ಉಡುಪಿ: ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ವಾರದೊಳಗೆ ಎರಡನೇ ಬಾರಿಗೆ ಇ-ಮೇಲ್ ಮೂಲಕ ಹುಸಿ ಬಾಂಬ್ ಬೆದರಿಕೆ ಬಂದಿದ್ದು, ಪೊಲೀಸರು ಶ್ವಾನದಳ ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDDS) ಸಹಾಯದಿಂದ ನ್ಯಾಯಾಲಯದ ಆವರಣದಲ್ಲಿ ಸಮಗ್ರ ತಪಾಸಣೆ ನಡೆಸಿದ್ದಾರೆ. ತಪಾಸಣೆ ವೇಳೆ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ.
ಜೂನ್ 26ರಂದು ರಾತ್ರಿ 8:53ಕ್ಕೆ ಜಿಲ್ಲಾ ನ್ಯಾಯಾಲಯದ ಅಧಿಕೃತ ಇ-ಮೇಲ್ ವಿಳಾಸಕ್ಕೆ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಆದರೆ, ಜೂನ್ 27ರಂದು ಬೆಳಿಗ್ಗೆ ಸುಮಾರು 11:30ಕ್ಕೆ ಸಿಬ್ಬಂದಿಯ ಗಮನಕ್ಕೆ ಈ ಇ-ಮೇಲ್ ಬಂದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಇ-ಮೇಲ್ನಲ್ಲಿ ನ್ಯಾಯಾಲಯದ ದಾಖಲೆ ಕೊಠಡಿ ಹಾಗೂ ಮೊದಲ ಮಹಡಿಯಲ್ಲಿರುವ ಇ-ಸೆಂಟರ್ನಲ್ಲಿ ಐದು ‘ಸಿಲಿಕಾನ್ ಡೈನಮೈಟ್ ಬಾಂಬ್’ಗಳನ್ನು ಇರಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು.
ಮಾಹಿತಿ ಪಡೆದ ತಕ್ಷಣ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್, ಉಪನಿರೀಕ್ಷಕರಾದ ಭರತೇಶ್, ಎರಣ್ಣ, ರತ್ನಾಕರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಭದ್ರತೆ ಒದಗಿಸಿದರು. ಬಳಿಕ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳ ನ್ಯಾಯಾಲಯದ ವಿವಿಧ ವಿಭಾಗಗಳಲ್ಲಿ ತಪಾಸಣೆ ನಡೆಸಿತು.
ಜೂನ್ 22ರಂದು ಇದೇ ನ್ಯಾಯಾಲಯಕ್ಕೆ ಇದೇ ರೀತಿಯ ಬೆದರಿಕೆ ಬಂದಿದ್ದಾಗ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಈ ಬಾರಿ ವಕೀಲರು, ನ್ಯಾಯಾಲಯಕ್ಕೆ ಬಂದಿದ್ದ ಸಾರ್ವಜನಿಕರು ಹಾಗೂ ನ್ಯಾಯಾಧೀಶರು ಶಾಂತವಾಗಿ ಪರಿಸ್ಥಿತಿಯನ್ನು ಎದುರಿಸಿದರು.
ತಪಾಸಣೆಯ ಸಮಯದಲ್ಲಿ ಕೆಲ ಹೊತ್ತು ವಕೀಲರು ಹಾಗೂ ಸಾರ್ವಜನಿಕರನ್ನು ನ್ಯಾಯಾಲಯದ ಸಭಾಂಗಣದಿಂದ ಹೊರಗೆ ಕಳುಹಿಸಲಾಯಿತಾದರೂ, ನ್ಯಾಯಾಧೀಶರು ವಿಚಾರಣೆಯನ್ನು ಮುಂದುವರಿಸಿದರು. ತಪಾಸಣೆ ಪೂರ್ಣಗೊಂಡ ಬಳಿಕ ನ್ಯಾಯಾಲಯದ ಕಾರ್ಯಚಟುವಟಿಕೆಗಳು ಎಂದಿನಂತೆ ಮುಂದುವರಿದವು.
ಇಂಗ್ಲಿಷ್ನಲ್ಲಿ ಬರೆಯಲಾಗಿದ್ದ ಬೆದರಿಕೆ ಇ-ಮೇಲ್ನಲ್ಲಿ ರಾಜಕೀಯ ಹಾಗೂ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಆಧಾರರಹಿತ ಮತ್ತು ವಿಚಿತ್ರ ಆರೋಪಗಳನ್ನು ಮಾಡಲಾಗಿತ್ತು. ಈ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಇ-ಮೇಲ್ನ ಮೂಲವನ್ನು ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಪದೇ ಪದೇ ಬರುತ್ತಿರುವ ಹುಸಿ ಬೆದರಿಕೆಗಳ ಹಿಂದಿರುವ ವ್ಯಕ್ತಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದಾರೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

