ಕರಾಕಸ್: ದಕ್ಷಿಣ ಅಮೆರಿಕಾದ ಪ್ರಮುಖ ದೇಶವಾದ ವೆನೆಜುವೆಲಾದಲ್ಲಿ ಜೂನ್ 24ರ ಬುಧವಾರ ಸಂಜೆ ಶತಮಾನದ ಅತ್ಯಂತ ಭೀಕರ ಪ್ರಕೃತಿ ವಿಕೋಪ ಸಂಭವಿಸಿದೆ. ಕೇವಲ 39 ಸೆಕೆಂಡುಗಳ ಅಂತರದಲ್ಲಿ ಸಂಭವಿಸಿದ ಸರಣಿ ಪ್ರಬಲ ಅವಳಿ ಭೂಕಂಪಗಳ (Twin Earthquakes) ಪರಿಣಾಮವಾಗಿ ರಾಜಧಾನಿ ಕರಾಕಸ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕನಿಷ್ಠ 164 ಜನರು ಸಾವನ್ನಪ್ಪಿದ್ದಾರೆ ಮತ್ತು 971ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ದೇಶದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅಧಿಕೃತವಾಗಿ ಖಚಿತಪಡಿಸಿದ್ದಾರೆ.
ಭೂಕಂಪದ ತೀವ್ರತೆಗೆ ನೂರಾರು ಬೃಹತ್ ಕಟ್ಟಡಗಳು ನೆಲಸಮವಾಗಿದ್ದು, ಅವಶೇಷಗಳ ಅಡಿಯಲ್ಲಿ ಇನ್ನೂ ಸಾವಿರಾರು ಜನರು ಸಿಲುಕಿರುವ ಆತಂಕ ಎದುರಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಯುಎಸ್ ಜಿಯೋಲಾಜಿಕಲ್ ಸರ್ವೆ (USGS) ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಮೊದಲು ಕರಾಕಸ್‌ನಿಂದ 168 ಕಿ.ಮೀ ದೂರದ ಮೊರಾನ್ ಕರಾವಳಿಯಲ್ಲಿ 7.2 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಅದಾಗಿ ಕೇವಲ 39 ಸೆಕೆಂಡುಗಳ ಅಂತರದಲ್ಲೇ ಅದೇ ಭಾಗದಲ್ಲಿ ಮತ್ತೊಂದು ಅತ್ಯಂತ ಭೀಕರವಾದ 7.5 ತೀವ್ರತೆಯ ಭೂಕಂಪ ಅಪ್ಪಳಿಸಿದೆ.
ಈ ಸರಣಿ ಕಂಪನದ ತೀವ್ರತೆಗೆ ಕರಾಕಸ್ ಮತ್ತು ಲಾ ಗುವೈರಾ ರಾಜ್ಯದ ಬಹುಅಂತಸ್ತಿನ ವಾಣಿಜ್ಯ ಸಂಕೀರ್ಣಗಳು, ವಸತಿ ಗೃಹಗಳು ಕ್ಷಣಾರ್ಧದಲ್ಲಿ ಕುಸಿದು ಬಿದ್ದಿವೆ. ಪ್ರಮುಖ ವಿಮಾನ ನಿಲ್ದಾಣವಾದ ಸಿಮೋನ್ ಬೊಲಿವರ್ ಏರ್‌ಪೋರ್ಟ್ ಸಂಪೂರ್ಣ ಹಾನಿಗೊಳಗಾಗಿದ್ದು, ವಿಮಾನ ಯಾನವನ್ನು ಸ್ಥಗಿತಗೊಳಿಸಲಾಗಿದೆ. ರಸ್ತೆಗಳು ಜಖಂಗೊಂಡಿದ್ದು, ವಿದ್ಯುತ್ ಮತ್ತು ಮೊಬೈಲ್ ಸಂವಹನ ವ್ಯವಸ್ಥೆ ಸಂಪೂರ್ಣವಾಗಿ ಕಡಿತಗೊಂಡಿದೆ.
ಇದನ್ನೂ ಓದಿ:ಭಾರತದ ಇಂಧನ ವಲಯದಲ್ಲಿ ಐತಿಹಾಸಿಕ ಮೈಲಿಗಲ್ಲು!: ಇನ್ಮುಂದೆ ಇಂಧನಕ್ಕಾಗಿ ವಿದೇಶಗಳ ಮುಂದೆ ಕೈ ಚಾಚಬೇಕಿಲ್ಲ
ಭೂಕಂಪದ ಬೆನ್ನಲ್ಲೇ ದೇಶದಲ್ಲಿ ತುರ್ತು ಪರಿಸ್ಥಿತಿ (State of Emergency) ಘೋಷಿಸಲಾಗಿದೆ. ವಿಶ್ವಸಂಸ್ಥೆ (UN) ಹಾಗೂ ಅಮೆರಿಕ, ಬ್ರೆಜಿಲ್, ಇರಾನ್ ಸೇರಿದಂತೆ ಹಲವು ಜಾಗತಿಕ ದೇಶಗಳು ವೆನೆಜುವೆಲಾಕ್ಕೆ ತುರ್ತು ರಕ್ಷಣಾ ಪಡೆ ಹಾಗೂ ಆರ್ಥಿಕ ನೆರವು ನೀಡಲು ಮುಂದೆ ಬಂದಿವೆ. ಪ್ರಸ್ತುತ ಅವಶೇಷಗಳ ಅಡಿಯಿಂದ ಜನರನ್ನು ಹೊರತೆಗೆಯಲು ಮಿಲಿಟರಿ ಮತ್ತು ವಿಪತ್ತು ನಿರ್ವಹಣಾ ಪಡೆಗಳು ರಾತ್ರಿ ಇಡೀ ಕಾರ್ಯಾಚರಣೆ ನಡೆಸುತ್ತಿವೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

