ಬೆಳ್ತಂಗಡಿ: ಇಡೀ ರಾಜ್ಯದ ಗಮನ ಸೆಳೆದಿದ್ದ ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ವಿಶೇಷ ತನಿಖಾ ತಂಡವು (SIT), ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಅಂತಿಮ ಚಾರ್ಜ್‌ಶೀಟ್ (ವರದಿ) ಸಲ್ಲಿಕೆ ಮಾಡಿದೆ. ಎಸ್‌ಐಟಿ ಎಸ್‌ಪಿ ಸಿ.ಎ. ಸೈಮನ್ ನೇತೃತ್ವದ ತನಿಖಾ ತಂಡವು ಈ ಬೃಹತ್ ವರದಿಯನ್ನು ಕೋರ್ಟ್‌ಗೆ ಒಪ್ಪಿಸಿದೆ.
ಬುರುಡೆ ಪ್ರಕರಣದ ಸತ್ಯಾಸತ್ಯತೆ ಹೊರತರಲು ಎಸ್‌ಐಟಿ ಅಧಿಕಾರಿಗಳು ಸುದೀರ್ಘ ತನಿಖೆ ನಡೆಸಿದ್ದು, ದಾಖಲೆಗಳ ಮಹಾಪೂರವನ್ನೇ ನ್ಯಾಯಾಲಯದ ಮುಂದೆ ಇಟ್ಟಿದ್ದಾರೆ. ಎಸ್‌ಐಟಿ ತಂಡವು ಒಟ್ಟು 12 ಫೈಲ್‌ಗಳಲ್ಲಿ ಬರೋಬ್ಬರಿ 7,005 ಪುಟಗಳ ಸುದೀರ್ಘ ವರದಿಯನ್ನು ಸಲ್ಲಿಸಿದೆ.
ಈ ಹಿಂದೆ 2025ರ ನವೆಂಬರ್ 20 ರಂದು ಎಸ್‌ಐಟಿ 3,923 ಪುಟಗಳ ಮಧ್ಯಂತರ ವರದಿಯನ್ನು ಸಲ್ಲಿಸಿತ್ತು. ಇದೀಗ ಅದಕ್ಕೆ ಪೂರಕವಾಗಿ 3,082 ಪುಟಗಳ ಇಂದಿನ ವರದಿಯನ್ನು ಸೇರಿಸಿ, ಒಟ್ಟು 7,005 ಪುಟಗಳ ಅಂತಿಮ ತನಿಖಾ ವರದಿಯನ್ನು ಸಿದ್ಧಪಡಿಸಲಾಗಿದೆ.
ಈ ಇಡೀ ಪ್ರಕರಣವು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 2025ರ ಆಗಸ್ಟ್ 23 ರಂದು ದಾಖಲಾಗಿದ್ದ ದೂರು ಸಂಖ್ಯೆ 39/2025 ರ ಆಧಾರದ ಮೇಲೆ ತನಿಖೆಗೆ ಒಳಪಟ್ಟಿತ್ತು.ಸಾರ್ವಜನಿಕ ವಲಯದಲ್ಲಿ ‘ಮಾಸ್ಕ್ ಮ್ಯಾನ್’ ಎಂದೇ ಗುರುತಿಸಿಕೊಂಡಿದ್ದ ಚಿನ್ನಯ್ಯ ಎಂಬಾತ ಈ ದೂರನ್ನು ನೀಡಿದ್ದನು.
ಇದನ್ನೂ ಓದಿ: ಇನ್ಮುಂದೆ 15 ನಿಮಿಷದಲ್ಲಿ 108 ಆ್ಯಂಬುಲೆನ್ಸ್ ಬರದಿದ್ರೆ 5,000 ರೂ. ಭಾರಿ ದಂಡ
ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ, ಪ್ರಮುಖ ಆರೋಪಿಗಳಾದ ಸಿ.ಎನ್. ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ., ವಿಠಲಗೌಡ ಮತ್ತು ಸುಜಾತಾ ಭಟ್ ಅವರು ಈ ಪ್ರಕರಣದಲ್ಲಿ ಸುಳ್ಳು ಸಾಕ್ಷಿಗಳನ್ನು ಸೃಷ್ಟಿ ಮಾಡಿದ್ದಾರೆ ಎಂಬುದನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷದಿಂದ ತೀವ್ರ ಕುತೂಹಲ ಮೂಡಿಸಿದ್ದ ಈ ಬುರುಡೆ ಪ್ರಕರಣದ ಅಂತಿಮ ವರದಿ ಸಲ್ಲಿಕೆಯಾಗಿರುವುದರಿಂದ, ಮುಂಬರುವ ದಿನಗಳಲ್ಲಿ ನ್ಯಾಯಾಲಯದಲ್ಲಿ ಕಾನೂನು ಪ್ರಕ್ರಿಯೆಗಳು ತೀವ್ರಗೊಳ್ಳಲಿವೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

