ಬ್ಯಾಂಕಾಕ್: ಭಾರತೀಯ ಪ್ರವಾಸಿಗರ ಅತ್ಯಂತ ಪ್ರೀತಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಥೈಲ್ಯಾಂಡ್, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ನೀಡಲಾಗುತ್ತಿದ್ದ ವೀಸಾ ಮುಕ್ತ ಪ್ರವೇಶ ಸೌಲಭ್ಯವನ್ನು ಮುಂದುವರಿಸಲು ನಿರ್ಧರಿಸಿದೆ. ಆದರೆ, ಈ ಹಿಂದೆ ಇದ್ದ 60 ದಿನಗಳ ಗರಿಷ್ಠ ವಾಸ್ತವ್ಯದ ಅವಧಿಯನ್ನು ಇನ್ಮುಂದೆ 30 ದಿನಗಳಿಗೆ ಕಡಿತಗೊಳಿಸಲಾಗಿದೆ.
ಈ ಹಿಂದೆ ಭಾರತೀಯರಿಗೆ ವೀಸಾ ರಹಿತ ಪ್ರವೇಶ ರದ್ದುಗೊಳಿಸಿ, ಹಣ ಪಾವತಿಸಿ ಪಡೆಯುವ ‘ವೀಸಾ ಆನ್ ಅರೈವಲ್’ (Visa on Arrival) ನಿಯಮವನ್ನು ಜಾರಿಗೆ ತರಲು ಥೈಲ್ಯಾಂಡ್ ಉದ್ದೇಶಿಸಿತ್ತು. ಈ ಪ್ರಸ್ತಾವನೆಯಿಂದ ಗೊಂದಲಕ್ಕೊಳಗಾದ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ದಿಢೀರ್ ಕುಸಿತ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಥೈಲ್ಯಾಂಡ್ ಸರ್ಕಾರ, ಇದೀಗ ಭಾರತೀಯರಿಗೆ ವೀಸಾ ಮುಕ್ತ ಯೋಜನೆಯನ್ನು ಮುಂದುವರಿಸಲು ಹಸಿರು ನಿಶಾನೆ ನೀಡಿದೆ.
ಥೈಲ್ಯಾಂಡ್‌ಗೆ ಪ್ರತಿವರ್ಷ ಭಾರತದಿಂದ ಸುಮಾರು 25 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಾಗಿ ಭಾರತವು ಥೈಲ್ಯಾಂಡ್ ಪ್ರವಾಸೋದ್ಯಮದ ಅತಿ ದೊಡ್ಡ ಮಾರುಕಟ್ಟೆಯಾಗಿದೆ.
ಮಂಗಳವಾರ ನಡೆದ ಕ್ಯಾಬಿನೆಟ್ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಥೈಲ್ಯಾಂಡ್ ಪ್ರವಾಸೋದ್ಯಮ ಸಚಿವ ಸುರಸಕ್ ಪಂಚರೋಯನ್ವೋರಾಕುಲ್, “ಭಾರತೀಯ ಪ್ರವಾಸಿಗರು ಥೈಲ್ಯಾಂಡ್‌ಗೆ ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದ್ದಾರೆ. ಅವರ ಪ್ರಯಾಣದ ಶೈಲಿ ಮತ್ತು ನಡವಳಿಕೆಗೆ ಅನುಗುಣವಾಗಿ 30 ದಿನಗಳ ವೀಸಾ ಮುಕ್ತ ಪ್ರವೇಶ ನೀಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಭವಿಷ್ಯದಲ್ಲಿ ಈ ಕ್ರಮದಿಂದ ಏನಾದರೂ ತೊಂದರೆ ಉಂಟಾದರೆ, ಸರ್ಕಾರ ಅದನ್ನು ಮರುಪರಿಶೀಲಿಸಲಿದೆ,” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಯೋನಿಯಲ್ಲಿ ಸೋಂಕು: ನಿರ್ಲಕ್ಷ್ಯ ಬೇಡ, ಸರಿಯಾದ ಆರೈಕೆಯೇ ಪರಿಹಾರ
ಭದ್ರತೆಯ ಕಾರಣಕ್ಕೆ ನಿಯಮಗಳಲ್ಲಿ ಬದಲಾವಣೆ:
ಥೈಲ್ಯಾಂಡ್ ಕ್ಯಾಬಿನೆಟ್ ಈ ಹಿಂದೆ ಮೇ 2026 ರಲ್ಲಿ ವೀಸಾ ಮುಕ್ತ ಪ್ರಯಾಣದ ಸೌಲಭ್ಯ ಹೊಂದಿದ್ದ ದೇಶಗಳ ಪಟ್ಟಿಯನ್ನು 93 ರಿಂದ 65 ಕ್ಕೆ ಇಳಿಸಲು ಪ್ರಸ್ತಾಪಿಸಿತ್ತು. ದೇಶದ ಭದ್ರತೆಯನ್ನು ಹೆಚ್ಚಿಸುವುದು ಮತ್ತು ಪ್ರವಾಸೋದ್ಯಮದ ಹೆಸರಿನಲ್ಲಿ ವೀಸಾ ರಹಿತ ಪ್ರವೇಶವನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

