ಗುಂಟೂರು: ತಾನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ಯುವಕ ಮತ್ತೊಬ್ಬಳ ಜೊತೆ ಮದುವೆಯಾಗಲು ಸಹಿಸದ 26 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಯುವತಿಯೊಬ್ಬಳು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಆಕೆ ಬರೆದಿಟ್ಟಿರುವ ಹೃದಯ ವಿದ್ರಾವಕ ಡೆತ್‌ನೋಟ್ ಹಾಗೂ ಆಕೆಯ ಕೊನೆಯ ಆಸೆಯಂತೆ ನಡೆದಿರುವ ಅಂತ್ಯಕ್ರಿಯೆ ಇಡೀ ಆಂಧ್ರಪ್ರದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಕೀರ್ತಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಮೃತ ಕೀರ್ತಿ ಅವರು ಪ್ರಕಾಶಂ ಜಿಲ್ಲೆಯ ಪೊಂದುರು ಗ್ರಾಮದ ಸಾಯಿ ಸುಮಂತ್ ಎಂಬಾತನನ್ನು ಕಳೆದ ಎಂಟು ವರ್ಷಗಳಿಂದ ಗಾಢವಾಗಿ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಸಾಯಿ ಸುಮಂತ್ ಕುಟುಂಬಸ್ಥರು ಆತನಿಗೆ ಬೇರೆ ಯುವತಿಯ ಜೊತೆ ಮದುವೆ ನಿಶ್ಚಯ ಮಾಡಿದ್ದರು. ತಾನು ನಂಬಿದ ಪ್ರಿಯಕರ ತನಗೆ ಕೈಕೊಟ್ಟು ಮತ್ತೊಬ್ಬಳನ್ನು ಮದುವೆಯಾಗುತ್ತಿದ್ದಾನೆಂಬ ವಿಷಯ ತಿಳಿಯುತ್ತಿದ್ದಂತೆಯೇ ಕೀರ್ತಿ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಮುಂಬೈನ ಸಾಫ್ಟ್‌ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕೀರ್ತಿ, ಜುಲೈ 14 ರಂದು ತಾವು ತಂಗಿದ್ದ ಪಿಜಿ (PG) ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ತನ್ನ ಕುಟುಂಬಸ್ಥರನ್ನು ಉದ್ದೇಶಿಸಿ ಕೀರ್ತಿ ಕಣ್ಣೀರು ತರಿಸುವ ಡೆತ್‌ನೋಟ್ ಬರೆದಿಟ್ಟಿದ್ದಾರೆ
“ನನ್ನ ಸಾವಿನ ನಂತರ ನನ್ನ ದೇಹಕ್ಕೆ ತಾಳಿ (ಮಾಂಗಲ್ಯ) ಕಟ್ಟಬೇಕು. ಅಷ್ಟೇ ಅಲ್ಲದೇ, ನನ್ನ ಪ್ರಿಯಕರನ ಸ್ವಗ್ರಾಮವಾದ ಪ್ರಕಾಶಂ ಜಿಲ್ಲೆಯ ಪೊಂದುರು ಗ್ರಾಮದಲ್ಲೇ ನನ್ನ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಿಸಬೇಕು.”
ಜುಲೈ 16 ರಂದು ಮುಂಬೈನಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ನಂತರ ಕೀರ್ತಿ ಅವರ ಪೋಷಕರು ಮತ್ತು ಕುಟುಂಬಸ್ಥರು ಶವವನ್ನು ನೇರವಾಗಿ ಪ್ರಕಾಶಂ ಜಿಲ್ಲೆಯ ಪೊಂದುರು ಗ್ರಾಮದಲ್ಲಿರುವ ಪ್ರಿಯಕರ ಸಾಯಿ ಸುಮಂತ್ ಮನೆಗೆ ತಂದಿದ್ದಾರೆ. ಕೀರ್ತಿಗೆ ಮೋಸ ಮಾಡಿದ ಯುವಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಆಕೆಯ ಕೊನೆಯ ಆಸೆ ಈಡೇರಿಸಬೇಕು ಎಂದು ಆಗ್ರಹಿಸಿ ಶವದೊಂದಿಗೆ ಮನೆ ಮುಂದೆ ಕುಳಿತು ತೀವ್ರ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಇದನ್ನೂ ಓದಿ: ಹಿಂದೂ ಮಗುವಿಗೆ ‘ಕಲ್ಮಾ’ ಪಠಿಸಲು ಹೋಮ್ ವರ್ಕ್ ಕೊಟ್ಟ ಶಿಕ್ಷಕಿ ಆಯಿಷಾ

