ಮೊಹರಂ ವೇಳೆ 15 ಸಾವಿರ ಜನರನ್ನು ಸಾಯಿಸಲು ಸ್ಕೆಚ್ ಹಾಕಿದ್ದ ವ್ಯಕ್ತಿ ಸೆರೆ

ಮುಂಬೈ: ಮುಂಬೈನ ಮೊಹರಂ (ಆಶೂರಾ) ಮೆರವಣಿಗೆಯಲ್ಲಿ ಸಾವಿರಾರು ಜನರಿಗೆ ವಿಷಕಾರಿ ಮಾತ್ರೆಗಳನ್ನು ಹಂಚಿ ಭಾರಿ ದುರಂತ ಸೃಷ್ಟಿಸಲು ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂವರು ಮಹಿಳಾ ಸ್ವಯಂಸೇವಕರ ಸಮಯಪ್ರಜ್ಞೆಯಿಂದ ಈ ಭೀಕರ ಸಂಚು ವಿಫಲಗೊಂಡಿದ್ದು, ಸಾವಿರಾರು ಜನರ ಜೀವ ಉಳಿದಿದೆ.

ಬಂಧಿತನನ್ನು ಫಯ್ಯಾಜ್ ಪ್ರೇಮ್‌ಜಿ ಎಂದು ಗುರುತಿಸಲಾಗಿದೆ. ಆತ ಬೈಕುಲ್ಲಾ ಪ್ರದೇಶದ ರೆಹಮತಾಬಾದ್ ಸಮಾಧಿ ಸಮೀಪ ನಡೆಯುತ್ತಿದ್ದ ಆಶೂರಾ ಮೆರವಣಿಗೆಯಲ್ಲಿ ನೋವು ನಿವಾರಕ ಹಾಗೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಗಳೆಂದು ಹೇಳಿ ಕ್ಯಾಪ್ಸುಲ್‌ಗಳನ್ನು ಜನರಿಗೆ ವಿತರಿಸುತ್ತಿದ್ದನು.

Advertisement

ಆರೋಪಿಯ ವರ್ತನೆ ಅನುಮಾನಾಸ್ಪದವಾಗಿದ್ದುದನ್ನು ಗಮನಿಸಿದ ಮೂವರು ಮಹಿಳಾ ಸ್ವಯಂಸೇವಕರು ತಕ್ಷಣ ಆತನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದರು. ಅಲ್ಲದೆ ಧ್ವನಿವರ್ಧಕದ ಮೂಲಕ ಜನರಿಗೆ ಯಾವುದೇ ಮಾತ್ರೆ ಸೇವಿಸದಂತೆ ಎಚ್ಚರಿಕೆ ನೀಡಲಾಯಿತು.

ಈ ವೇಳೆ ಕನಿಷ್ಠ 11 ಮಂದಿ ಆ ಕ್ಯಾಪ್ಸುಲ್ ಸೇವಿಸಿದ್ದರಿಂದ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಬಳಿಕ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ವಾರದೊಳಗೆ ಎರಡನೇ ಬಾರಿಗೆ ಹುಸಿ ಬಾಂಬ್ ಬೆದರಿಕೆ

ಪೊಲೀಸರ ತನಿಖೆಯಲ್ಲಿ ಕ್ಯಾಪ್ಸುಲ್‌ಗಳಲ್ಲಿ ಇಲಿ ವಿಷವಾಗಿ ಬಳಸುವ ಅತ್ಯಂತ ವಿಷಕಾರಿ ಜಿಂಕ್ ಫಾಸ್ಫೈಡ್ (Zinc Phosphide) ಎಂಬ ರಾಸಾಯನಿಕವನ್ನು ಬೆರೆಸಲಾಗಿತ್ತು ಎಂಬುದು ದೃಢಪಟ್ಟಿದೆ. ಈ ರಾಸಾಯನಿಕವು ಹೊಟ್ಟೆಯ ಆಮ್ಲದೊಂದಿಗೆ ಪ್ರತಿಕ್ರಿಯಿಸಿ ವಿಷಕಾರಿ ಫಾಸ್ಫಿನ್ ಅನಿಲವನ್ನು ಉತ್ಪಾದಿಸಿ ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ ಹಾಗೂ ಮೆದುಳಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದಕ್ಕೆ ನಿರ್ದಿಷ್ಟ ಪ್ರತಿವಿಷ (Antidote) ಇಲ್ಲ ಎಂದು ವೈದ್ಯಕೀಯ ತಜ್ಞರು ತಿಳಿಸಿದ್ದಾರೆ.

ಪೊಲೀಸರು ಆರೋಪಿಯಿಂದ ಸುಮಾರು 14,900 ವಿಷಕಾರಿ ಕ್ಯಾಪ್ಸುಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆತ 30,000 ಖಾಲಿ ಕ್ಯಾಪ್ಸುಲ್‌ಗಳು ಹಾಗೂ 50 ಕೆಜಿ ಫಾಸ್ಫರಸ್ ಖರೀದಿಸಲು ಆದೇಶ ನೀಡಿದ್ದಾನೆ ಎಂಬ ಮಾಹಿತಿಯೂ ಬಹಿರಂಗವಾಗಿದೆ.

ವಿಚಾರಣೆ ವೇಳೆ ಆರೋಪಿಯು “ಕನಿಷ್ಠ 15 ಸಾವಿರ ಜನರನ್ನು ಕೊಲ್ಲುವ ಉದ್ದೇಶ ಹೊಂದಿದ್ದೆ” ಎಂದು ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಆತ ಬಿಬಿಎ ಪದವೀಧರನಾಗಿದ್ದು, ಈ ಹಿಂದೆ ಇರಾನ್ ಹಾಗೂ ಇರಾಕ್‌ಗೆ ಭೇಟಿ ನೀಡಿದ್ದ ಹಿನ್ನೆಲೆಯೂ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಕುಲ್ಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 123 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇದರ ಹಿಂದೆ ಯಾವುದೇ ಭಯೋತ್ಪಾದಕ ಸಂಘಟನೆ ಅಥವಾ ಸಂಚು ಇದೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *