Breaking News

ಚಲಿಸುವ ರೈಲಿನಲ್ಲಿ ಪೂಜೆ, ಅಭಿಷೇಕ; ವೈರಲ್ ವಿಡಿಯೋ ಬೆನ್ನಲ್ಲೇ ಸತ್ಯ ಬಿಚ್ಚಿಟ್ಟ ಭಾರತೀಯ ರೈಲ್ವೆ

ದೆಹಲಿ: ಇತ್ತೀಚೆಗಷ್ಟೇ ರೈಲಿನ ಕೂಪೆಯೊಂದನ್ನು ನವದಂಪತಿಗಳ ಮಧುಚಂದ್ರಕ್ಕಾಗಿ (Honeymoon) ರೊಮ್ಯಾಂಟಿಕ್ ಆಗಿ ಅಲಂಕರಿಸಿದ್ದ ವಿಡಿಯೋವೊಂದು ಭಾರಿ ವೈರಲ್ ಆಗಿತ್ತು. ಅದರ ಬೆನ್ನಲ್ಲೇ, ಇದೀಗ ಚಲಿಸುವ ರೈಲಿನಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಿರುವ ಮತ್ತೊಂದು ವಿಚಿತ್ರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ದೊಡ್ಡ ಮಟ್ಟದ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

ವೈರಲ್ ವಿಡಿಯೋದಲ್ಲಿ ಪುರೋಹಿತರೊಬ್ಬರು ರೈಲಿನ ನೆಲದ ಮೇಲೆ ಕುಳಿತು ಪೂಜೆ ಮತ್ತು ಅಭಿಷೇಕ ಮಾಡುತ್ತಿರುವುದು ಕಂಡುಬಂದಿದೆ. ಅವರ ಸುತ್ತಲೂ ಬಿಳಿ ಬಟ್ಟೆ ಧರಿಸಿದ ಹಲವಾರು ಭಕ್ತರು ಕುಳಿತು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಸಾರ್ವಜನಿಕ ಪ್ರಯಾಣಿಕರ ರೈಲಿನಲ್ಲಿ ಇಂತಹ ಧಾರ್ಮಿಕ ಆಚರಣೆಗಳು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸತೊಡಗಿದ್ದರು.

ಈ ವಿವಾದ ಮತ್ತು ಆಕ್ರೋಶಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಉತ್ತರ ರೈಲ್ವೆ (, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ತೆರೆ ಎಳೆದಿದೆ. ರೈಲ್ವೆ ಇಲಾಖೆಯ ಅಧಿಕೃತ ಸ್ಪಷ್ಟನೆಯ ಪ್ರಕಾರ, ಈ ಪೂಜಾ ಕಾರ್ಯಕ್ರಮವು ಯಾವುದೇ ಸಾಮಾನ್ಯ ಪ್ರಯಾಣಿಕರ ಬೋಗಿಯಲ್ಲಿ ನಡೆದಿಲ್ಲ! ಬದಲಾಗಿ, ಐಆರ್‌ಸಿಟಿಸಿ ಮೂಲಕ ಖಾಸಗಿಯಾಗಿ ಬುಕ್ ಮಾಡಲಾದ ವಿಶೇಷ ‘ಸಲೂನ್ ಕಾರ್’ ಒಳಗೆ ಈ ಆಚರಣೆಗಳನ್ನು ನಡೆಸಲಾಗಿದೆ.

ಇಲ್ಲಿದೆ ನೋಡಿ ವಿಡಿಯೋ:

ಉತ್ತರ ರೈಲ್ವೆಯು ತನ್ನ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಈ ಕುರಿತು ಸಂಪೂರ್ಣ ಮಾಹಿತಿ ಹಂಚಿಕೊಂಡಿದೆ. ಈ ಸಲೂನ್ ಬೋಗಿಯನ್ನು ಜುಲೈ 8, 2026 ರಂದು ಐಆರ್‌ಸಿಟಿಸಿ ಮೂಲಕ ಖಾಸಗಿ ಪಾರ್ಟಿಯೊಂದು ಬುಕ್ ಮಾಡಿತ್ತು. ಇದಕ್ಕಾಗಿ ಅವರು 3,08,580 ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಿದ್ದರು. ಜುಲೈ 10, 2026 ರಂದು ನವದೆಹಲಿಯಿಂದ (NDLS) ಮುಂಬೈಗೆ (BDTS) ಸಂಚರಿಸುವ ರೈಲು ಸಂಖ್ಯೆ 12926 ‘ಪಶ್ಚಿಮ ಎಕ್ಸ್‌ಪ್ರೆಸ್’ ಗೆ ಈ ವಿಶೇಷ ಸಲೂನ್ ಬೋಗಿಯನ್ನು ಜೋಡಿಸಲಾಗಿತ್ತು.

ಇದನ್ನೂ ಓದಿ: ರೈಲನ್ನೇ ‘ಹನಿಮೂನ್ ರೂಮ್’ ಮಾಡಿದ ದಂಪತಿ!: ಫಸ್ಟ್ ಎಸಿ ಕೋಚ್‌ನಲ್ಲಿ ಬಲೂನ್ ಡೆಕೋರೇಶನ್; ರೋಮ್ಯಾಂಟಿಕ್ ವಿಡಿಯೋ ವೈರಲ್ ಆಗ್ತಿದ್ದಂತೆ ಟಿಟಿಇ ಅಮಾನತು
ಏನಿದು ಸಲೂನ್ ಕಾರ್?

ರೈಲ್ವೆಯಲ್ಲಿ ಸಲೂನ್ ಕಾರ್ ಎಂದರೆ ಅದು ಅತ್ಯಂತ ಐಷಾರಾಮಿ ಮತ್ತು ಖಾಸಗಿ ಬೋಗಿಯಾಗಿದೆ. ಇದನ್ನು ಸಾಮಾನ್ಯವಾಗಿ ರೈಲ್ವೆಯ ಉನ್ನತ ಅಧಿಕಾರಿಗಳು ಮತ್ತು ವಿಐಪಿಗಳ (VIPs) ಸಂಚಾರಕ್ಕಾಗಿ ಬಳಸಲಾಗುತ್ತದೆ. ಈ ಬೋಗಿಯಲ್ಲಿ ಹವಾನಿಯಂತ್ರಿತ (AC) ಬೆಡ್‌ರೂಮ್‌ಗಳು, ಸುಸಜ್ಜಿತ ಅಡುಗೆಮನೆ (Kitchen), ಡೈನಿಂಗ್ ಮತ್ತು ಲಿವಿಂಗ್ ರೂಮ್‌ಗಳು ಹಾಗೂ ಅತ್ಯಾಧುನಿಕ ಶೌಚಾಲಯಗಳಿರುತ್ತವೆ. ಪ್ರಸ್ತುತ ಐಆರ್‌ಸಿಟಿಸಿ ಮೂಲಕ ಸಾರ್ವಜನಿಕರೂ ಸಹ ಹಣ ಪಾವತಿಸಿ ಇದನ್ನು ಬಾಡಿಗೆಗೆ ಪಡೆಯಬಹುದು.

ಕಾರ್ಯಾಚರಣೆಯ ಕಾರ್ಯಸಾಧ್ಯತೆಗೆ ಒಳಪಟ್ಟು ಈ ಸಲೂನ್‌ನ ವಾಣಿಜ್ಯ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಪ್ರಯಾಣಿಕರ ಸುರಕ್ಷತೆ, ಭದ್ರತೆ, ಸಮಯ ಪ್ರಜ್ಞೆ ಮತ್ತು ಸೌಕರ್ಯಕ್ಕೆ ಯಾವುದೇ ಧಕ್ಕೆ ತಂದಿಲ್ಲ. ಈ ಘಟನೆಯಲ್ಲಿ ಯಾರಿಗೂ ಯಾವುದೇ ಗಾಯ ಅಥವಾ ತೊಂದರೆಯಾಗಿಲ್ಲ. ವೈರಲ್ ವಿಡಿಯೋದಲ್ಲಿ ಪುರೋಹಿತರು ಅಭಿಷೇಕ ಮಾಡುತ್ತಿರುವುದು ಖಾಸಗಿಯಾಗಿ ಬುಕ್ ಮಾಡಿದ ಸಲೂನ್ ಬೋಗಿಯ ಒಳಗಡೆ ಮಾತ್ರ ಎಂದು ಉತ್ತರ ರೈಲ್ವೆ ಸ್ಪಷ್ಟಪಡಿಸಿದೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *