ಎಳನೀರು ಭಾಗದ ಜನರ ಬಹುವರ್ಷಗಳ ಮೊಬೈಲ್ ನೆಟ್‌ವರ್ಕ್ ಕನಸು ನನಸು: ಟವರ್ ಉದ್ಘಾಟಿಸಿದ ಸಂಸದ ಬ್ರಿಜೇಶ್ ಚೌಟ

ಬೆಳ್ತಂಗಡಿ: ತಾಲೂಕಿನ ಅತ್ಯಂತ ದುರ್ಗಮ ಹಾಗೂ ಮಲೆನಾಡಿನ ಗಡಿ ಭಾಗವಾಗಿರುವ ಮಲವಂತಿಗೆ ಗ್ರಾಮದ ಎಳನೀರು ಪರಿಸರದ ಸಾರ್ವಜನಿಕರ ಬಹುವರ್ಷಗಳ ನೆಟ್‌ವರ್ಕ್ ಸಮಸ್ಯೆ ಕೊನೆಗೂ ಬಗೆಹರಿದಿದೆ. ಎಳನೀರು ಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಿ.ಎಸ್.ಎನ್.ಎಲ್ (BSNL) ಮೊಬೈಲ್ ಟವರ್‌ನ್ನು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟನೆ ಮಾಡಿದರು.

ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ ಅವರು ಈ ಕಾರ್ಯಕ್ರಮಕ್ಕೆ ಸಾಥ್ ನೀಡಿದರು. ಪಶ್ಚಿಮ ಘಟ್ಟದ ತಪ್ಪಲಿನ ಅತ್ಯಂತ ಒಳಭಾಗದಲ್ಲಿರುವ ಎಳನೀರು ಪರಿಸರದ ಜನರಿಗೆ ಇಷ್ಟು ವರ್ಷಗಳ ಕಾಲ ಕನಿಷ್ಠ ಮೊಬೈಲ್ ಸಂಪರ್ಕವಾಗಲಿ ಅಥವಾ ಇಂಟರ್ನೆಟ್ ಸೌಲಭ್ಯವಾಗಲಿ ಸಿಗುತ್ತಿರಲಿಲ್ಲ.

ತುರ್ತು ಸಂದರ್ಭಗಳಲ್ಲಿ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಗ್ರಾಮಸ್ಥರು ನೆಟ್‌ವರ್ಕ್ ಹುಡುಕಿಕೊಂಡು ಮೈಲುಗಟ್ಟಲೆ ಅಲೆಯಬೇಕಾದ ಪರಿಸ್ಥಿತಿ ಇತ್ತು. ಇದೀಗ ಬಿಎಸ್‌ಎನ್‌ಎಲ್ ಟವರ್ ಕಾರ್ಯಾರಂಭ ಮಾಡಿರುವುದರಿಂದ ಇಡೀ ಗ್ರಾಮಕ್ಕೆ ಡಿಜಿಟಲ್ ಕನೆಕ್ಟಿವಿಟಿ ಸಿಕ್ಕಂತಾಗಿದೆ.

ಇದನ್ನೂ ಓದಿ: ಎಲೆ ಚುಕ್ಕಿ ಸೇರಿದಂತೆ ಅಡಿಕೆ ರೋಗ ಬಾಧೆಗೆ ಶಾಶ್ವತ ಪರಿಹಾರಕ್ಕಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ ಸಂಸದ ಕ್ಯಾ.ಬ್ರಿಜೇಶ್ ಚೌಟ  

ಅತ್ಯಂತ ಸಡಗರದಿಂದ ನಡೆದ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರೊಂದಿಗೆ ಸ್ಥಳೀಯ ಜನಪ್ರತಿನಿಧಿಗಳು, ಪ್ರಮುಖ ಮುಖಂಡರು ಹಾಗೂ ನೂರಾರು ಸಂಖ್ಯೆಯ ಗ್ರಾಮಸ್ಥರು ಭಾಗವಹಿಸಿದ್ದರು.

ತಮ್ಮ ಊರಿನ ದಶಕಗಳ ಕಾಲದ ದೊಡ್ಡ ಕನಸನ್ನು ನನಸು ಮಾಡಿದ ಶಾಸಕರು ಹಾಗೂ ಅಧಿಕಾರಿಗಳಿಗೆ ಎಳನೀರು ಭಾಗದ ಸಾರ್ವಜನಿಕರು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಇಂಟರ್ನೆಟ್ ಯುಗದಲ್ಲಿ ಈ ದುರ್ಗಮ ಪ್ರದೇಶದ ಅಭಿವೃದ್ಧಿಗೆ ಈ ಟವರ್ ನಾಂದಿ ಹಾಡಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *