Chennamma Passes Away: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ಇನ್ನಿಲ್ಲ

ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ವರಿಷ್ಠ ಹಾಗೂ ದೇಶದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಪತ್ನಿ, ಇಡೀ ಹರದನಹಳ್ಳಿ ದೊಡ್ಡ ಕುಟುಂಬದ ಆಧಾರಸ್ತಂಭವಾಗಿದ್ದ ಶ್ರೀಮತಿ ಚನ್ನಮ್ಮ (85) ಅವರು ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಚನ್ನಮ್ಮ ಅವರ ನಿಧನದಿಂದಾಗಿ ದೊಡ್ಡಗೌಡರ ಕುಟುಂಬ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಶೋಕಾವೃತ ವಾತಾವರಣ ನಿರ್ಮಾಣವಾಗಿದೆ.

ಕಳೆದ 2-3 ವರ್ಷಗಳಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚನ್ನಮ್ಮ ಅವರ ಆರೋಗ್ಯ ಸ್ಥಿತಿಯಲ್ಲಿ ಬುಧವಾರ (ಜುಲೈ 15) ತೀವ್ರ ಏರುಪೇರು ಉಂಟಾಗಿತ್ತು. ತಕ್ಷಣವೇ ಅವರನ್ನು ಬೆಂಗಳೂರಿನ ಓಲ್ಡ್ ಏರ್‌ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.ಮಣಿಪಾಲ್ ಆಸ್ಪತ್ರೆಯ ಪ್ರಮುಖ ತಜ್ಞ ವೈದ್ಯರಾದ ಡಾ. ಸತ್ಯನಾರಾಯಣ ನೇತೃತ್ವದ ತಂಡ ಅವರಿಗೆ ನಿರಂತರವಾಗಿ ತುರ್ತು ಚಿಕಿತ್ಸೆ ನೀಡುತ್ತಿತ್ತು. ಆದರೆ, ವಯೋಸಹಜ ದೌರ್ಬಲ್ಯ ಹಾಗೂ ಉಸಿರಾಟದ ತೊಂದರೆ ಹೆಚ್ಚಾದ ಕಾರಣ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಚನ್ನಮ್ಮ ಅವರು ಕೇವಲ ಒಬ್ಬ ಪ್ರಧಾನಿಯ ಪತ್ನಿಯಾಗಿರದೆ, ದೇವೇಗೌಡರ ಸುದೀರ್ಘ ರಾಜಕೀಯ ಏಳುಬೀಳುಗಳ ಬದುಕಿನಲ್ಲಿ ಗಟ್ಟಿಯಾಗಿ ನಿಂತ ಧೀಮಂತ ಮಹಿಳೆಯಾಗಿದ್ದರು. ಹಾಸನ ತಾಲೂಕಿನ ಮುತ್ತಿಗೆ ಹಿರೇಹಳ್ಳಿಯ ಮೂಲದವರಾದ ಚನ್ನಮ್ಮ ಅವರು 1954ರ ಮೇ 25ರಂದು ಹೆಚ್.ಡಿ. ದೇವೇಗೌಡರ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ದೇವೇಗೌಡರು ಸದಾ ಸಾರ್ವಜನಿಕ ಜೀವನ ಮತ್ತು ರಾಜಕೀಯದಲ್ಲಿ ಬ್ಯುಸಿಯಾಗಿದ್ದಾಗ, ಇಡೀ ಕುಟುಂಬದ ಜವಾಬ್ದಾರಿಯನ್ನು ಚನ್ನಮ್ಮ ಅವರೇ ಹೊತ್ತಿದ್ದರು. ಆರು ಮಕ್ಕಳಾದ ಹೆಚ್.ಡಿ. ರೇವಣ್ಣ, ಹೆಚ್.ಡಿ. ಬಾಲಕೃಷ್ಣ, ಹೆಚ್.ಡಿ. ರಮೇಶ್ ಗೌಡ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಪುತ್ರಿಯರಾದ ಶೈಲಜಾ ಮತ್ತು ಅನಸೂಯಾ ಅವರಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿ ಸಲಹಿದ ಹೆಗ್ಗಳಿಕೆ ಇವರದ್ದಾಗಿದೆ. ದೇವೇಗೌಡ ಮತ್ತು ಕಾಳಮ್ಮ ದಂಪತಿಯ ಹಿರಿಯ ಮಗಳಾಗಿದ್ದ ಚನ್ನಮ್ಮ ಅವರು ಆ ಕಾಲದಲ್ಲೇ ಎಸ್‌ಎಸ್‌ಎಲ್‌ಸಿ (SSLC) ವರೆಗೆ ಓದಿದ್ದರು. ತವರಿನಲ್ಲಿ ನಾಲ್ವರು ತಮ್ಮಂದಿರು ಹಾಗೂ ಮೂವರು ತಂಗಿಯರಿಗೆ ತಾಯಿಯಂತೆ ಆಸರೆಯಾಗಿದ್ದರು.

ಇದನ್ನೂ ಓದಿ:  ಉಳ್ಳಾಲ ಕಡಲತೀರದಲ್ಲಿ ಪ್ರಕೃತಿ ವಿಸ್ಮಯ; ದಡಕ್ಕೆ ಬಂದು ಬಿದ್ದ ಲಕ್ಷಾಂತರ ಬೂತಾಯಿ ಮೀನುಗಳನ್ನು ತುಂಬಿಸಿಕೊಳ್ಳಲು ಮುಗಿಬಿದ್ದ ಜನ

ಜೀವನ್ಮರಣ ಹೋರಾಟ ಗೆದ್ದಿದ್ದ ಧೀರ ವನಿತೆ

ಚನ್ನಮ್ಮ ಅವರ ಜೀವನದ ಪುಟಗಳಲ್ಲಿ ಅತ್ಯಂತ ಕರಾಳ ಘಟನೆಯೊಂದು ನಡೆದಿತ್ತು. 2001ರ ಫೆಬ್ರವರಿ ತಿಂಗಳಲ್ಲಿ ಅವರು ತಮ್ಮ ಸ್ವಗ್ರಾಮವಾದ ಹರದನಹಳ್ಳಿಯ ದೇವಸ್ಥಾನದಲ್ಲಿ ಪೂಜೆ ಮುಗಿಸಿ ವಾಪಸ್ ಬರುತ್ತಿದ್ದಾಗ, ದುಷ್ಕರ್ಮಿಗಳು ಅವರ ಮೇಲೆ ಭೀಕರ ಆ್ಯಸಿಡ್ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು, ಚಿಕಿತ್ಸೆಯ ಬಳಿಕ ಅಪ್ರತಿಮ ಧೈರ್ಯದಿಂದ ಚೇತರಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದರು.

ಸದ್ಯ ಚನ್ನಮ್ಮ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಅವರ ನಿವಾಸಕ್ಕೆ ಕೊಂಡೊಯ್ಯಲು ಸಿದ್ಧತೆ ನಡೆಸಲಾಗುತ್ತಿದ್ದು, ಇಡೀ ಕುಟುಂಬ ಸದಸ್ಯರು ತಾಯಿಯ ಅಗಲಿಕೆಯಿಂದ ಕಣ್ಣೀರಲ್ಲಿ ಮುಳುಗಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾಡಿನ ಹಲವು ರಾಜಕೀಯ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *