ಉಳ್ಳಾಲದಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 22ನೇ ಶಾಖೆ ಉದ್ಘಾಟನೆ

ಮಂಗಳೂರು: ಪುತ್ತೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿ ರಾಜ್ಯಾದ್ಯಂತ 21 ಶಾಖೆಗಳ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ 22ನೇ ಶಾಖೆ ಉಳ್ಳಾಲದ ನಿಕ್ಸೋನ್ಸ್ ಪ್ಲಾಜಾದಲ್ಲಿ ಜು.15ರಂದು ಉದ್ಘಾಟನೆಯಾಯಿತು.

ಶಾಖೆ ಉದ್ಘಾಟಿಸಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಮಂಗಳೂರು ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಪುತ್ತೂರಿನಲ್ಲಿ ಆರಂಭವಾದ ಈ ಸಂಘವು ಇಂದು ರಾಜ್ಯಾದ್ಯಂತ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು 22ನೇ ಶಾಖೆಯನ್ನು ಆರಂಭಿಸಿರುವುದು ಶ್ಲಾಘನೀಯ ಸಾಧನೆಯಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಶಾಖೆಗಳ ಸಂಖ್ಯೆ 25ಕ್ಕೆ ಏರಲಿ ಎಂಬ ಆಶಯ ವ್ಯಕ್ತಪಡಿಸಿದ ಅವರು, ಕಳೆದ 25 ವರ್ಷಗಳಿಂದ ಸಹಕಾರ ರತ್ನ ಎಸ್.ಆರ್. ಸತೀಶ್ಚಂದ್ರ ಅವರ ಸಮರ್ಥ ನೇತೃತ್ವದಲ್ಲಿ ಸಂಘವು ನಿರಂತರ ಪ್ರಗತಿ ಸಾಧಿಸಿದ್ದು, ಇನ್ನಷ್ಟು ಅಭಿವೃದ್ಧಿ ಹೊಂದಿ ಹೆಚ್ಚಿನ ವ್ಯವಹಾರ ದಾಖಲಿಸಲಿ ಎಂದು ಶುಭ ಹಾರೈಸಿದರು.

ಉಳ್ಳಾಲ ನಗರಸಭೆಯ ಪೌರಾಯುಕ್ತ ಸಂತೋಷ್ ಎಸ್.ಡಿ. ಮಾತನಾಡಿ, ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಶೀಘ್ರದಲ್ಲೇ 100 ಶಾಖೆಗಳನ್ನು ಸ್ಥಾಪಿಸುವಂತಾಗಲಿ. ಈಗಾಗಲೇ 800 ಕೋಟಿ ರೂ.ಗೂ ಅಧಿಕ ವ್ಯವಹಾರ ನಡೆಸಿರುವ ಸಂಘವು ಮುಂದಿನ ದಿನಗಳಲ್ಲಿ ಸಾವಿರಾರು ಕೋಟಿ ರೂ.ಗಳ ವ್ಯವಹಾರ ದಾಖಲಿಸುವ ಜೊತೆಗೆ ಸಾರ್ವಜನಿಕರ ಆರ್ಥಿಕ ಹಾಗೂ ಸಾಮಾಜಿಕ ಜೀವನಮಟ್ಟ ಸುಧಾರಣೆಗೆ ಇನ್ನಷ್ಟು ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.

ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬಾಸ್ಟಿಯನ್ ಚರ್ಚ್ ಧರ್ಮಗುರು ವಂ. ಫಾ. ಆಂಡ್ರೂ ಲಿಯೋ ಡಿಸೋಜ ಮಾತನಾಡಿ, ಧರ್ಮ, ಜಾತಿ ಭೇದವಿಲ್ಲದೆ ಎಲ್ಲ ಸಮುದಾಯಗಳ ಸಹಕಾರ ಈ ಸಂಘಕ್ಕೆ ದೊರೆಯುತ್ತಿದೆ. ರಜತ ಮಹೋತ್ಸವದ ಸಂಭ್ರಮದಲ್ಲಿರುವ ಸಂಘವು ಶೀಘ್ರದಲ್ಲೇ 25 ಶಾಖೆಗಳನ್ನು ಹೊಂದಿ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಶುಭ ಹಾರೈಸಿದರು.

ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ಪಾಂಡುರಂಗ ನಾಯಕ್ ಮಾತನಾಡಿ, ಯಾವುದೇ ಸಂಸ್ಥೆಯ ಯಶಸ್ಸಿಗೆ ಸಮರ್ಥ ಆಡಳಿತ ಮಂಡಳಿ ಹಾಗೂ ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸುವ ಸಿಬ್ಬಂದಿಯೇ ಪ್ರಮುಖ ಆಧಾರ. ಈ ಎರಡೂ ಗುಣಗಳನ್ನು ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಹೊಂದಿದ್ದು, ಉಳ್ಳಾಲ ಹಾಗೂ ಸುತ್ತಮುತ್ತಲಿನ ಜನರು ಸಂಸ್ಥೆಗೆ ಉತ್ತಮ ಸಹಕಾರ ನೀಡುವ ವಿಶ್ವಾಸವಿದೆ ಎಂದು ಹೇಳಿದರು.

ಇದನ್ನೂ ಓದಿ: ಗೃಹಜ್ಯೋತಿ ಯೋಜನೆ ಹಾಗೂ ವಿದ್ಯುತ್ ಕನೆಕ್ಷನ್ ನಿಯಮಗಳಲ್ಲಿ ಭಾರಿ ಬದಲಾವಣೆ: ಬಾಡಿಗೆದಾರರು ಬದಲಾದರೂ ಸಿಗಲಿದೆ ಉಚಿತ ವಿದ್ಯುತ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸಹಕಾರ ರತ್ನ ಎಸ್.ಆರ್. ಸತೀಶ್ಚಂದ್ರ, ರಾಣಿ ಅಬ್ಬಕ್ಕಳ ನಾಡಿನಲ್ಲಿ ಸಂಘದ 22ನೇ ಶಾಖೆ ಆರಂಭವಾಗಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಸಂಘವು 800 ಕೋಟಿ ರೂ.ಗೂ ಅಧಿಕ ವ್ಯವಹಾರ ದಾಖಲಿಸಿರುವುದು ಹೆಮ್ಮೆಯ ವಿಷಯವಾಗಿದ್ದು, ಸಿಬ್ಬಂದಿಯ ನಿಷ್ಠಾವಂತ ಸೇವೆಯಿಂದ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ಹೇಳಿದರು.

ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಸಹಕಾರಿ ಕ್ಷೇತ್ರದಲ್ಲಿ ಇ-ಸ್ಟ್ಯಾಂಪಿಂಗ್ ವ್ಯವಸ್ಥೆ ಜಾರಿಗೆ ತಂದ ಹೆಗ್ಗಳಿಕೆ ನಮ್ಮ ಸಂಘಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ಹಾಗೂ ರಾಜ್ಯದ ಒಂಭತ್ತನೇ ಸಹಕಾರಿ ಸಂಘವಾಗಿ ಹಲವು ವಿನೂತನ ಸೇವೆಗಳನ್ನು ನೀಡುತ್ತಿರುವ ಸಂಘವು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತಾರವಾಗಿ ಬೆಳೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಂಘದ ಮಾಜಿ ಪ್ರಧಾನ ವ್ಯವಸ್ಥಾಪಕ ಎಸ್.ಆರ್. ನಾಯಕ್ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿಗಳಾದ ಆಕಾಶ್ ಮತ್ತು ಸಂದೀಪ್ ಪ್ರಾರ್ಥಿಸಿದರು. ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ನ ಕಾರ್ಯಕ್ರಮ ಸಂಯೋಜಕ ಬಿಪಿನ್ ಚಂದ್ರ ಬಿ.ಡಿ. ವಂದಿಸಿದರು. ಮಂಗಳೂರು ಶಾಖೆಯ ಹಿರಿಯ ವ್ಯವಸ್ಥಾಪಕ ಪ್ರೇಮಚಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *