ಜಮೀರ್ ಖಾನ್ ಚಾರ್ಜ್‌ಶೀಟ್‌ಗೆ ಪರ್ಮಿಷನ್ ಕೇಳಿದ ಬೆನ್ನಲ್ಲೇ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜು ದಿಢೀರ್ ವರ್ಗಾವಣೆ

ಬೆಂಗಳೂರು: ರಾಜ್ಯ ರಾಜಕಾರಣ ಹಾಗೂ ಪೊಲೀಸ್ ವಲಯದಲ್ಲಿ ತೀವ್ರ ಸಂಚಲನ ಮೂಡಿಸುವ ಮಹತ್ವದ ಬೆಳವಣಿಗೆಯೊಂದರಲ್ಲಿ, ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ-1 (Superintendent of Police) ಆಗಿದ್ದ ಐಪಿಎಸ್ ಅಧಿಕಾರಿ ಶಿವಪ್ರಕಾಶ್ ದೇವರಾಜು ಅವರನ್ನು ಲೋಕಾಯುಕ್ತ ಸಂಸ್ಥೆಯಿಂದ ದಿಢೀರ್ ಬಿಡುಗಡೆಗೊಳಿಸಲಾಗಿದೆ (Relieved). ಅವರನ್ನು ತಕ್ಷಣವೇ ಜಾರಿಗೆ ಬರುವಂತೆ ಅವರ ಮೂಲ ಇಲಾಖೆಗೆ (ಗೃಹ ಇಲಾಖೆ) ಮರು ನೇಮಿಸಿ ಆದೇಶ ಹೊರಡಿಸಲಾಗಿದೆ.

ಮಾಜಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ವಿರುದ್ಧದ ಬರೋಬ್ಬರಿ 20 ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಕೆ (Disproportionate Assets – DA) ಪ್ರಕರಣದ ತನಿಖೆ ಪೂರ್ಣಗೊಳಿಸಿ, ಚಾರ್ಜ್‌ಶೀಟ್ ಸಲ್ಲಿಸಲು ಲೋಕಾಯುಕ್ತ ಪೊಲೀಸರು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ಅನುಮತಿ ಕೋರಿ ಪತ್ರ ಬರೆದ ಕೇವಲ 24 ಗಂಟೆಗಳಲ್ಲಿ ಈ ವರ್ಗಾವಣೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಜಮೀರ್ ಖಾನ್ ಕೇಸ್ ಬೇಟೆಯಾಡಿದ್ದ ಎಸ್‌ಪಿ:

2014ರ ಬ್ಯಾಚ್‌ನ ದಕ್ಷ ಐಪಿಎಸ್ ಅಧಿಕಾರಿಯಾದ ಶಿವಪ್ರಕಾಶ್ ದೇವರಾಜು ನೇತೃತ್ವದ ತಂಡವೇ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧದ ಡಿಎ (DA) ಪ್ರಕರಣದ ಸಂಪೂರ್ಣ ತನಿಖೆಯನ್ನು ಯಶಸ್ವಿಯಾಗಿ ಮುಗಿಸಿತ್ತು. 2022ರಲ್ಲಿ ಜಮೀರ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿಯ ಮಾಹಿತಿಯ ಆಧಾರದ ಮೇಲೆ ಲೋಕಾಯುಕ್ತದಲ್ಲಿ ಈ ಪ್ರಕರಣ ದಾಖಲಾಗಿತ್ತು.

ತನಿಖೆ ಮುಗಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ (Chargesheet) ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದ ಎಸ್‌ಪಿ ಶಿವಪ್ರಕಾಶ್, ಗುರುವಾರವಷ್ಟೇ ರಾಜ್ಯಪಾಲರ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಶುಕ್ರವಾರ ಬೆಳಗ್ಗೆ 10:30ಕ್ಕೆ ಕಚೇರಿಗೆ ತಲುಪಿದ ಅವರಿಗೆ ಇಲಾಖೆಯಿಂದ ಬಿಡುಗಡೆಗೊಳಿಸಿರುವ ಶಾಕಿಂಗ್ ಆರ್ಡರ್ ಕೈ ಸೇರಿದೆ.

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ: ಆರ್‌ಎಸ್‌ಎಸ್ ವರ್ಸಸ್ ಕರ್ನಾಟಕ ಸರ್ಕಾರ: ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದ ಗೃಹ ಸಚಿವ

ಆಡಳಿತಾತ್ಮಕ ಹಿತದೃಷ್ಟಿ ಎಂದ ಲೋಕಾಯುಕ್ತ ಜಸ್ಟೀಸ್ ಬಿ.ಎಸ್. ಪಾಟೀಲ್:

ಈ ಹಠಾತ್ ವರ್ಗಾವಣೆ ಕುರಿತು ಮಾಧ್ಯಮಗಳು ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರು, “ಶಿವಪ್ರಕಾಶ್ ಅವರು ಅತ್ಯಂತ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ ಕೆಲವು ಆಂತರಿಕ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ. ಸಂಸ್ಥೆಯ ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಅನುಕೂಲಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 15(4) ರ ಅಡಿಯಲ್ಲಿ ಲೋಕಾಯುಕ್ತ ಸಿಬ್ಬಂದಿ ಸಂಸ್ಥೆಯ ಶಿಸ್ತು ನಿಯಂತ್ರಣಕ್ಕೆ ಒಳಪಟ್ಟಿರುತ್ತಾರೆ.

ಎಸ್‌ಪಿ ಶಿವಪ್ರಕಾಶ್ ದೇವರಾಜು ಅವರ ಧಾಕಡ್ ಸಾಧನೆಗಳು:

ಕೇವಲ ಒಂದು ವರ್ಷದ ಅವಧಿಗಿಂತಲೂ ಕಡಿಮೆ ಅವಧಿಯಲ್ಲಿ ಲೋಕಾಯುಕ್ತದಲ್ಲಿ ಸೇವೆ ಸಲ್ಲಿಸಿದ್ದ ಶಿವಪ್ರಕಾಶ್, ಭ್ರಷ್ಟ ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದರು.

ಹೈಪ್ರೊಫೈಲ್ ರೈಡ್‌ಗಳು: ಇತ್ತೀಚೆಗಷ್ಟೇ (ಜುಲೈ 7) ಬೆಂಗಳೂರು ವಿಶೇಷ ಉಪ ತಹಶೀಲ್ದಾರ್ (Special DC) ಎಂ.ಕೆ. ಜಗದೀಶ್ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ, ಹುಣಸಮಾರನಹಳ್ಳಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ 13 ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿಯವರಿಗೆ ಕಾನೂನುಬಾಹಿರವಾಗಿ ಮಂಜೂರು ಮಾಡಿದ್ದ ಹಗರಣವನ್ನು ಬಯಲಿಗೆಳೆದಿದ್ದರು.

ಅಬಕಾರಿ ಇಲಾಖೆ ಮೇಲಿನ ದಾಳಿ: ಲೈಸೆನ್ಸ್ ನವೀಕರಣ ದಂಧೆಗೆ ಬ್ರೇಕ್ ಹಾಕಲು ಅಬಕಾರಿ ಇಲಾಖೆಯ 8 ಡೆಪ್ಯುಟಿ ಕಮಿಷನರ್‌ಗಳ ಮೇಲೆ ದಾಳಿ ನಡೆಸಿ ನಡುಕ ಹುಟ್ಟಿಸಿದ್ದರು.

ದಾಖಲೆಯ ಟ್ರ್ಯಾಪ್‌ಗಳು: ತಮ್ಮ ಅಲ್ಪಾವಧಿಯ ಅವಧಿಯಲ್ಲಿ ಬರೋಬ್ಬರಿ 31 ಭ್ರಷ್ಟಾಚಾರ ಟ್ರ್ಯಾಪ್‌ಗಳು, 17 ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳು (ಮಾಜಿ ಸಿಎಂ ಅಡಿಯಲ್ಲಿ ಕೆಲಸ ಮಾಡಿದ ಅಧಿಕಾರಿಯೂ ಸೇರಿ) ಹಾಗೂ 11 ಇತರೆ ಪ್ರಮುಖ ಪ್ರಕರಣಗಳನ್ನು ದಾಖಲಿಸಿದ್ದರು.

AI ತಂತ್ರಜ್ಞಾನದ ಬಳಕೆ: ಲೋಕಾಯುಕ್ತ ಇತಿಹಾಸದಲ್ಲೇ ಮೊದಲ ಬಾರಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಪರಿಕರಗಳನ್ನು ಬಳಸಿ ಭ್ರಷ್ಟ ಅಧಿಕಾರಿಗಳ ಸಂಪೂರ್ಣ ಇಲಾಖಾವಾರು ದೋಷಾರೋಪಣೆ ಪಟ್ಟಿಯನ್ನು (Dossier) ಸಿದ್ಧಪಡಿಸಿದ್ದರು.

10 ವರ್ಷಗಳ ವೃತ್ತಿಜೀವನದಲ್ಲಿ 9 ಬಾರಿ ಟ್ರಾನ್ಸ್‌ಫರ್!

2016ರಲ್ಲಿ ತಮ್ಮ ಸಕ್ರಿಯ ಪೊಲೀಸ್ ವೃತ್ತಿಜೀವನ ಆರಂಭಿಸಿದ ಶಿವಪ್ರಕಾಶ್ ದೇವರಾಜು ಅವರು ಕಳೆದ ಒಂದು ದಶಕದಲ್ಲಿ ಒಟ್ಟು 9 ಬಾರಿ ವರ್ಗಾವಣೆಯನ್ನು ಎದುರಿಸಿದ್ದಾರೆ.

“ಲೋಕಾಯುಕ್ತದಲ್ಲಿ ನಾನು ಮಾಡಿದ ಕೆಲಸ ನನಗೆ ಸಂಪೂರ್ಣ ತೃಪ್ತಿ ನೀಡಿದೆ. ಆದರೆ ಇದು ಅತ್ಯಂತ ಕಡಿಮೆ ಅವಧಿಯ ಜರ್ನಿಯಾಗಿದ್ದು, ಇನ್ನೂ ಮಾಡಬೇಕಾದ ಕೆಲಸಗಳು ಸಾಕಷ್ಟು ಬಾಕಿ ಇವೆ,” ಎಂದು ಶಿವಪ್ರಕಾಶ್ ಬೇಸರ ಹಂಚಿಕೊಂಡಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *