ಉಪ್ಪಿನಂಗಡಿ ಖೋಟಾನೋಟು ದಂಧೆ: ಆರ್‌ಬಿಐ ಸೀಲ್, ಗಾಂಧೀಜಿ ಮುದ್ರೆ ಪತ್ತೆ

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ಭೇದಿಸಿರುವ ನಕಲಿ ನೋಟು ತಯಾರಿಕಾ ಜಾಲದ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ಅರುಣ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಪದ್ಮುಂಜದ ಅಡೆಂಜ ಎಂಬಲ್ಲಿ ತಡರಾತ್ರಿ ನಡೆಸಲಾದ ಈ ಮಿಂಚಿನ ಕಾರ್ಯಾಚರಣೆಯಲ್ಲಿ ಬರೋಬ್ಬರಿ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಖೋಟಾನೋಟು ಮುದ್ರಣಕ್ಕೆ ಬಳಸುತ್ತಿದ್ದ ಹೈಟೆಕ್ ಉಪಕರಣಗಳು ಮತ್ತು ನಕಲಿ ಆರ್‌ಬಿಐ ಮುದ್ರೆಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಉಪ್ಪಿನಂಗಡಿ ಪೊಲೀಸರ ತಂಡವು ಪದ್ಮುಂಜ ಗ್ರಾಮದ ಅಡೆಂಜ ಎಂಬಲ್ಲಿ ತಡರಾತ್ರಿ ಧಾವಿಸಿ ಅತ್ಯಂತ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ನಕಲಿ ನೋಟು ತಯಾರಿಸುತ್ತಿದ್ದ ಆರೋಪದ ಮೇಲೆ ಸ್ಥಳದಲ್ಲಿದ್ದ ಏಳು ಮಂದಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಪ್ಪು ದಂಧೆಯನ್ನು ನಡೆಸಲು ರಹಸ್ಯವಾಗಿ ಬಾಡಿಗೆ ಕಟ್ಟಡವನ್ನು ಒದಗಿಸಿಕೊಟ್ಟಿದ್ದ ಸ್ಥಳೀಯ ವ್ಯಕ್ತಿಯನ್ನೂ ಸಹ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಖೋಟಾನೋಟುಗಳನ್ನು ಅಸಲಿ ನೋಟುಗಳಂತೆಯೇ ಬಿಂಬಿಸಲು ಆರೋಪಿಗಳು ಹೈಟೆಕ್ ತಂತ್ರಜ್ಞಾನ ಹಾಗೂ ಮುದ್ರೆಗಳನ್ನು ಸೃಷ್ಟಿಸಿಕೊಂಡಿದ್ದರು. 500 ರೂ.ಮುಖಬೆಲೆಯ ಮುದ್ರಿತ ನಕಲಿ ನೋಟುಗಳ ಬಂಡಲ್ ಪತ್ತೆಯಾಗಿದೆ. ಖೋಟಾನೋಟು ಮುದ್ರಣಕ್ಕೆ ಬಳಸುತ್ತಿದ್ದ ಅತ್ಯಾಧುನಿಕ ಪ್ರಿಂಟಿಂಗ್ ಮೆಷಿನ್, ಕಂಪ್ಯೂಟರ್ ಮಾನಿಟರ್‌ಗಳು, ನಕಲಿ ಆರ್‌ಬಿಐ ಸೀಲ್ ಟ್ರೇಡ್, ಮಹಾತ್ಮಾ ಗಾಂಧೀಜಿ ಭಾವಚಿತ್ರವಿರುವ ನಕಲಿ ಸೀಲ್, ನೋಟು ಮುದ್ರಣಕ್ಕೆ ಬಳಸಲಾಗುತ್ತಿದ್ದ ಕಾಗದಗಳು ಪತ್ತೆಯಾಗಿದೆ.

ಇದನ್ನೂ ಓದಿ: Bantwal: ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಚಿಕ್ಕಮಗಳೂರು ಜೈಲಿಗೆ ಸ್ಥಳಾಂತರ

ಈ ದಂಧೆಯ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಸಂಖ್ಯೆ: 103/2026 ರ ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಎಸ್‌ಪಿ ಡಾ. ಅರುಣ್ ಅವರು, “ಬಂಧಿತ ಆರೋಪಿಗಳು ಈ ನಕಲಿ ನೋಟುಗಳನ್ನು ಎಲ್ಲೆಲ್ಲಿ ಚಲಾವಣೆ ಮಾಡಲು ಸಂಚು ಹೂಡಿದ್ದರು? ಈ ಜಾಲದ ಹಿಂದೆ ಇನ್ನು ಯಾರಾದರೂ ಕಿಂಗ್‌ಪಿನ್‌ಗಳು ಇದ್ದಾರೆಯೇ? ಎಂಬಿತ್ಯಾದಿ ಆಯಾಮಗಳಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ,” ಎಂದು ತಿಳಿಸಿದ್ದಾರೆ. ಪೊಲೀಸರ ಈ ಸಮಯಪ್ರಜ್ಞೆಯ ತಡರಾತ್ರಿ ಕಾರ್ಯಾಚರಣೆಗೆ ಕರಾವಳಿ ಭಾಗದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *