ದೆಹಲಿ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ (UBT) ಪಾಳಯದ ಆರು ಲೋಕಸಭಾ ಸಂಸದರು ಪಕ್ಷ ತೊರೆಯಲು ಮುಂದಾಗಿರುವ ಬೆನ್ನಲ್ಲೇ, ಧಾರಾಶಿವ್ (ಉಸ್ಮಾನಾಬಾದ್) ಕ್ಷೇತ್ರದ ಸಂಸದ ಓಮ್ರಾಜೆ ನಿಂಬಾಳ್ಕರ್ (Omraje Nimbalkar) ಅವರ ಹೆಸರು ಈಗ ಮಹಾರಾಷ್ಟ್ರ ರಾಜಕೀಯದ ಕೇಂದ್ರಬಿಂದುವಾಗಿದೆ. ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್ ಅವರು ಓಮ್ರಾಜೆ ಅವರ ಪಕ್ಷಾಂತರದ ಚರ್ಚೆಯ ಹಿಂದೆ ಅವರ ತಂದೆಯ 20 ವರ್ಷಗಳ ಹಳೆಯ ಕೊಲೆ ಪ್ರಕರಣದ ತೀರ್ಪಿನ ಆಮಿಷವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಂಜಯ್ ರಾವತ್ ಅವರ ಪ್ರಕಾರ, ಉದ್ಧವ್ ಠಾಕ್ರೆ ಅವರ ನಿಷ್ಠಾವಂತರಾಗಿದ್ದ ಓಮ್ರಾಜೆ ನಿಂಬಾಳ್ಕರ್ ಅವರು ಬಣ ಬದಲಾಯಿಸುವ ಬಗ್ಗೆ ಯೋಚಿಸುತ್ತಿರುವುದಕ್ಕೆ ರಾಜಕೀಯ ಒತ್ತಡವೇ ಕಾರಣ. ಅವರ ತಂದೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ನಿಂದ ಅನುಕೂಲಕರವಾದ ತೀರ್ಪು (Favourable Verdict) ಕೊಡಿಸುವುದಾಗಿ ಆಡಳಿತ ಪಕ್ಷದವರು ಭರವಸೆ ನೀಡಿದ್ದಾರೆ. ಹೀಗಾಗಿಯೇ ಅವರು ಸದ್ಯ ಪಕ್ಷಾಂತರದ ನಿರ್ಧಾರದ ಸುಳಿಗೆ ಸಿಲುಕಿದ್ದಾರೆ ಎಂದು ರಾವತ್ ಹಕ್ಕು ಮಂಡಿಸಿದ್ದಾರೆ.
ಓಮ್ರಾಜೆ ನಿಂಬಾಳ್ಕರ್ ಅವರ ತಂದೆ ಪವನರಾಜೆ ನಿಂಬಾಳ್ಕರ್ ಅವರು ಉಸ್ಮಾನಾಬಾದ್ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದರು. ಆ ಭಾಗದಲ್ಲಿ ಅತ್ಯಂತ ಜನಪ್ರಿಯ ರಾಜಕಾರಣಿಯಾಗಿ ಬೆಳೆದಿದ್ದ ಪವನರಾಜೆ ಅವರು, ಪ್ರಾದೇಶಿಕವಾಗಿ ಎನ್ಸಿಪಿ (NCP) ಹಿರಿಯ ನಾಯಕ ಪದ್ಮಸಿಂಹ ಪಾಟೀಲ್ ಅವರ ಏಕಸ್ವಾಮ್ಯಕ್ಕೆ ಮತ್ತು ರಾಜಕೀಯ ಪ್ರಾಬಲ್ಯಕ್ಕೆ ದೊಡ್ಡ ಸವಾಲಾಗಿ ಮೂಡಿಬಂದಿದ್ದರು.
ಜೂನ್ 3, 2006 ರಂದು ಪವನರಾಜೆ ನಿಂಬಾಳ್ಕರ್ ಮತ್ತು ಅವರ ಚಾಲಕ ಸಮದ್ ಕಾಜಿ ಅವರು ಸ್ಕೋಡಾ ಕಾರಿನಲ್ಲಿ ನವಿ ಮುಂಬೈನ ಕಲಾಂಬೋಲಿ ಬಳಿ ಪ್ರಯಾಣಿಸುತ್ತಿದ್ದರು. ಈ ವೇಳೆ ಮತ್ತೊಂದು ವಾಹನದಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಇವರ ಕಾರನ್ನು ಅಡ್ಡಗಟ್ಟಿತ್ತು. ಕಾರು ನಿಲ್ಲಿಸುತ್ತಿದ್ದಂತೆ ಅತ್ಯಂತ ಹತ್ತಿರದಿಂದ ಗುಂಡಿನ ದಾಳಿ ನಡೆಸಿ ಪವನರಾಜೆ ಮತ್ತು ಚಾಲಕ ಕಾಜಿ ಇಬ್ಬರನ್ನೂ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.
ಈ ಹತ್ಯೆಯು ಇಡೀ ಮಹಾರಾಷ್ಟ್ರದ ರಾಜಕೀಯ ವಲಯವನ್ನು ನಡುಗಿಸಿತ್ತು. ಇದು ಕೇವಲ ವೈಯಕ್ತಿಕ ದ್ವೇಷವಲ್ಲ, ಬದಲಿಗೆ ರಾಜಕೀಯ ಪ್ರೇರಿತ ಸುಪಾರಿ ಕೊಲೆ (Contract Killing) ಎಂಬ ಆರೋಪಗಳು ತಕ್ಷಣವೇ ಕೇಳಿಬಂದಿದ್ದವು.
ನ್ಯಾಯಾಲಯದ ವಿಚಾರಣೆಯ ವೇಳೆ ದಾಖಲಾದ ಸಾಕ್ಷ್ಯಗಳ ಪ್ರಕಾರ, ಪವನರಾಜೆ ನಿಂಬಾಳ್ಕರ್ ಅವರು ಆರಂಭದಲ್ಲಿ ಪದ್ಮಸಿಂಹ ಪಾಟೀಲ್ ಅವರ ಬೆಂಬಲ ಮತ್ತು ಆಶೀರ್ವಾದದಿಂದಲೇ ರಾಜಕೀಯವಾಗಿ ಮೇಲೆ ಬಂದಿದ್ದರು. ಉಸ್ಮಾನಾಬಾದ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮತ್ತು ತೇರ್ನಾ ಸಕ್ಕರೆ ಕಾರ್ಖಾನೆಯಂತಹ ಪ್ರಮುಖ ಸಹಕಾರಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಆದರೆ, ದಿನಕಳೆದಂತೆ ಪವನರಾಜೆ ಅವರ ಸ್ವತಂತ್ರ ರಾಜಕೀಯ ಪ್ರಭಾವ ಹೆಚ್ಚಾಗತೊಡಗಿತು. ಇದು ಇಬ್ಬರು ನಾಯಕರ ನಡುವಿನ ಸಂಬಂಧ ಹಳಸಲು ಕಾರಣವಾಗಿ ಕೊನೆಗೆ ಮಹಾ ದುರಂತದಲ್ಲಿ ಅಂತ್ಯಕಂಡಿತ್ತು. ಇದೀಗ ಅದೇ ಪ್ರಕರಣದ ತೀರ್ಪು ಮಗನ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಹಂತಕ್ಕೆ ಬಂದು ನಿಂತಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


