ಮಹಿಳೆಯರ ಆರೋಗ್ಯದಲ್ಲಿ ಯೋನಿಯ ಸ್ವಚ್ಛತೆ ಮತ್ತು ಆರೈಕೆ ಅತ್ಯಂತ ಮಹತ್ವದ್ದಾಗಿದೆ. ಆದರೆ ಸಂಕೋಚ, ಮುಜುಗರ ಅಥವಾ ಮಾಹಿತಿಯ ಕೊರತೆಯಿಂದ ಅನೇಕ ಮಹಿಳೆಯರು ಯೋನಿಯಲ್ಲಿ ಉಂಟಾಗುವ ಸೋಂಕಿನ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುತ್ತಾರೆ. ಇದರಿಂದ ತುರಿಕೆ, ಉರಿ, ದುರ್ವಾಸನೆ, ಬಿಳಿ ಸ್ರಾವ, ನೋವು ಹಾಗೂ ಅಸ್ವಸ್ಥತೆ ಉಂಟಾಗಬಹುದು. ಆರಂಭದಲ್ಲೇ ಸರಿಯಾದ ಆರೈಕೆ ಮಾಡಿದರೆ ಇಂತಹ ಸೋಂಕುಗಳನ್ನು ಸಾಕಷ್ಟು ಮಟ್ಟಿಗೆ ತಡೆಯಬಹುದು.
ಸೋಂಕಿನ ಸಾಮಾನ್ಯ ಲಕ್ಷಣಗಳು
ಯೋನಿಯಲ್ಲಿ ಸೋಂಕು ಇದ್ದರೆ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು.
ಯೋನಿಯ ಭಾಗದಲ್ಲಿ ತೀವ್ರ ತುರಿಕೆ ಅಥವಾ ಉರಿ.
ಬಿಳಿ, ಹಳದಿ ಅಥವಾ ಹಸಿರು ಬಣ್ಣದ ಅಸಹಜ ಸ್ರಾವ.
ದುರ್ವಾಸನೆ ಬರುವುದು.
ಮೂತ್ರ ವಿಸರ್ಜನೆ ವೇಳೆ ಉರಿ ಅಥವಾ ನೋವು.
ಸಂಭೋಗದ ವೇಳೆ ವೇಳೆ ನೋವು ಅನುಭವಿಸುವುದು.
ಯೋನಿಯ ಸುತ್ತ ಕೆಂಪಾಗುವುದು ಅಥವಾ ಊತ ಕಾಣಿಸಿಕೊಳ್ಳುವುದು.
ಸೋಂಕಿಗೆ ಕಾರಣಗಳೇನು?
ಯೋನಿಯಲ್ಲಿ ಸೋಂಕು ಬರಲು ಹಲವು ಕಾರಣಗಳಿರಬಹುದು.
ವೈಯಕ್ತಿಕ ಸ್ವಚ್ಛತೆಯ ಕೊರತೆ.
ಹೆಚ್ಚು ಸಮಯ ಒದ್ದೆಯಾದ ಅಥವಾ ಬೆವರಿನಿಂದ ತೇವಗೊಂಡ ಒಳಉಡುಪು ಧರಿಸುವುದು.
ಸಿಂಥೆಟಿಕ್ ಹಾಗೂ ಬಿಗಿಯಾದ ಅಂಡರ್ಗಾರ್ಮೆಂಟ್ಸ್ ಬಳಸುವುದು.
ಹೆಚ್ಚು ಕೆಮಿಕಲ್ ಇರುವ ಸೋಪ್ ಅಥವಾ ಇಂಟಿಮೇಟ್ ವಾಶ್ ಬಳಸುವುದು.
ಲೈಂಗಿಕ ಸಂಪರ್ಕದಿಂದ ಕೂಡ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
ಮಧುಮೇಹ ನಿಯಂತ್ರಣದಲ್ಲಿ ಇಲ್ಲದಿರುವುದು.
ರೋಗನಿರೋಧಕ ಶಕ್ತಿ ಕಡಿಮೆಯಾಗುವುದು.
ಅಗತ್ಯವಿಲ್ಲದೆ ಆ್ಯಂಟಿಬಯೋಟಿಕ್ ಔಷಧಿಗಳನ್ನು ಸೇವಿಸುವುದು
ಇದನ್ನೂ ಓದಿ: ಆರೋಗ್ಯ ಟಿಪ್ಸ್: ಮಳೆಗಾಲದಲ್ಲಿ ‘ಹಲಸಿನ ಹಣ್ಣು’ ತಿಂದರೆ ಅಮೃತನಾ ಅಥವಾ ಅಪಾಯನಾ?
ಸೋಂಕು ತಡೆಯಲು ಏನು ಮಾಡಬೇಕು?
ಯೋನಿಯ ಭಾಗವನ್ನು ಪ್ರತಿದಿನ ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸುವುದು ಉತ್ತಮ ಅಭ್ಯಾಸ. ಅತಿಯಾದ ಬಿಸಿ ನೀರು ಅಥವಾ ತುಂಬಾ ತಣ್ಣನೆಯ ನೀರನ್ನು ಬಳಸುವುದನ್ನು ತಪ್ಪಿಸಬೇಕು. ದಿನನಿತ್ಯ ಸ್ವಚ್ಛತೆ ಕಾಪಾಡುವುದರಿಂದ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ಕಡಿಮೆ ಮಾಡಬಹುದು.
ಅದೇ ರೀತಿ, ಕಾಟನ್ (ಹತ್ತಿ) ಅಂಡರ್ಗಾರ್ಮೆಂಟ್ಸ್ ಧರಿಸುವುದು ಅತ್ಯಂತ ಉತ್ತಮ. ಹತ್ತಿಯ ಬಟ್ಟೆ ಗಾಳಿಯಾಡಲು ಅವಕಾಶ ನೀಡುವುದರಿಂದ ತೇವಾಂಶ ಕಡಿಮೆಯಾಗುತ್ತದೆ. ಸಿಂಥೆಟಿಕ್ ಅಥವಾ ಬಿಗಿಯಾದ ಒಳಉಡುಪುಗಳನ್ನು ಹೆಚ್ಚು ಹೊತ್ತು ಧರಿಸುವುದರಿಂದ ಸೋಂಕಿನ ಸಾಧ್ಯತೆ ಹೆಚ್ಚಾಗಬಹುದು. ಪ್ರತಿದಿನ ಸ್ವಚ್ಛವಾದ ಒಳಉಡುಪು ಧರಿಸುವುದು ಮತ್ತು ಬೆವರು ಅಥವಾ ತೇವ ಉಳಿಯದಂತೆ ನೋಡಿಕೊಳ್ಳುವುದು ಮುಖ್ಯ.
ಆಯುರ್ವೇದದಲ್ಲಿ ಕಹಿಬೇವಿನ ಎಲೆಗಳಿಗೆ ವಿಶೇಷ ಸ್ಥಾನವಿದೆ. ಕಹಿಬೇವಿನ ಸೊಪ್ಪಿನಿಂದ ತಯಾರಿಸಿದ ಉಗುರು ಬೆಚ್ಚಗಿನ ಕಷಾಯದಿಂದ ದಿನಕ್ಕೆ ಎರಡು ಬಾರಿ ಯೋನಿಯ ಹೊರಭಾಗವನ್ನು ತೊಳೆಯುವುದು ಸ್ವಚ್ಛತೆಯನ್ನು ಕಾಪಾಡಲು ಸಹಕಾರಿ ಎಂದು ಪರಿಗಣಿಸಲಾಗಿದೆ. ಕಹಿಬೇವಿನಲ್ಲಿ ನೈಸರ್ಗಿಕ ಜೀವಾಣು ವಿರೋಧಿ ಗುಣಗಳಿರುವುದರಿಂದ ಇದು ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಇನ್ನೊಂದು ಆಯುರ್ವೇದ ವಿಧಾನವೆಂದರೆ ಕಹಿಬೇವಿನ ಎಲೆಗಳನ್ನು ಚೆನ್ನಾಗಿ ಒಣಗಿಸಿ ಪುಡಿ ಮಾಡಿ, ಅದಕ್ಕೆ ಕಾಲು ಭಾಗದಷ್ಟು ಅರಿಶಿನ ಪುಡಿಯನ್ನು ಸೇರಿಸಿ ಮಿಶ್ರಣ ತಯಾರಿಸುವುದು. ಈ ಪುಡಿಯನ್ನು ವೈದ್ಯರ ಸಲಹೆಯಂತೆ ಯೋನಿಯ ಹೊರಭಾಗಕ್ಕೆ ಹಚ್ಚಬಹುದು. ಅರಿಶಿನವು ಸಹ ನೈಸರ್ಗಿಕ ಉರಿಯೂತ ಮತ್ತು ಜೀವಾಣು ವಿರೋಧಿ ಗುಣಗಳನ್ನು ಹೊಂದಿದೆ. ಆದರೆ ಯಾವುದೇ ಮನೆಮದ್ದು ಬಳಸುವ ಮೊದಲು ಆಯುರ್ವೇದ ವೈದ್ಯರ ಸಲಹೆ ಪಡೆಯುವುದು ಉತ್ತಮ.
ಇತ್ತೀಚಿನ ದಿನಗಳಲ್ಲಿ ಸುಗಂಧಯುಕ್ತ ಅಥವಾ ಹೆಚ್ಚು ರಾಸಾಯನಿಕ ಅಂಶಗಳಿರುವ ಸೋಪ್, ಬಾಡಿ ವಾಶ್ ಹಾಗೂ ಇಂಟಿಮೇಟ್ ವಾಶ್ ಉತ್ಪನ್ನಗಳನ್ನು ಹಲವರು ಬಳಸುತ್ತಾರೆ. ಆದರೆ ಯೋನಿಯ ಭಾಗಕ್ಕೆ ಆದಷ್ಟು ಕೆಮಿಕಲ್ ಇರುವ ಸೋಪ್ಗಳನ್ನು ಬಳಸುವುದನ್ನು ತಪ್ಪಿಸಬೇಕು. ಇವು ಯೋನಿಯ ನೈಸರ್ಗಿಕ ರಕ್ಷಣಾತ್ಮಕ ಸಮತೋಲನವನ್ನು ಹಾಳುಮಾಡಿ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ಸಾಮಾನ್ಯವಾಗಿ ಉಗುರು ಬೆಚ್ಚಗಿನ ನೀರಿನಿಂದ ಸ್ವಚ್ಛಗೊಳಿಸುವುದೇ ಸಾಕಾಗುತ್ತದೆ.
ಇದಲ್ಲದೆ ಸಾಕಷ್ಟು ನೀರು ಕುಡಿಯುವುದು, ಪೌಷ್ಟಿಕ ಆಹಾರ ಸೇವಿಸುವುದು, ಮಧುಮೇಹ ಇರುವವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು ಹಾಗೂ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಸಹ ಬಹಳ ಮುಖ್ಯ.
ಯೋನಿಯಲ್ಲಿ ತುರಿಕೆ, ಉರಿ, ದುರ್ವಾಸನೆ, ಅಸಹಜ ಸ್ರಾವ ಅಥವಾ ನೋವು ಕೆಲವು ದಿನಗಳಿಗೂ ಮುಂದುವರಿದರೆ ಸ್ವಯಂ ಔಷಧಿ ಸೇವಿಸುವ ಬದಲು ತಕ್ಷಣ ಅರ್ಹ ವೈದ್ಯರನ್ನು ಸಂಪರ್ಕಿಸಬೇಕು. ಸಮಯಕ್ಕೆ ಸರಿಯಾದ ಚಿಕಿತ್ಸೆ ಪಡೆದರೆ ಸಮಸ್ಯೆ ಬೇಗ ನಿಯಂತ್ರಣಕ್ಕೆ ಬರುತ್ತದೆ ಮತ್ತು ಗಂಭೀರ ತೊಂದರೆಗಳನ್ನು ತಪ್ಪಿಸಬಹುದು.
ಈ ಮೂಲಕ ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸೋಣ. ಯೋನಿಯ ಆರೋಗ್ಯವೂ ದೇಹದ ಆರೋಗ್ಯದಷ್ಟೇ ಮುಖ್ಯ ಎಂಬ ಅರಿವು ಪ್ರತಿಯೊಬ್ಬ ಮಹಿಳೆಯಲ್ಲೂ ಮೂಡಬೇಕು. ಸರಿಯಾದ ಸ್ವಚ್ಛತೆ, ಉತ್ತಮ ಜೀವನಶೈಲಿ ಹಾಗೂ ಅಗತ್ಯವಿದ್ದಾಗ ವೈದ್ಯರ ಸಲಹೆ—ಇವೇ ಆರೋಗ್ಯಕರ ಜೀವನದ ಗುಟ್ಟು.
(ಸೂಚನೆ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಸೋಂಕು ಅಥವಾ ತೀವ್ರ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯ.)
ಡಾ. ಸುಮಾ ಸಿ. BAMS
Mob No.: 9483207324
ಸ್ಥಳ: ಉಪ್ಪಿನಂಗಡಿ
ಹೆಚ್ಚಿನ ಮಾಹಿತಿ, ಆನ್ಲೈನ್ ಸಮಾಲೋಚನೆಗಾಗಿ ಅಥವಾ ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ಪ್ರಶ್ನೆಗಳಿದ್ದರೆ ಮೇಲಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸ್ಆಪ್ ಮೂಲಕ ಸಂಪರ್ಕಿಸಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

