ಬೆಂಗಳೂರು: ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ತೀವ್ರ ಗಲಾಟೆಯ ಬೆನ್ನಲ್ಲೇ, ಪ್ರೇಮಿಯೊಬ್ಬ ತನ್ನ 23 ವರ್ಷದ ಪ್ರೇಯಸಿಯನ್ನು ಚಾಕುವಿನಿಂದ ಕುತ್ತಿಗೆಗೆ ಇರಿದು ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ರಾಜಧಾನಿಯ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜೂನ್ 28ರ ಭಾನುವಾರದಂದು ಪೈಪ್‌ಲೈನ್ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ.
ಕೊಲೆಯಾದ ದುರ್ದೈವಿ ಯುವತಿಯನ್ನು ಅಂಜಲಿ ಎಂದು ಗುರುತಿಸಲಾಗಿದೆ. ಆರೋಪಿ ರಾಜೀವ್ ಹಾಗೂ ಅಂಜಲಿ ಕಳೆದ ಮೂರರಿಂದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರೂ ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ಇವರ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಆದರೆ, ಆರೋಪಿ ರಾಜೀವ್‌ನ ಹಿನ್ನೆಲೆ ಸರಿಯಿಲ್ಲದ ಕಾರಣ ಅಂಜಲಿ ಕುಟುಂಬಸ್ಥರು ಇವರ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಮದುವೆಗೆ ಒಪ್ಪಿಕೊಳ್ಳುವಂತೆ ರಾಜೀವ್ ನಿರಂತರವಾಗಿ ಅಂಜಲಿ ಹಾಗೂ ಆಕೆಯ ಕುಟುಂಬದವರನ್ನು ಒಪ್ಪಿಸಲು ಪ್ರಯತ್ನಿಸುತ್ತಿದ್ದ. ಆದರೆ, ಹೆತ್ತವರ ಒತ್ತಡಕ್ಕೆ ಮಣಿದಿದ್ದ ಅಂಜಲಿ, ಕಳೆದ ಕೆಲವು ದಿನಗಳಿಂದ ರಾಜೀವ್‌ನನ್ನು ಭೇಟಿಯಾಗುವುದನ್ನು ಹಾಗೂ ಆತನೊಂದಿಗೆ ಮಾತನಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ, ಆತನಿಂದ ದೂರವಿರಲು ಆರಂಭಿಸಿದ್ದಳು.
ಇದನ್ನೂ ಓದಿ: ಬೆಂಗಳೂರಿನ ಡೇ ಕೇರ್‌ನಲ್ಲಿ ವಾಷಿಂಗ್ ಮಷಿನ್ ಒಳಗೆ ಕೂರಿಸಿ ಅಂಬೆಗಾಲಿಡುವ ಕಂದಮ್ಮಗಳಿಗೆ ಚಿತ್ರಹಿಂಸೆ
ಇದರಿಂದ ಆಕ್ರೋಶಗೊಂಡಿದ್ದ ರಾಜೀವ್, ಭಾನುವಾರ ಸಂಜೆ ಡಿನ್ನರ್ ನೆಪದಲ್ಲಿ ಅಂಜಲಿಯನ್ನು ಪೈಪ್‌ಲೈನ್ ರಸ್ತೆಗೆ ಕರೆಸಿಕೊಂಡಿದ್ದಾನೆ. ಅಲ್ಲಿ ಮತ್ತೆ ಮದುವೆಯ ಪ್ರಸ್ತಾಪ ಎತ್ತಿದಾಗ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಪ್ಲಾನ್ ಮುಖಾಂತರ ತಾನು ಮೊದಲೇ ತಂದಿದ್ದ ಚಾಕುವನ್ನು ತೆಗೆದ ರಾಜೀವ್, ಅಂಜಲಿಯ ಕುತ್ತಿಗೆಗೆ ಬಲವಾಗಿ ಇರಿದು ಸಿನೆಮಾ ಶೈಲಿಯಲ್ಲಿ ಹತ್ಯೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

