ಭಾರತದ ಇಂಧನ ವಲಯದಲ್ಲಿ ಐತಿಹಾಸಿಕ ಮೈಲಿಗಲ್ಲು!: ಇನ್ಮುಂದೆ ಇಂಧನಕ್ಕಾಗಿ ವಿದೇಶಗಳ ಮುಂದೆ ಕೈ ಚಾಚಬೇಕಿಲ್ಲ

ನವದೆಹಲಿ: ಭಾರತದ ಇಂಧನ ವಲಯದಲ್ಲಿ (Energy Sector) ಹೊಸದೊಂದು ಆಶಾವಾದ ಹಾಗೂ ಇತಿಹಾಸ ಸೃಷ್ಟಿಸುವ ಭಾರಿ ಬೆಳವಣಿಗೆಯೊಂದು ನಡೆದಿದೆ. ದೇಶದ ಅಂಡಮಾನ್ ಸಮುದ್ರದ ಆಳದಲ್ಲಿ ಅತ್ಯಂತ ಬೃಹತ್ ಪ್ರಮಾಣದ ನೈಸರ್ಗಿಕ ಅನಿಲ (Natural Gas) ನಿಕ್ಷೇಪ ಇರುವುದು ಪತ್ತೆಯಾಗಿದ್ದು, ಇಂಧನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸುವ ಕನಸಿಗೆ ಹೊಸ ಚಾಲನೆ ಸಿಕ್ಕಂತಾಗಿದೆ. ಸರ್ಕಾರಿ ಸ್ವಾಮ್ಯದ ಮಹಾರತ್ನ ಸಂಸ್ಥೆಯಾದ ‘ಆಯಿಲ್ ಇಂಡಿಯಾ ಲಿಮಿಟೆಡ್’ (OIL) ಅಂಡಮಾನ್ ದ್ವೀಪಗಳ ಸಾಗರೋತ್ತರ ಪರಿಶೋಧನಾ ಬಾವಿಯಲ್ಲಿ ನೈಸರ್ಗಿಕ ಅನಿಲ ಇರುವುದನ್ನು ಅಧಿಕೃತವಾಗಿ ಖಚಿತಪಡಿಸಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ನೀಡಿರುವ ಮಾಹಿತಿ ಪ್ರಕಾರ, ಅಂಡಮಾನ್ ದ್ವೀಪಗಳ ಪೂರ್ವ ಕರಾವಳಿಯಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿ, 355 ಮೀಟರ್ ಆಳದ ಸಮುದ್ರದಲ್ಲಿ ‘ವಿಜಯಪುರಂ-3’ (Vijayapuram-3) ಹೆಸರಿನ ಪರಿಶೋಧನಾ ಬಾವಿಯನ್ನು ಕೊರೆಯಲಾಗಿತ್ತು. ಈ ವೇಳೆ ಇಯೊಸೀನ್ (Eocene) ರಚನೆಯಲ್ಲಿ ಬರೋಬ್ಬರಿ 1900 ಮೀಟರ್‌ಗಿಂತಲೂ ಹೆಚ್ಚಿನ ಆಳದಲ್ಲಿ ನೈಸರ್ಗಿಕ ಅನಿಲ ಇರುವುದು ಪತ್ತೆಯಾಗಿದೆ. ಆರಂಭಿಕ ಪರೀಕ್ಷೆಗಳ ವೇಳೆ ನಿರಂತರವಾಗಿ ಜ್ವಾಲೆ (Continuous Flaring) ಮೂಡುವ ಮೂಲಕ ಅನಿಲದ ಇರುವಿಕೆ ಸಾಬೀತಾಗಿದೆ.

ಇಲ್ಲಿದೆ ನೋಡಿ ಎಕ್ಸ್ ವಿಡಿಯೋ

ಆಯಿಲ್ ಇಂಡಿಯಾ ಸಂಸ್ಥೆಯು ಅಂಡಮಾನ್ ಬೇಸಿನ್‌ನಲ್ಲಿ ನಡೆಸುತ್ತಿರುವ ಸಾಗರೋತ್ತರ ಪರಿಶೋಧನಾ ಅಭಿಯಾನದಲ್ಲಿ ಇದು ಸಿಕ್ಕಿರುವ ಸತತ ಎರಡನೇ ಯಶಸ್ಸಾಗಿದೆ. ಇದಕ್ಕೂ ಮುನ್ನ ಸೆಪ್ಟೆಂಬರ್ 2025 ರಲ್ಲಿ ‘ವಿಜಯಪುರಂ-2’ ಬಾವಿಯಲ್ಲೂ ಅನಿಲ ಪತ್ತೆಯಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ಮಹತ್ವಾಕಾಂಕ್ಷೆಯ ‘ಸಮುದ್ರ ಮಂಥನ ಮಿಷನ್’ (ರಾಷ್ಟ್ರೀಯ ಆಳ ಸಮುದ್ರ ಪರಿಶೋಧನಾ ಯೋಜನೆ) ಅಡಿಯಲ್ಲಿ ಈ ಯಶಸ್ಸು ಸಿಕ್ಕಿದ್ದು, ಮುಂಬರುವ ದಿನಗಳಲ್ಲಿ ಅಂಡಮಾನ್ ವಲಯವು ಭಾರತದ ಪ್ರಮುಖ ಹೈಡ್ರೋಕಾರ್ಬನ್ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಲಿದೆ.

ಇದನ್ನೂ ಓದಿ: ಆರ್‌ಬಿಐನಿಂದ ಮತ್ತೆ ‘ಪ್ಲಾಸ್ಟಿಕ್ ನೋಟು’ ಚಲಾವಣೆ ಮಾಸ್ಟರ್ ಪ್ಲಾನ್!: ವರ್ಷಕ್ಕೆ 6,372 ಕೋಟಿ ದಾಟಿದ ಮುದ್ರಣ ವೆಚ್ಚ; ನೋಟು ಬ್ಯಾನ್ ವದಂತಿಯ ಅಸಲಿ ಸತ್ಯ ಇಲ್ಲಿದೆ!

ಪ್ರಸ್ತುತ ಪತ್ತೆಯಾಗಿರುವ ಅನಿಲದ ಗುಣಮಟ್ಟ, ಸಂಯೋಜನೆ ಮತ್ತು ಅದರ ವಾಣಿಜ್ಯ ಮೌಲ್ಯದ ಕುರಿತು ಆಯಿಲ್ ಇಂಡಿಯಾ ತಜ್ಞರು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ. ಈ ಆಳ ಸಮುದ್ರದ ಇಂಧನವನ್ನು ಹೊರತೆಗೆಯಲು ಭಾರತವು ಜಾಗತಿಕ ದೈತ್ಯ ಕಂಪನಿಗಳಾದ ಟೋಟಲ್ ಎನರ್ಜಿಸ್, ಬಿಪಿ ಇಂಡಿಯಾ, ಶೆಲ್ ಮತ್ತು ಎಕ್ಸಾನ್ ಮೊಬಿಲ್‌ನಂತಹ ಅಂತರರಾಷ್ಟ್ರೀಯ ತಜ್ಞರ ತಾಂತ್ರಿಕ ನೆರವನ್ನು ಪಡೆದುಕೊಳ್ಳಲಿದೆ. ಇದರಿಂದಾಗಿ ಭಾರತವು ವಿದೇಶಗಳಿಂದ ಆಮದು ಮಾಡಿಕೊಳ್ಳುವ ಇಂಧನದ ಪ್ರಮಾಣ ಗಣನೀಯವಾಗಿ ತಗ್ಗಲಿದ್ದು, ದೇಶದ ಆರ್ಥಿಕತೆಗೆ ಭಾರಿ ಲಾಭವಾಗಲಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು