‘ನೀನು ಮುಸ್ಲಿಮಾ?’ ಎಂದು ಪ್ರಶ್ನಿಸಿ ಭಾರತೀಯ ಯುವಕನಿಗೆ 15 ಬಾರಿ ಚಾಕು ಇರಿದ ವ್ಯಕ್ತಿ

ವಾಷಿಂಗ್ಟನ್: ಅಮೆರಿಕದ ಯುಟಾ (Utah) ಪ್ರಾಂತ್ಯದ ವೆಸ್ಟ್ ವ್ಯಾಲಿ ಸಿಟಿಯಲ್ಲಿರುವ ‘ವ್ಯಾಲಿ ಫೇರ್ ಮಾಲ್’ ಭೀಕರ ರಕ್ತಪಾತಕ್ಕೆ ಸಾಕ್ಷಿಯಾಗಿದೆ. ಶಾಪಿಂಗ್ ಮಾಲ್‌ನ ಕಿಯೋಸ್ಕ್ (Kiosk) ಒಂದರಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಮುಸ್ಲಿಂ ಯುವಕನ ಮೇಲೆ ದುಷ್ಕರ್ಮಿಯೊಬ್ಬ ಜನಾಂಗೀಯ ದ್ವೇಷದಿಂದ ಬರೋಬ್ಬರಿ 15 ಬಾರಿ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ.

ವರದಿಗಳ ಪ್ರಕಾರ, ಇರಿತಕ್ಕೀಡಾದ ಯುವಕನನ್ನು ಸಯೀದ್ ಸೊಹೈಲ್ ಉದ್ದೀನ್ ಎಂದು ಗುರುತಿಸಲಾಗಿದೆ. 48 ವರ್ಷದ ಪೀಟರ್ ಮೈಕಲ್ ಲಾರ್ಸೆನ್ ಎಂಬಾತನೇ ಈ ಕ್ರೂರ ಕೃತ್ಯ ಎಸಗಿದ ಆರೋಪಿ. ಆರೋಪಿ ಪೀಟರ್ ಮೈಕಲ್ ಮೊದಲು ಸೊಹೈಲ್ ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಂದು, “ನೀನು ಯಾವ ದೇಶದವನು? ನಿನ್ನ ಹೆಸರೇನು?” ಎಂದು ಕೇಳಿದ್ದಾನೆ. ಅದಕ್ಕೆ ಸೊಹೈಲ್, “ನಾನು ಭಾರತದವನು, ನನ್ನ ಹೆಸರು ಸೊಹೈಲ್” ಎಂದು ವಿನಮ್ರವಾಗಿ ಉತ್ತರಿಸಿದ್ದಾನೆ.

ತಕ್ಷಣವೇ ಆರೋಪಿ “ನೀನು ಮುಸ್ಲಿಮಾ?” ಎಂದು ಮರುಪ್ರಶ್ನೆ ಹಾಕಿದ್ದಾನೆ. ಸೊಹೈಲ್ “ಹೌದು” ಎಂದು ಹೇಳಿ ಕುಡಿಯಲು ನೀರು ಕೊಡಲು ತಿರುಗುತ್ತಿದ್ದಂತೆ, ಆರೋಪಿ ತನ್ನ ಬಳಿಯಿದ್ದ ಚಾಕುವಿನಿಂದ ಸೊಹೈಲ್ ಅವರ ದೇಹದಾದ್ಯಂತ ಮನಬಂದಂತೆ 15 ಬಾರಿ ಇರಿದಿದ್ದಾನೆ.

ದಾಳಿಯ ತೀವ್ರತೆಗೆ ಸೊಹೈಲ್ ಅವರ ದೇಹದಾದ್ಯಂತ ತೀವ್ರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಮಾಲ್‌ನಲ್ಲೇ ಕುಸಿದು ಬಿದ್ದಿದ್ದಾರೆ. ಈ ಭೀಕರ ದೃಶ್ಯವನ್ನು ಕಂಡ ಮಾಲ್‌ನಲ್ಲಿದ್ದ ಪ್ರತ್ಯಕ್ಷದರ್ಶಿಗಳು ಹಾಗೂ ಸಾರ್ವಜನಿಕರು ತಕ್ಷಣವೇ ಧೈರ್ಯದಿಂದ ಮುನ್ನುಗ್ಗಿ ಆರೋಪಿಯನ್ನು ಹಿಡಿದು ಥಳಿಸಿ, ಆತನ ಕೈಲಿದ್ದ ಚಾಕುವನ್ನು ಕಸಿದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಸೊಹೈಲ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಹೃದಯ, ಶ್ವಾಸಕೋಶ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಸಂಗಾತಿ ಹುಡುಕಲು ಆ್ಯಪ್‌ಗಳು ಬೇಕಾಗಿಲ್ಲ; ಸೂಪರ್ ಮಾರ್ಕೆಟ್‌ನಲ್ಲಿ ‘ಪಿಂಕ್ ಬಾಸ್ಕೆಟ್’ ಹಿಡಿದ್ರೆ ಸಿಗುತ್ತೆ ಲವ್ ಪ್ರಪೋಸಲ್

“ಮುಸ್ಲಿಮರನ್ನು ಕೊಲ್ಲುವುದೇ ನನ್ನ ಉದ್ದೇಶ”

ಘಟನಾ ಸ್ಥಳಕ್ಕೆ ಧಾವಿಸಿದ ವೆಸ್ಟ್ ವ್ಯಾಲಿ ಪೊಲೀಸರು ಆರೋಪಿ ಪೀಟರ್ ಮೈಕಲ್ ಲಾರ್ಸೆನ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ವಿಚಾರಣೆ ವೇಳೆ ಆರೋಪಿ ಪೊಲೀಸರ ಮುಂದೆಯೇ, “ನಾನು ಮುಸ್ಲಿಮರನ್ನು ಕೊಲ್ಲಲು ಬಯಸುತ್ತೇನೆ, ಅದಕ್ಕಾಗಿಯೇ ಧರ್ಮದ ಆಧಾರದ ಮೇಲೆ ಆತನನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ” ಎಂದು ಜನಾಂಗೀಯ ದ್ವೇಷವನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರ ತನಿಖೆಯಿಂದ ಈತ ಈ ಹಿಂದೆ 2022ರಲ್ಲೂ ಇಂತಹದೇ ಹಿಂಸಾತ್ಮಕ ಕೃತ್ಯ ಎಸಗಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಸೊಹೈಲ್ ಅವರ ಕುಟುಂಬದಲ್ಲಿ ಅವರೊಬ್ಬರೇ ಸಂಪಾದಿಸುವ ವ್ಯಕ್ತಿಯಾಗಿದ್ದು, ಅವರಿಗೆ ಪತ್ನಿ ಹಾಗೂ ಇಬ್ಬರು ಸಣ್ಣ ಮಕ್ಕಳಿದ್ದಾರೆ. ಅವರಿಗೆ ಯಾವುದೇ ಆರೋಗ್ಯ ವಿಮೆ ಇಲ್ಲದ ಕಾರಣ ಚಿಕಿತ್ಸೆಯ ವೆಚ್ಚಕ್ಕಾಗಿ ಸ್ನೇಹಿತರು ಆನ್‌ಲೈನ್‌ನಲ್ಲಿ ನೆರವು ಕೋರಿದ್ದಾರೆ. ಅಮೆರಿಕದಲ್ಲಿ ಭಾರತೀಯ ಮೂಲದವರ ಮೇಲಿನ ಈ ದ್ವೇಷದ ದಾಳಿಯನ್ನು ಅಲ್ಲಿನ ಮುಸ್ಲಿಂ ಹಾಗೂ ಭಾರತೀಯ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *