Breaking News

ಬಂಟ್ವಾಳ: ಬಸ್‌ಗಾಗಿ ಕಾಯುತ್ತಿದ್ದ ಪಿಯುಸಿ ವಿದ್ಯಾರ್ಥಿನಿ ಮೇಲೆ ಮಚ್ಚಿನಿಂದ ಭೀಕರ ದಾಳಿ ಮಾಡಿದ ಜವ್ವರ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲ್ಲಣ ಮೂಡಿಸುವ ಘಟನೆಯೊಂದು ಸಂಭವಿಸಿದೆ. ಬಂಟ್ವಾಳ ತಾಲೂಕಿನ ಮಂಚಿ ಮತ್ತು ಇರಾ ರಸ್ತೆಯ ಮಧ್ಯೆ ಇರುವ ಪಡ್ಪು ಎಂಬಲ್ಲಿ ಕಾಲೇಜಿಗೆ ತೆರಳಲು ಬಸ್‌ಗಾಗಿ ಕಾಯುತ್ತಿದ್ದ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿಯ ಮೇಲೆ ಸ್ಥಳೀಯ ವ್ಯಾಪಾರಿಯೊಬ್ಬ ಮಾರಕಾಸ್ತ್ರದಿಂದ ಭೀಕರವಾಗಿ ದಾಳಿ ನಡೆಸಿದ್ದಾನೆ. ದಾಳಿಯ ತೀವ್ರತೆಗೆ ವಿದ್ಯಾರ್ಥಿನಿ ತೀವ್ರ ರಕ್ತಸ್ರಾವದಿಂದ ಬಸ್ ನಿಲ್ದಾಣದಲ್ಲೇ ಕುಸಿದು ಬಿದ್ದಿದ್ದಾಳೆ.

ಬಸ್ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಈ ದಾರುಣ ಘಟನೆ ನಡೆದಿದೆ. ವಿದ್ಯಾರ್ಥಿನಿಯು ಎಂದಿನಂತೆ ಕಾಲೇಜಿಗೆ ಹೋಗಲು ಬಸ್‌ಗಾಗಿ ಕಾಯುತ್ತಾ ನಿಂತಿದ್ದಳು. ಈ ವೇಳೆ ಅಲ್ಲಿಗೆ ಬಂದ ಸ್ಥಳೀಯ ವ್ಯಾಪಾರಿಯಾದ ಜವ್ವರ್ ಎಂಬಾತ, ತನ್ನ ಬಳಿಯಿದ್ದ ಮಚ್ಚಿನಿಂದ ವಿದ್ಯಾರ್ಥಿನಿಯ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ.

ಆರೋಪಿ ಜವ್ವರ್ ನಡೆಸಿದ ಭೀಕರ ದಾಳಿಯಿಂದಾಗಿ ಯುವತಿಯ ತಲೆ ಮತ್ತು ಕೈ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವ ಉಂಟಾಗಿದೆ. ಘಟನೆಯ ಭೀಕರತೆಗೆ ಇಡೀ ಬಸ್ ನಿಲ್ದಾಣದ ತುಂಬಾ ರಕ್ತದ ಕಲೆಗಳು ಬಿದ್ದಿವೆ. ವಿದ್ಯಾರ್ಥಿನಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯ ಸಾರ್ವಜನಿಕರು ತಕ್ಷಣವೇ ಆಕೆಯನ್ನು ರಕ್ಷಿಸಿ, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆಕೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಒನ್‌ವೇ ನಿಯಮ ಉಲ್ಲಂಘಿಸಿ ಬಂದ ಬೈಕ್; ಕಾರಿಗೆ ಮುಖಾಮುಖಿ ಡಿಕ್ಕಿಯಾಗಿ ಪುತ್ತೂರು ನಿವಾಸಿ ಅಶೋಕ್ ದಾರುಣ ಸಾವು

ವಿಷಯ ತಿಳಿಯುತ್ತಿದ್ದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ದಾಳಿಗೆ ನಿಖರವಾದ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ, ಇದಕ್ಕೆ ವನ್​​ ಸೈಡ್​​ ಲವ್​​ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಈ ಕೃತ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *