‘ಕೆಎಸ್‌ಆರ್‌ಟಿಸಿ ಉಳಿಸಬೇಕು, ಜನರಿಗೂ ಹೊರೆಯಾಗಬಾರದು’: ಬಸ್ ಟಿಕೆಟ್ ದರ ಹೆಚ್ಚಳದ ಸುಳಿವು ನೀಡಿದ ಸರ್ಕಾರ

ಬೆಂಗಳೂರು: ಡೀಸೆಲ್ ದರ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲಾ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಹೆಚ್ಚಳದ ಪ್ರಸ್ತಾವನೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಶೀಲಿಸುತ್ತಿದೆ. ಸಚಿವ ಸಂಪುಟ ಸಭೆಯ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್ ಅವರು, ಸಾರಿಗೆ ಸಂಸ್ಥೆಗಳನ್ನು ನಷ್ಟದಿಂದ ಬಚಾವ್ ಮಾಡಲು ದರ ಪರಿಷ್ಕರಣೆಯ ಚಿಂತನೆ ನಡೆಸಿರುವುದಾಗಿ ಸುಳಿವು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್, “ಪ್ರಸ್ತುತ ಡೀಸೆಲ್ ಬೆಲೆ ತೀವ್ರವಾಗಿ ಹೆಚ್ಚಾಗಿದೆ. ಅತ್ಯಂತ ಆಶ್ಚರ್ಯದ ಸಂಗತಿಯೆಂದರೆ, ಸಾರಿಗೆ ನಿಗಮಗಳ ಡಿಪೋಗಳಲ್ಲಿ ಖರೀದಿಸುವ ಬಲ್ಕ್ ಡೀಸೆಲ್ ಬೆಲೆಗೂ ಮತ್ತು ಸಾರ್ವಜನಿಕ ಪೆಟ್ರೋಲ್ ಬಂಕ್‌ಗಳಲ್ಲಿ ಸಿಗುವ ರೀಟೇಲ್ ಡೀಸೆಲ್ ಬೆಲೆಗೂ ಸುಮಾರು 40 ರೂಪಾಯಿಗಳ ಭಾರಿ ವ್ಯತ್ಯಾಸವಿದೆ. ಈ ದರ ವ್ಯತ್ಯಾಸ ನೋಡಿದರೆ ಗಾಬರಿಯಾಗುತ್ತದೆ. ಈ ಕುರಿತು ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ತಿಳಿಸಿದರು.

ಡಿಪೋ ಡೀಸೆಲ್ ಬೆಲೆ ದುಬಾರಿಯಾಗಿರುವ ಕಾರಣ, ಕೆಲವು ಖಾಸಗಿ ಸಾರಿಗೆ ನಿರ್ವಾಹಕರು ಮತ್ತು ಸಂಸ್ಥೆಗಳು ಡಿಪೋಗಳಿಂದ ಇಂಧನ ಖರೀದಿಸುವುದನ್ನು ನಿಲ್ಲಿಸಿವೆ. ಬದಲಿಗೆ ಸಾರ್ವಜನಿಕ ಪೆಟ್ರೋಲ್ ಬಂಕ್‌ಗಳಿಂದಲೇ ಡೀಸೆಲ್ ಹಾಕಿಸಿಕೊಳ್ಳುತ್ತಿದ್ದಾರೆ. ಇದು ಸಾರಿಗೆ ಇಲಾಖೆಯ ಆರ್ಥಿಕ ನಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. “ಹಿಂದಿನ ಸರ್ಕಾರದ ಅವಧಿಯಲ್ಲಿ ಡೀಸೆಲ್ ಬೆಲೆ ಹೆಚ್ಚಾದಾಗ ಸ್ವಯಂಚಾಲಿತವಾಗಿ (Automatic) ಸಾರಿಗೆ ದರ ಹೆಚ್ಚಳ ಮಾಡುವ ತೀರ್ಮಾನವಿತ್ತು” ಎಂಬುದನ್ನು ಸಿಎಂ ಈ ಸಂದರ್ಭದಲ್ಲಿ ನೆನಪಿಸಿದರು.

ಇದನ್ನೂ ಓದಿ: ‘ಶಕ್ತಿ’ ಯೋಜನೆಗೆ ಬಿಗ್ ಅಪ್‌ಡೇಟ್!: ಉಚಿತ ಬಸ್ ಪ್ರಯಾಣಕ್ಕೆ ಇನ್ಮುಂದೆ ಸ್ಮಾರ್ಟ್ ಕಾರ್ಡ್ ಕಡ್ಡಾಯ; ವೋಟರ್ ಐಡಿ ಇದ್ದವರಿಗಷ್ಟೇ ಸಿಗಲಿದೆ ಸೌಲಭ್ಯ

“ನಮ್ಮ ಮುಂದಿರುವ ಮುಖ್ಯ ಗುರಿ ಕೆಎಸ್‌ಆರ್‌ಟಿಸಿಯನ್ನು ನಷ್ಟದಿಂದ ಮುಕ್ತಗೊಳಿಸಿ ಉಳಿಸುವುದು. ಹಾಗೆಯೇ, ದರ ಏರಿಕೆಯಿಂದ ಜನಸಾಮಾನ್ಯರಿಗೆ ತೀವ್ರ ಹೊರೆಯಾಗದಂತೆ ನೋಡಿಕೊಳ್ಳುವುದು. ಪ್ರಧಾನಮಂತ್ರಿಯವರೂ ಸಹ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಾಗಿ ಬಳಸಲು ಜನರಲ್ಲಿ ಮನವಿ ಮಾಡಿದ್ದಾರೆ. ಹೀಗಾಗಿ ರಾಜ್ಯ ಮತ್ತು ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಎಷ್ಟು ದರ ಹೆಚ್ಚಳ ಮಾಡಬೇಕು ಎನ್ನುವ ಬಗ್ಗೆ ಆದಷ್ಟು ಬೇಗ ಸಮತೋಲಿತ ನಿರ್ಧಾರ ಪ್ರಕಟಿಸಲಾಗುವುದು” ಎಂದು ಸಿಎಂ ಭರವಸೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು