ಧಾರವಾಡ: ಇಲ್ಲಿನ ಜಯನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 45 ವರ್ಷದ ವೈದ್ಯರೊಬ್ಬರನ್ನು ಚಾಕುವಿನಿಂದ ಹಲವು ಬಾರಿ ಇರಿದು ಭೀಕರವಾಗಿ ಕೊಲೆ ಮಾಡಲಾಗಿದೆ. ಘಟನೆಯಲ್ಲಿ ವೈದ್ಯರ 8 ವರ್ಷದ ಪುತ್ರನಿಗೂ ಗಂಭೀರವಾಗಿ ಇರಿಯಲಾಗಿದ್ದು, ಆತ ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಮೃತರನ್ನು ಕಿರಣ್ ಹೊನ್ನನಾವರ್ (45) ಎಂದು ಗುರುತಿಸಲಾಗಿದೆ.
ಮಂಗಳವಾರದಂದು ಈ ರಕ್ತಪಾತ ನಡೆದಿದ್ದು, ಸಂಜೆ ವೇಳೆಗೆ ಘಟನೆ ಬೆಳಕಿಗೆ ಬಂದಿದೆ. ಕಿರಣ್ ಅವರು ದಿನವಿಡೀ ಸಂಬಂಧಿಕರ ಫೋನ್ ಕರೆಗಳಿಗೆ ಸ್ಪಂದಿಸಿರಲಿಲ್ಲ. ಇದರಿಂದ ಆತಂಕಗೊಂಡ ಸಂಬಂಧಿಕರು ಸಂಜೆ ಜಯನಗರದಲ್ಲಿರುವ ‘ರಂಕಾ ಅಪಾರ್ಟ್‌ಮೆಂಟ್ಸ್’ನ (Ranka Apartments) ಕಿರಣ್ ಅವರ ಮನೆಗೆ ಭೇಟಿ ನೀಡಿದ್ದಾರೆ.
ಮನೆಗೆ ಬಂದು ನೋಡಿದಾಗ ಕಿರಣ್ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿರುವುದು ಕಂಡುಬಂದಿದೆ. ಕಿರಣ್ ಅವರ ಪತ್ನಿ ಪ್ರಿಯಾಂಕಾ ಕೂಡ ವೈದ್ಯೆಯಾಗಿದ್ದು, ಅವರೇ ಪತಿ ಕಿರಣ್ ಅವರನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ ಎಂದು ಮೃತರ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ.
ಸಂಬಂಧಿಕರು ನೀಡಿದ ಮಾಹಿತಿ ಮೇರೆಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರಂಭಿಕ ವರದಿಗಳ ಪ್ರಕಾರ ತಂದೆ ಮತ್ತು ಮಗ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ಪೊಲೀಸರು ಸ್ಥಳ ಮಹಜರು ನಡೆಸಿ ತಪಾಸಣೆ ಮಾಡುವಾಗ 8 ವರ್ಷದ ಬಾಲಕ ಇನ್ನೂ ಉಸಿರಾಡುತ್ತಿರುವುದು ಪತ್ತೆಯಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಬಾಲಕನನ್ನು ಜೀಪ್‌ನಲ್ಲಿ ಅತ್ಯಂತ ತುರ್ತಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಬಾಲಕನಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, “ಘಟನೆಯ ಬಗ್ಗೆ ಇಷ್ಟು ಬೇಗ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಮೃತ ಕಿರಣ್ ಅವರ ಸಂಬಂಧಿಕರು ನೀಡುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ಕೌಟುಂಬಿಕ ಕಲಹ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ಸುಧೀರ್ಘ ತನಿಖೆ ನಡೆಸಲಿದ್ದೇವೆ,” ಎಂದು ತಿಳಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದರು. ಇದೀಗ ಮಹತ್ವ ಸ್ಫೋಟಕ ಸತ್ಯ ಹೊರ ಬಿದ್ದಿದೆ. ಪತ್ನಿ ಪ್ರಿಯಾಂಕ ಇದೀಗ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ವಿಚ್ಛೇದನದ ಬಳಿಕ ಮ್ಯಾಟ್ರಿಮೋನಿಯಲ್ಲಿ ಸಿಕ್ಕಿದ್ದ ಜೋಡಿ
ಪೊಲೀಸ್ ತನಿಖೆಯ ವೇಳೆ ದಂಪತಿಗಳ ಹಿನ್ನೆಲೆ ಹಾಗೂ ಕೊಲೆಗೆ ಕಾರಣವಾದ ಕೌಟುಂಬಿಕ ಕಲಹದ ಸತ್ಯಾಂಶಗಳು ಬಯಲಾಗಿವೆ. ಮೃತ ಡಾ. ಕಿರಣ್ ಹೊನ್ನಣ್ಣನವರ್ ಹಾಗೂ ಪ್ರಿಯಾಂಕಾ ಮೊದಲು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ವೈಮನಸ್ಯದಿಂದಾಗಿ ಇವರಿಬ್ಬರಿಗೂ ಕಾನೂನಾತ್ಮಕವಾಗಿ ವಿಚ್ಛೇದನ (Divorce) ಆಗಿತ್ತು. ಅದಾದ ಬಳಿಕ ಮತ್ತೊಮ್ಮೆ ಮ್ಯಾಟ್ರಿಮೋನಿ (Matrimony) ವೆಬ್‌ಸೈಟ್ ಮೂಲಕ ಇಬ್ಬರಿಗೂ ಮತ್ತೆ ಪರಿಚಯವಾಗಿ, ಹಳೆಯದ್ದನ್ನೆಲ್ಲ ಮರೆತು ಎರಡನೇ ಬಾರಿಗೆ ಮದುವೆಯಾಗಿದ್ದರು.
ಎರಡನೇ ಮದುವೆಯಾದ ಮೇಲೂ ಇವರ ಸಂಸಾರದಲ್ಲಿ ಶಾಂತಿ ಇರಲಿಲ್ಲ. ಪತ್ನಿ ಡಾ. ಪ್ರಿಯಾಂಕಾ ತೀವ್ರ ಮಾನಸಿಕ ಸಮಸ್ಯೆಯಿಂದ (Mental health issues) ಬಳಲುತ್ತಿದ್ದರು ಎನ್ನಲಾಗಿದೆ. ಇದರ ಜೊತೆಗೆ ಆಕೆ ತನ್ನ ಪತಿ ಕಿರಣ್ ಮೇಲೆ ನಿರಂತರವಾಗಿ ಅನುಮಾನ ಪಡುತ್ತಿದ್ದಳು. ಇದೇ ಕಾರಣಕ್ಕಾಗಿ ದಂಪತಿಗಳ ನಡುವೆ ಪ್ರತಿದಿನ ಆಗಾಗ ದೊಡ್ಡ ಮಟ್ಟದ ಜಗಳಗಳು ನಡೆಯುತ್ತಿದ್ದವು. ಬುಧವಾರ ಬೆಳಗ್ಗೆ ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಪತ್ನಿ ಪ್ರಿಯಾಂಕಾ ಚಾಕುವಿನಿಂದ ಪತಿ ಕಿರಣ್ ಅವರಿಗೆ ಮನಬಂದಂತೆ ಇರಿದು ಭೀಕರವಾಗಿ ಕೊಲೆ ಮಾಡಿದ್ದಾಳೆ.
ಇದನ್ನೂ ಓದಿ: ಬಂಟ್ವಾಳದಲ್ಲಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕೆಂಪುಕಲ್ಲು ಲಾರಿ; ಓರ್ವ ಕಾರ್ಮಿಕ ದುರ್ಮರಣ, ಇಬ್ಬರಿಗೆ ಗಂಭೀರ ಗಾಯ
ಪತಿಯನ್ನು ಕೊಂದ ಬೆನ್ನಲ್ಲೇ ಆಕೆ ತನ್ನ 8 ವರ್ಷದ ಪುತ್ರ ನಿಹಿಲ್ ಮೇಲೂ ಕ್ರೌರ್ಯ ಮೆರೆದಿದ್ದಾಳೆ. ಬಾಲಕನ ದೇಹದ ಎರಡು ಕಡೆ ಚಾಕುವಿನಿಂದ ಭೀಕರವಾಗಿ ಇರಿದು ಸಾಯಿಸಲು ಯತ್ನಿಸಿದ್ದಾಳೆ. ಘಟನೆ ನಡೆದ ಬಳಿಕ ಸಂಬಂಧಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಮನೆಗೆ ಹೋದಾಗ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕ ನಿಹಿಲ್ ಇನ್ನು ಉಸಿರಾಡುತ್ತಿರುವುದನ್ನು ಪೊಲೀಸರು ಸೂಕ್ಷ್ಮವಾಗಿ ಗಮನಿಸಿದ್ದರು. ತಕ್ಷಣವೇ ಬಾಲಕನನ್ನು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

