ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿರುವ ಕಲ್ಲು ಕ್ವಾರಿಯೊಂದರಲ್ಲಿ ದೈತ್ಯ ಬಂಡೆಯೊಂದು ಕುಸಿದು ಬಿದ್ದ ಪರಿಣಾಮ, ಬಿಹಾರ ಮೂಲದ ಏಳು ಮಂದಿ ವಲಸೆ ಕಾರ್ಮಿಕರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಗುರುವಾರ ಮುಂಜಾನೆ ಈ ದಾರುಣ ಘಟನೆ ನಡೆದಿದ್ದು, ಹಲವು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ವಾರಿ ಕಾರ್ಯಾಚರಣೆ ವೇಳೆ ಸಂಭವಿಸಿದ ದುರಂತ:

ಮೃತರನ್ನು ಬಿಹಾರ ಮೂಲದ ದಿನಗೂಲಿ ಕಾರ್ಮಿಕರು ಎಂದು ಗುರುತಿಸಲಾಗಿದೆ. ಮುಂಜಾನೆ ಕಾರ್ಮಿಕರು ಎಂದಿನಂತೆ ಸ್ಟೋನ್ ಕ್ರಷರ್ ಹಾಗೂ ಕ್ವಾರಿ ಆವರಣದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ, ಹಠಾತ್ ಆಗಿ ಬೃಹತ್ ಬಂಡೆಯೊಂದು ಉರುಳಿ ಬಿದ್ದಿದೆ. ಇದರ ಪರಿಣಾಮವಾಗಿ ಕಾರ್ಮಿಕರು ಕಲ್ಲಿನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ದೈತ್ಯ ಬಂಡೆಯ ಭಾರಕ್ಕೆ ಸಿಲುಕಿ ಏಳು ಮಂದಿ ಉಸಿರುಗಟ್ಟಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಇತರ ಕಾರ್ಮಿಕರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ನಿಖರ ಸಂಖ್ಯೆಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆಯಾದರೂ, ಆರಂಭಿಕ ವರದಿಗಳ ಪ್ರಕಾರ ಹಲವಾರು ಕಾರ್ಮಿಕರಿಗೆ ತೀವ್ರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮದುವೆ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನೇ ಚಾಕುವಿನಿಂದ ಇರಿದು ಕೊಂದ ಪಾಪಿ ಪ್ರೇಮಿ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ, ಮಾಲೀಕರಿಗೆ ವಾರ್ನಿಂಗ್:
ಕ್ವಾರಿ ದುರಂತದಲ್ಲಿ ಕಾರ್ಮಿಕರು ಮೃತಪಟ್ಟ ಘಟನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ‘X’ (ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, “ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕ್ರಷರ್ ಗೋಡೆ (ಬಂಡೆ) ಕುಸಿದು 7 ಕಾರ್ಮಿಕರು ಸಾವನ್ನಪ್ಪಿರುವುದು ತೀವ್ರ ಕೌಟುಂಬಿಕ ಮತ್ತು ಸಾಮಾಜಿಕ ದುಃಖವನ್ನು ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಗಳಿಗೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಮತ್ತು ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ತಿಳಿಸಿದ್ದಾರೆ.
ಅಲ್ಲದೆ, ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಜೀವಕ್ಕೆ ರಕ್ಷಣೆ ಮತ್ತು ಭದ್ರತೆ ಒದಗಿಸುವುದು ಕಡ್ಡಾಯವಾಗಿ ಕ್ವಾರಿ ಮಾಲೀಕರ ಕರ್ತವ್ಯವಾಗಿದೆ ಎಂದು ಸಿಎಂ ಒತ್ತಿಹೇಳಿದ್ದಾರೆ. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಣೆ ನಡೆಸುವ ಇಂತಹ ಕ್ವಾರಿಗಳ ವಿರುದ್ಧ ಸರ್ಕಾರ ಅತ್ಯಂತ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

