ಹೊಸದಿಲ್ಲಿ: ಬಾಹ್ಯಾಕಾಶ ರಂಗದಲ್ಲಿ ಭಾರತ ಇಂದು ಮತ್ತೊಂದು ಐತಿಹಾಸಿಕ ಸಾಧನೆಗೆ ಸಾಕ್ಷಿಯಾಗಿದೆ. ದೇಶದ ಮೊದಲ ಖಾಸಗಿ ಆರ್ಬಿಟಲ್ ರಾಕೆಟ್ ‘ವಿಕ್ರಮ್-೧’ ಶನಿವಾರ ಬೆಳಿಗ್ಗೆ ಯಶಸ್ವಿಯಾಗಿ ನಭಕ್ಕೆ ಜಿಗಿದಿದೆ. ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಈ ಹೆಮ್ಮೆಯ ಸಾಧನೆಯ ಹಿಂದೆ ಇಸ್ರೋದ ಮಾಜಿ ವಿಜ್ಞಾನಿ ಪವನ್ ಕುಮಾರ್ ಚಂದನಾ ಅವರ ಕಠಿಣ ಪರಿಶ್ರಮ ಮತ್ತು ದೊಡ್ಡ ಕನಸಿದೆ.
ಸಾಮಾನ್ಯವಾಗಿ ರಾಕೆಟ್ ವಿಜ್ಞಾನಿಗಳ ಕಥೆ ಅಂದ ಕೂಡಲೇ ಶಾಲೆಯಲ್ಲಿ ನೂರಕ್ಕೆ ನೂರು ಅಂಕ ಪಡೆಯುತ್ತಿದ್ದ ಬುದ್ಧಿವಂತ ವಿದ್ಯಾರ್ಥಿಗಳು ನೆನಪಾಗುತ್ತಾರೆ. ಆದರೆ ಪವನ್ ಅವರ ಕಥೆ ಆರಂಭವಾಗುವುದು ಗಣಿತದಲ್ಲಿ ಅವರು ಪಡೆದ ಕೇವಲ 51 ಅಂಕಗಳಿಂದ! ಹೈದರಾಬಾದ್‌ನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಪವನ್ ಅವರಿಗೆ ಅಂಕಗಳಿಗಿಂತ ಹೆಚ್ಚಾಗಿ ಯಂತ್ರಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಕುತೂಹಲವಿತ್ತು. ಇದೇ ಜ್ಞಾನದ ಹಸಿವು ಅವರನ್ನು ಐಐಟಿ ಖರಗ್‌ಪುರ ಸೇರುವಂತೆ ಮಾಡಿತು. ಐಐಟಿಯಲ್ಲಿ ಓದುತ್ತಿರುವಾಗ ಸಹಪಾಠಿಗಳು ಲಕ್ಷಾಂತರ ಸಂಬಳದ ಐಟಿ ಕಂಪನಿಗಳ ಕೆಲಸದ ಹಿಂದೆ ಓಡುತ್ತಿದ್ದರೆ, ಪವನ್ ಮಾತ್ರ ಬಾಹ್ಯಾಕಾಶದ ಕನಸು ಕಂಡು ನೇರವಾಗಿ ಇಸ್ರೋ (ISRO) ಸೇರಿಕೊಂಡರು.
ಇಸ್ರೋದಲ್ಲಿ GSLV Mk III ನಂತಹ ಬೃಹತ್ ಯೋಜನೆಯಲ್ಲಿ ಕೆಲಸ ಮಾಡಿ ಪ್ರಶಸ್ತಿ ಮುಡಿಗೇರಿಸಿಕೊಂಡ ಪವನ್, 2018ರಲ್ಲಿ ತಮ್ಮ ಸಹೋದ್ಯೋಗಿ ನಾಗಾ ಭರತ್ ದಾಕಾ ಅವರೊಂದಿಗೆ ಸೇರಿ ‘ಸ್ಕೈರೂಟ್ ಏರೋಸ್ಪೇಸ್’ ಎಂಬ ಸ್ಟಾರ್ಟ್‌ಅಪ್ ಆರಂಭಿಸಿದರು. ಹೂಡಿಕೆದಾರರ ಹಿಂದೇಟು, ಕೋವಿಡ್ ಸಾಂಕ್ರಾಮಿಕದಂತಹ ಹತ್ತಾರು ಅಡೆತಡೆಗಳ ನಡುವೆಯೂ ಫ್ಲಿಪ್‌ಕಾರ್ಟ್ ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್ ಅವರ ಆರ್ಥಿಕ ಬೆಂಬಲದೊಂದಿಗೆ ಪಟ್ಟುಬಿಡದೆ ಹೋರಾಡಿದರು. ಜುಲೈ 2020 ರಲ್ಲಿ ನೋಬೆಲ್ ಪುರಸ್ಕೃತ ಸಿ.ವಿ. ರಾಮನ್ ಅವರ ನೆನಪಿನಲ್ಲಿ ‘ರಾಮನ್-1’ ಇಂಜಿನ್ ಪರೀಕ್ಷಿಸಿ ಇತಿಹಾಸ ಬರೆದಿದ್ದ ಇವರ ತಂಡ, ಇಂದು ‘ವಿಕ್ರಮ್-೧’ ಉಡಾವಣೆ ಮಾಡುವ ಮೂಲಕ ಭಾರತದ ಖಾಸಗಿ ಬಾಹ್ಯಾಕಾಶ ರಂಗಕ್ಕೆ ಸುವರ್ಣ ಭವಿಷ್ಯ ಬರೆದಿದೆ.
ಇದನ್ನೂ ಓದಿ: ಸ್ಕೈರೂಟ್‌ನ ‘ವಿಕ್ರಮ್-1’ ರಾಕೆಟ್ ಉಡಾವಣೆ; ಪ್ರಧಾನಿ ಮೋದಿ ಕೈಬರಹದ ಪೋಸ್ಟ್‌ಕಾರ್ಡ್ ಹೊತ್ತು ಹಾರಿದ ಖಾಸಗಿ ನೌಕೆ
ಸ್ಕೈರೂಟ್ ಸಂಸ್ಥೆಯ ‘ವಿಕ್ರಮ್-೧’ ರಾಕೆಟ್ ಉಡಾವಣೆ ಯಶಸ್ವಿ!
ಭಾರತೀಯ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಇಂದು ಅತ್ಯಂತ ಮಹತ್ವದ ದಿನವಾಗಿದೆ. ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆ ನಿರ್ಮಿಸಿರುವ ‘ವಿಕ್ರಮ್-೧’ ರಾಕೆಟ್‌ನ ಉಡಾವಣೆ ಇಂದು ಬೆಳಿಗ್ಗೆ ಯಶಸ್ವಿಯಾಗಿದೆ. ಇಸ್ರೋದ ಮಾಜಿ ವಿಜ್ಞಾನಿ ಪವನ್ ಕುಮಾರ್ ಚಂದನಾ ಅವರು ಈ ಐತಿಹಾಸಿಕ ಯೋಜನೆಯ ನೇತೃತ್ವ ವಹಿಸಿದ್ದರು.
ಶಾಲಾ ದಿನಗಳಲ್ಲಿ ಗಣಿತ ವಿಷಯದಲ್ಲಿ ಕೇವಲ 51 ಅಂಕ ಗಳಿಸಿದ್ದರೂ, ಯಂತ್ರೋಪಕರಣಗಳ ಮೇಲಿದ್ದ ಅಪಾರ ಕುತೂಹಲದಿಂದಾಗಿ ಪವನ್ ಕುಮಾರ್ ಐಐಟಿ ಖರಗ್‌ಪುರದಲ್ಲಿ ಪದವಿ ಮುಗಿಸಿ ಇಸ್ರೋ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದರು. ಇಸ್ರೋದಲ್ಲಿ ಆರು ವರ್ಷಗಳ ಕಾಲ ಜಿಎಸ್ಎಲ್ವಿ ಮಾರ್ಕ್ ೩ ಯೋಜನೆಯಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ ನಂತರ, ಭಾರತದಲ್ಲೂ ಖಾಸಗಿ ಬಾಹ್ಯಾಕಾಶ ಸಂಸ್ಥೆಯನ್ನು ಕಟ್ಟುವ ಉದ್ದೇಶದಿಂದ 2018ರಲ್ಲಿ ಸ್ಕೈರೂಟ್ ಏರೋಸ್ಪೇಸ್ ಸಂಸ್ಥೆಯನ್ನು ಸ್ಥಾಪಿಸಿದರು.
ಆರಂಭಿಕ ಹಂತದಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸಿದ ಈ ಸಂಸ್ಥೆಗೆ ಫ್ಲಿಪ್‌ಕಾರ್ಟ್ ಸಹ-ಸಂಸ್ಥಾಪಕ ಬಿನ್ನಿ ಬನ್ಸಾಲ್ ಅವರು 1.5 ಮಿಲಿಯನ್ ಡಾಲರ್ ಹೂಡಿಕೆ ಮಾಡುವ ಮೂಲಕ ಬೆನ್ನೆಲುಬಾಗಿ ನಿಂತರು. ತದನಂತರ ಬಂದ ಕೋವಿಡ್ ಲಾಕ್‌ಡೌನ್ ಸವಾಲುಗಳನ್ನು ಮೀರಿ ನಿಂತ ಸಂಸ್ಥೆಯು, 2020ರಲ್ಲಿ ತನ್ನ ಮೊದಲ ರಾಕೆಟ್ ಇಂಜಿನ್ ‘ರಾಮನ್-1’ ಅನ್ನು ಯಶಸ್ವಿಯಾಗಿ ಪರೀಕ್ಷಿಸಿತ್ತು. ಇಂದು ‘ವಿಕ್ರಮ್-೧’ ರಾಕೆಟ್‌ನ ಯಶಸ್ವಿ ಉಡಾವಣೆಯೊಂದಿಗೆ ಭಾರತದ ಬಾಹ್ಯಾಕಾಶ ಇತಿಹಾಸದಲ್ಲಿ ಖಾಸಗಿ ಸಂಸ್ಥೆಯೊಂದು ಹೊಸ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

