ಬೆಂಗಳೂರು: ದೇಶದಲ್ಲಿ ನಗದು ಹಣದ ಬೇಡಿಕೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವ ಬೆನ್ನಲ್ಲೇ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಕರೆನ್ಸಿ ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆ ತರಲು ಗಂಭೀರ ಚಿಂತನೆ ನಡೆಸಿದೆ. ಬ್ಯಾಂಕ್ ನೋಟುಗಳ ಮರುಮುದ್ರಣ ವೆಚ್ಚವನ್ನು ತಗ್ಗಿಸಲು ಮತ್ತು ಅವುಗಳ ಬಾಳಿಕೆಯನ್ನು ಹೆಚ್ಚಿಸಲು ಕಾಗದದ ನೋಟುಗಳ ಬದಲು ‘ಪಾಲಿಮರ್’ ಅಂದರೆ ಪ್ಲಾಸ್ಟಿಕ್ ನೋಟುಗಳನ್ನು (Plastic Notes) ಮತ್ತೆ ಮಾರುಕಟ್ಟೆಗೆ ಪರಿಚಯಿಸುವ ಕುರಿತು ಆರ್‌ಬಿಐ ಮಂಡಳಿ ಸಭೆಗಳಲ್ಲಿ ಸುದೀರ್ಘ ಚರ್ಚೆ ನಡೆದಿದೆ.
ಆದರೆ, ಈ ಬೆಳವಣಿಗೆಯ ನಡುವೆ ಪ್ರಸ್ತುತ ಚಲಾವಣೆಯಲ್ಲಿರುವ ₹50, ₹100 ಮತ್ತು ₹500 ಮುಖಬೆಲೆಯ ಕಾಗದದ ನೋಟುಗಳನ್ನು ಸಂಪೂರ್ಣವಾಗಿ ಬ್ಯಾನ್ (ರದ್ದು) ಮಾಡಲಾಗುತ್ತದೆ ಎಂಬ ವದಂತಿಗಳು ಹರಡುತ್ತಿದ್ದು, ಸಾರ್ವಜನಿಕರು ಇಂತಹ ಆತಂಕಗಳಿಗೆ ಕಿವಿಗೊಡಬೇಕಾಗಿಲ್ಲ. ಪ್ರಸ್ತುತ ಇರುವ ಕಾಗದದ ನೋಟುಗಳು ಕಾನೂನುಬದ್ಧವಾಗಿ ಚಲಾವಣೆಯಲ್ಲಿ ಮುಂದುವರಿಯಲಿದ್ದು, ಪ್ಲಾಸ್ಟಿಕ್ ನೋಟುಗಳು ಕೇವಲ ಪರ್ಯಾಯವಾಗಿ ಹಂತ-ಹಂತವಾಗಿ ಮಾರುಕಟ್ಟೆಗೆ ಬರಲಿವೆ.
ಪಾಟ್ನಾ, ಮುಂಬೈ ಸಭೆಗಳಲ್ಲಿ ಚರ್ಚೆ; ಮುದ್ರಣ ವೆಚ್ಚಕ್ಕೆ ಬೀಳಲಿದೆ ಬ್ರೇಕ್!:
ಮಾಧ್ಯಮ ವರದಿಗಳ ಪ್ರಕಾರ, ಪಾಟ್ನಾ ಮತ್ತು ಮುಂಬೈನಲ್ಲಿ ಇತ್ತೀಚೆಗೆ ನಡೆದ ಆರ್‌ಬಿಐ ಮಂಡಳಿಯ ಉನ್ನತ ಮಟ್ಟದ ಸಭೆಗಳಲ್ಲಿ ಪಾಲಿಮರ್ ನೋಟುಗಳ ಅನುಷ್ಠಾನದ ಬಗ್ಗೆ ಮಹತ್ವದ ಚರ್ಚೆಗಳು ನಡೆದಿವೆ. ಭಾರತದಲ್ಲಿ ಪ್ರತಿದಿನ ಶತಕೋಟಿ ಕರೆನ್ಸಿ ನೋಟುಗಳು ನಿರಂತರವಾಗಿ ವಿನಿಮಯಗೊಳ್ಳುವುದರಿಂದ ಕಾಗದದ ನೋಟುಗಳು ಬೇಗನೆ ಕೊಳೆಯಾಗುತ್ತಿವೆ ಹಾಗೂ ಹರಿದು ಹೋಗುತ್ತಿವೆ. ಆರ್‌ಬಿಐ ಬಿಡುಗಡೆ ಮಾಡಿರುವ ವಾರ್ಷಿಕ ವರದಿಯ ಪ್ರಕಾರ, ನೋಟು ಮುದ್ರಣಕ್ಕಾಗಿ ಸರ್ಕಾರ ಮಾಡುತ್ತಿರುವ ಖರ್ಚು ವರ್ಷದಿಂದ ವರ್ಷಕ್ಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹಿಂದಿನ ಹಣಕಾಸು ವರ್ಷದಲ್ಲಿ 5,101.4 ಕೋಟಿ ರೂಪಾಯಿಯಾಗಿದ್ದ ನೋಟು ಮುದ್ರಣ ವೆಚ್ಚವು, 2025ರ ಹಣಕಾಸು ವರ್ಷದಲ್ಲಿ ಬರೋಬ್ಬರಿ 6,372.8 ಕೋಟಿ ರೂಪಾಯಿಗೆ ತಲುಪಿದೆ! ಈ ಕೋಟ್ಯಂತರ ರೂಪಾಯಿ ನಷ್ಟವನ್ನು ತಡೆಯಲು ಪ್ಲಾಸ್ಟಿಕ್ ನೋಟು ಅತ್ಯುತ್ತಮ ಪರ್ಯಾಯವಾಗಿದೆ.
ಇದನ್ನೂ ಓದಿ:ಪ್ರವಾಸೋದ್ಯಮ ಕ್ಷೇತ್ರ ಇನ್ಮುಂದೆ ಸಂಪೂರ್ಣ ‘ಎಐ’ ಮಯ!
2012ರ ಯುಪಿಎ ಯೋಜನೆಯ ಪುನರುಜ್ಜೀವನ!:
ಇದೇ ಮೊದಲ ಬಾರಿಗೆ ಇಂತಹ ಪ್ರಯೋಗ ನಡೆಯುತ್ತಿಲ್ಲ. ಈ ಹಿಂದೆ 2012ರಲ್ಲೇ ಯುಪಿಎ ಸರ್ಕಾರವು ದೇಶದ ಐದು ಆಯ್ದ ನಗರಗಳಲ್ಲಿ 10 ರೂಪಾಯಿ ಮುಖಬೆಲೆಯ 100 ಕೋಟಿ ಪ್ಲಾಸ್ಟಿಕ್ ನೋಟುಗಳನ್ನು ಪ್ರಾಯೋಗಿಕವಾಗಿ ಚಲಾವಣೆಗೆ ತರಲು ಅನುಮೋದನೆ ನೀಡಿತ್ತು. ಆದರೆ, ಆಗಿನ ತಾಂತ್ರಿಕ ಅಡಚಣೆಗಳಿಂದಾಗಿ ಆ ಯೋಜನೆಯನ್ನು ಅರ್ಧಕ್ಕೆ ಕೈಬಿಡಲಾಗಿತ್ತು. ಇದೀಗ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳು ಲಭ್ಯವಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಮತ್ತೊಮ್ಮೆ ಈ ಮಹತ್ವದ ತಂತ್ರಜ್ಞಾನವನ್ನು ಮರಳಿ ತರಲು ವೇದಿಕೆ ಸಿದ್ಧಪಡಿಸುತ್ತಿದೆ. ಪ್ಲಾಸ್ಟಿಕ್ ನೋಟುಗಳು ಕಾಗದದ ನೋಟುಗಳಿಗಿಂತ ದೀರ್ಘಕಾಲ ಬಾಳಿಕೆ ಬರುವುದಲ್ಲದೆ, ಇವುಗಳನ್ನು ನಕಲು (Counterfeit) ಮಾಡುವುದು ಕೂಡ ಅಸಾಧ್ಯವಾಗಿದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


