ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಅತ್ಯಂತ ಜನನಿಬಿಡ ಪ್ರದೇಶವಾದ ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್ ಕೆಎಸ್‌ಆರ್‌ಟಿಸಿ (KSRTC) ಬಸ್ ನಿಲ್ದಾಣದಲ್ಲಿ ಗುರುವಾರ (ಜು.16) ಸಂಜೆ ಸಾರ್ವಜನಿಕರು ಬೆಚ್ಚಿಬೀಳುವಂತಹ ಭೀಕರ ಹತ್ಯಾಕಾಂಡ ನಡೆದಿದೆ. ನಿಲ್ದಾಣದಲ್ಲಿದ್ದ ಜನರ ಕಣ್ಣೆದುರೇ ದುಷ್ಕರ್ಮಿಯೊಬ್ಬ ಯುವತಿಯ ಮೇಲೆ ಕತ್ತಿಯಿಂದ ಅನಿರೀಕ್ಷಿತ ದಾಳಿ ನಡೆಸಿ, ಆಕೆಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಕತ್ತಿ ದಾಳಿಗೆ ತುತ್ತಾಗಿ ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ದುರ್ದೈವಿ ಯುವತಿಯನ್ನು ಬಂಟ್ವಾಳ ತಾಲೂಕಿನ ಕಕ್ಕೆಪದವು ನಿವಾಸಿಯಾದ ಲಾವಣ್ಯ (25) ಎಂದು ಗುರುತಿಸಲಾಗಿದೆ. ಸಂಜೆ ವೇಳೆ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಇದೇ ಬಿಡುವಿಲ್ಲದ ಸಮಯದಲ್ಲಿ ಆರೋಪಿ ಏಕಾಏಕಿ ಲಾವಣ್ಯ ಅವರ ಮೇಲೆ ಕತ್ತಿಯಿಂದ ಕ್ರೂರವಾಗಿ ದಾಳಿ ನಡೆಸಿದ್ದಾನೆ.
ಇದನ್ನೂ ಓದಿ: ಧಾರವಾಡದಲ್ಲಿ ಲೇಡಿ ಡಾಕ್ಟರ್‌ನಿಂದಲೇ ಪತಿ ಭೀಕರ ಕೊಲೆ: ಮ್ಯಾಟ್ರಿಮೋನಿ ಮೂಲಕವಾಗಿದ್ದ 2ನೇ ಮದುವೆ ತಂದಿಟ್ಟಿತು ದುರಂತ
ಕಣ್ಣೆದುರೇ ನಡೆದ ಈ ರಕ್ತಸಿಕ್ತ ಘಟನೆಯನ್ನು ಕಂಡು ಗಾಬರಿಗೊಂಡ ಬಸ್ ನಿಲ್ದಾಣದ ಪ್ರಯಾಣಿಕರು ಹಾಗೂ ಸ್ಥಳೀಯರು ಪ್ರಾಣಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ. ಸದ್ಯ ಸ್ಥಳದಲ್ಲಿ ತೀವ್ರ ಆತಂಕ ಹಾಗೂ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿದ ಬಂಟ್ವಾಳ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಬರ್ಬರ ಹತ್ಯೆಗೆ ಪ್ರೇಮ ವೈಷಮ್ಯ ಕಾರಣವೇ ಅಥವಾ ಬೇರೆ ಯಾವುದಾದರೂ ವೈಯಕ್ತಿಕ ದ್ವೇಷವಿದೆಯೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಆರೋಪಿಗಾಗಿ ತೀವ್ರ ಜಾಲ ಬೀಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

