ಪ್ರಧಾನಿ ನಿವಾಸದ ಬಳಿ ‘ಇಂಡಿಯಾ’ ಒಕ್ಕೂಟದ ಧರಣಿ: ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ

ದೆಹಲಿ : ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಹಾಗೂ ಸೋಮವಾರ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ಪ್ರತಿಪಕ್ಷಗಳು ನಡೆಸುತ್ತಿದ್ದ ಬೃಹತ್ ಧರಣಿ ಸತ್ಯಾಗ್ರಹವನ್ನು ದೆಹಲಿ ಪೊಲೀಸರು ಮಂಗಳವಾರ ಸಂಜೆ ಬಲವಂತವಾಗಿ ತೆರವುಗೊಳಿಸಿದ್ದಾರೆ.

ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ರಸ್ತೆಯಲ್ಲೇ ಕುಳಿತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಹಿರಿಯ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನೀಟ್ ಹಗರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ (INDIA) ಕೂಟದ ನಾಯಕರು ಮಂಗಳವಾರ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಅಲ್ಲದೆ, ಇಂದು ರಾತ್ರಿಯಿಡೀ ಪ್ರಧಾನಿ ನಿವಾಸದ ಹೊರಗಡೆಯೇ ಧರಣಿ ಮುಂದುವರಿಸುವುದಾಗಿ ಕಾಂಗ್ರೆಸ್ ನಾಯಕರು ಬಹಿರಂಗವಾಗಿ ಘೋಷಿಸಿದ್ದರು.

ಇದನ್ನೂ ಓದಿ: ದೆಹಲಿಯಲ್ಲಿ ನಡೆದದ್ದು ವಿದ್ಯಾರ್ಥಿಗಳ ಪ್ರತಿಭಟನೆಯಲ್ಲ, ಭಾರತ ವಿರೋಧಿ ಷಡ್ಯಂತ್ರ: ಸಿಟಿ ರವಿ

ಸಂಜೆ ಸುಮಾರು 6:40ರ ವೇಳೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಹೆಚ್ಚುವರಿ ಭದ್ರತಾ ಪಡೆಗಳ ಜೊತೆ ಸ್ಥಳಕ್ಕಾಗಮಿಸಿದ ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ತೆರವುಗೊಳಿಸಲು ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ರಾಹುಲ್ ಗಾಂಧಿ ರಸ್ತೆಯ ಮೇಲೆಯೇ ಧರಣಿ ಕುಳಿತು, ತಮ್ಮ ಬೇಡಿಕೆಗಳು ಈಡೇರುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ಕೊನೆಗೆ 10ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ರಾಹುಲ್ ಗಾಂಧಿ ಅವರನ್ನು ಸುತ್ತುವರಿದು, ಬಲವಂತವಾಗಿ ರಸ್ತೆಯಿಂದ ಎಬ್ಬಿಸಿ, ಹೊತ್ತುಕೊಂಡೇ ಹೋಗಿ ಪೊಲೀಸ್ ಬಸ್‌ಗೆ ಹತ್ತಿಸಿ ಕರೆದೊಯ್ದರು.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *