರಿಗಳು ಜಾಲಾಡುತ್ತಿದ್ದಾರೆ. ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ನಿಖರ ದೂರುಗಳ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದ್ದು, ಸಂಜೆಯ ವೇಳೆಗೆ ವಶಪಡಿಸಿಕೊಂಡ ನಗದು ಮತ್ತು ಆಸ್ತಿಯ ಒಟ್ಟು ಮೌಲ್ಯದ ಕಂಪ್ಲೀಟ್ ಡಿಟೇಲ್ಸ್ ಹೊರಬೀಳಲಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು