“ನನ್ನ ಅಂತ್ಯ ಬಯಸುವ ಬಿಜೆಪಿ ಸರ್ವನಾಶ ನೋಡುವವರೆಗೂ ನಾನು ಸಾಯಲ್ಲ” ಎಂದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (TMC) ಪಕ್ಷಕ್ಕೆ ಬುಧವಾರ ಮತ್ತೊಂದು ಭಾರಿ ಆಘಾತ ಎದುರಾಗಿದೆ. ಪಕ್ಷದ ಹಿರಿಯ ಶಾಸಕ ಮದನ್ ಮಿತ್ರಾ ಅವರು ಬಂಡಾಯ ಬಣ ಸೇರುವ ಮೂಲಕ ದೀದಿಗೆ ಶಾಕ್ ನೀಡಿದ್ದಾರೆ. ಈ ರಾಜಕೀಯ ಬೆಳವಣಿಗೆಯ ಬೆನ್ನಲ್ಲೇ ತೀವ್ರ ಆಕ್ರೋಶ ಹೊರಹಾಕಿರುವ ಟಿಎಂಸಿ ಮುಖ್ಯಸ್ಥೆ  ಮಮತಾ ಬ್ಯಾನರ್ಜಿ, ಭಾರತೀಯ ಜನತಾ ಪಾರ್ಟಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೋಗುವವರು ಹೋಗಬಹುದು, ಬಿಜೆಪಿಯ ಅಂತ್ಯ ನಾನೇ ನೋಡ್ತೀನಿ

ಬಂಡಾಯಗಾರರ ನಿರ್ಗಮನಕ್ಕೆ ತಲೆಕೆಡಿಸಿಕೊಳ್ಳದ ಮಮತಾ ಬ್ಯಾನರ್ಜಿ, ಫೇಸ್‌ಬುಕ್ ಲೈವ್ (Facebook Live) ಮೂಲಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಬಿಜೆಪಿಗೆ ನೇರ ಎಚ್ಚರಿಕೆ ನೀಡಿದ್ದಾರೆ.

“ನನಗೆ ಹಾರ್ಟ್ ಅಟ್ಯಾಕ್ (ಹೃದಯಾಘಾತ) ಆಗಲಿ ಎಂದು ಬಿಜೆಪಿ ಬಯಸುತ್ತಿದೆ. ಆದರೆ, ನಿಮ್ಮ (ಬಿಜೆಪಿಯ) ರಾಜಕೀಯ ಅಂತ್ಯವನ್ನು ಕಣ್ಣಾರೆ ನೋಡುವವರೆಗೂ ನಾನು ಬದುಕಿರುತ್ತೇನೆ. ಪಕ್ಷ ತೊರೆದು ಹೋಗಲು ಇಚ್ಛಿಸುವವರು ಧಾರಾಳವಾಗಿ ಹೋಗಬಹುದು, ಯಾರಿಗೂ ತಡೆಯಿಲ್ಲ,” ಎಂದು ಮಮತಾ ಸವಾಲು ಹಾಕಿದ್ದಾರೆ.

ಬುಧವಾರ ಅಧಿಕೃತವಾಗಿ ಪಕ್ಷದ ಬಂಡಾಯ ನಾಯಕ ರಿತಬ್ರತಾ ಬ್ಯಾನರ್ಜಿ ಬಣ ಸೇರಿದ ಶಾಸಕ ಮದನ್ ಮಿತ್ರಾ, ಈ ನಿರ್ಧಾರದ ಬಗ್ಗೆ ವಿಚಿತ್ರ ಸಮರ್ಥನೆ ನೀಡಿದ್ದಾರೆ. “ನಾನು ಟಿಎಂಸಿ ತೊರೆದಿಲ್ಲ, ಕೇವಲ ವಿಧಾನಸಭೆಯಲ್ಲಿ ನನ್ನ ಕೊಠಡಿಯನ್ನು ಬದಲಾಯಿಸಿದ್ದೇನಷ್ಟೇ,” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಮುಂದಿನ 6 ತಿಂಗಳ ಕಾಲ ತಮ್ಮ ಹುದ್ದೆಯಿಂದ ಪಕ್ಕಕ್ಕೆ ಸರಿಯಬೇಕು ಎಂಬ ತಮ್ಮ ಬೇಡಿಕೆಯನ್ನು ಪಕ್ಷ ಒಪ್ಪದ ಕಾರಣ ತಾವು ಈ ನಿರ್ಧಾರ ಕೈಗೊಂಡಿರುವುದಾಗಿ ಮಿತ್ರಾ ಸ್ಪಷ್ಟಪಡಿಸಿದ್ದಾರೆ. ಮದನ್ ಮಿತ್ರಾ ಅವರ ಆರೋಪಕ್ಕೆ ತೀಕ್ಷ್ಣವಾಗಿ ಉತ್ತರಿಸಿರುವ ಮಮತಾ ಬ್ಯಾನರ್ಜಿ, ಅಭಿಷೇಕ್ ಬ್ಯಾನರ್ಜಿ ಅವರನ್ನು ಕೇವಲ ನೆಪವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ.

“ಅಭಿಷೇಕ್‌ನಿಂದಾಗಿ ಮದನ್ ಮಿತ್ರಾ ಪಕ್ಷ ಬಿಟ್ಟಿಲ್ಲ. ಜಾರಿ ನಿರ್ದೇಶನಾಲಯ (ED) ಮಂಗಳವಾರ ಅವರ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿಗೆ ಸಮನ್ಸ್ ನೀಡಿದೆ. ಈ ತನಿಖಾ ಸಂಸ್ಥೆಗಳ ಭಯದಿಂದ ಅವರು ಪಕ್ಷ ತೊರೆದಿದ್ದಾರೆ,” ಎಂದು ಮಮತಾ ಬಹಿರಂಗಪಡಿಸಿದರು. “ಅಭಿಷೇಕ್ ಬ್ಯಾನರ್ಜಿ ಹಾಗೂ ಅವರ ಕುಟುಂಬಕ್ಕೆ ನಿರಂತರವಾಗಿ ಸಮನ್ಸ್ ನೀಡಲಾಗುತ್ತಿದೆ. ಅವರು ಬಯಸಿದ್ದರೆ ತನಿಖಾ ಸಂಸ್ಥೆಗಳ ಜೊತೆ ರಾಜಿ ಮಾಡಿಕೊಂಡು ರಿಲೀಫ್ ಪಡೆಯಬಹುದಿತ್ತು. ಆದರೆ ಅವರು ರಣರಂಗದಿಂದ ಓಡಿಹೋಗದೆ ಹೋರಾಡುತ್ತಿದ್ದಾರೆ. ಹೀಗಾಗಿ ಅವರ ಎಲ್ಲಾ ತಪ್ಪುಗಳನ್ನು ಕ್ಷಮಿಸಲಾಗಿದೆ,” ಎಂದು ಮಮತಾ ತಮ್ಮ ಸೋದರಳಿಯನಿಗೆ ಬೆಂಬಲ ವ್ಯಕ್ತಪಡಿಸಿದರು.

ಪಕ್ಷಾಂತರಿಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, “ಅಧಿಕಾರ ಅಥವಾ ಸ್ವಾರ್ಥಕ್ಕಾಗಿ ನಾನು ನನ್ನ ವಿವೇಚನೆಯನ್ನು (conscience) ಮಾರಿಕೊಂಡಿಲ್ಲ. ಪಕ್ಷಕ್ಕೆ ದ್ರೋಹ ಬಗೆದವರ ಪರವಾಗಿ ನಾನು ಬಂಗಾಳದ ಜನತೆಯಲ್ಲಿ ಕ್ಷಮೆ ಯಾಚಿಸುತ್ತೇನೆ. ನಾವು ಬಿಜೆಪಿಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳದ ಕಾರಣ ನಮ್ಮ ಇಡೀ ಕುಟುಂಬ ಇಷ್ಟೊಂದು ರಾಜಕೀಯ ಕಿರುಕುಳ ಅನುಭವಿಸುತ್ತಿದೆ. ಯಾರು ರಾಜಿ ಮಾಡಿಕೊಂಡಿದ್ದಾರೋ, ಅವರ ಬಳಿ ಸಾಕಷ್ಟು ಸೂಟ್‌ಕೇಸ್‌ಗಳು ಮತ್ತು ಲಗೇಜ್‌ಗಳಿವೆ,” ಎಂದು ಕುಟುಕಿದರು.

ಇದನ್ನೂ ಓದಿ: ಇನ್ಮುಂದೆ 15 ನಿಮಿಷದಲ್ಲಿ 108 ಆ್ಯಂಬುಲೆನ್ಸ್ ಬರದಿದ್ರೆ 5,000 ರೂ. ಭಾರಿ ದಂಡ

ಟಿಎಂಸಿ ಹಿರಿಯ ನಾಯಕ ಶೋಭನ್‌ದೇವ್ ಚಟ್ಟೋಪಾಧ್ಯಾಯ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಮದನ್ ಮಿತ್ರಾ ನಮ್ಮನ್ನು ಬಿಟ್ಟು ಹೋಗಿರುವುದಕ್ಕೆ ಬೇಸರವಾಗಿದೆ. ಆದರೆ ಅವರ ಪತ್ನಿ ಮತ್ತು ಮಗನಿಗೆ ಇಡಿ ಸಮನ್ಸ್ ನೀಡಿದ್ದರಿಂದ ಅವರು ಮಾನಸಿಕ ಸ್ಥೈರ್ಯ ಕಳೆದುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ,” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *