ಆತಂಕ ಬೇಡ, ಮುನ್ನೆಚ್ಚರಿಕೆ ವಹಿಸಿ: ವೈರಲ್ ರೋಗಗಳ ಭೀತಿ ನಡುವೆ ಆರೋಗ್ಯ ಸಚಿವರ ಅಭಯ

ಬೆಂಗಳೂರು: ದೇಶಾದ್ಯಂತ ಕೋವಿಡ್, ಡೆಂಗ್ಯೂ ಹಾಗೂ H1N1 ನಂತಹ ವೈರಲ್ ರೋಗಗಳ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ; ಭಯಪಡುವ ಬದಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಮುಖ್ಯ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ, ಲಸಿಕೆ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಕೈಗೊಂಡಿರುವ ಕ್ರಮಗಳ ಕುರಿತು ಅವರು ಮಾಧ್ಯಮಗಳೊಂದಿಗೆ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡರು.

ಕೋವಿಡ್ ಪ್ರಕರಣಗಳ ಏರಿಕೆಯ ಬಗ್ಗೆ ಮಾತನಾಡಿದ ಸಚಿವರು, “ಸಾವಿರ ವರ್ಷ ಕಳೆದರೂ ಈ ವೈರಸ್ ಗಾಳಿಯಲ್ಲಿ ನಿರಂತರವಾಗಿ ಇದ್ದೇ ಇರುತ್ತದೆ. ನಾವು ಪರೀಕ್ಷೆಗಳನ್ನು (Testing) ಹೆಚ್ಚಿಸಿದಾಗ ಕೆಲವೊಂದು ಪ್ರಕರಣಗಳು ಪಾಸಿಟಿವ್ ಬರುವುದು ಸಹಜ. ಇದಕ್ಕೆ ಯಾರೂ ಆತಂಕ ಪಡಬೇಕಾಗಿಲ್ಲ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಸೋಂಕು ಬೇಗ ತಗುಲುವ ಸಾಧ್ಯತೆ ಇರುತ್ತದೆ. ಹೀಗಾಗಿ ನಾವೆಲ್ಲರೂ ಉತ್ತಮ ಆಹಾರ ಪದ್ಧತಿ, ಆರೋಗ್ಯಕರ ಜೀವನಶೈಲಿ ಹಾಗೂ ನೈರ್ಮಲ್ಯದ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.

ಇದು ಸಾಂಕ್ರಾಮಿಕ ರೋಗಗಳು ಹಾಗೂ ವೈರಲ್ ಫೀವರ್ ಹೆಚ್ಚಾಗುವ ಸಮಯವಾಗಿರುವುದರಿಂದ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಯುವುದು ಅತ್ಯಗತ್ಯ. ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್, ಪರೀಕ್ಷೆಗಳು ಸೇರಿದಂತೆ ಡೆಂಗ್ಯೂ, H1N1 ಮತ್ತು ಕೋವಿಡ್ ಎದುರಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ ಎಂದು ಸಚಿವರು ಭರವಸೆ ನೀಡಿದರು.

ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಪ್ರಮುಖ ಸೂಚನೆಗಳು:

ನೀರು ನಿಲ್ಲದಂತೆ ನೋಡಿಕೊಳ್ಳಿ: ನಿರ್ಮಾಣ ಹಂತದ ಕಟ್ಟಡಗಳು ಹಾಗೂ ಮನೆಗಳ ಸುತ್ತಮುತ್ತ ನೀರು ಶೇಖರಣೆಯಾಗದಂತೆ ಎಚ್ಚರ ವಹಿಸಿ.

ತಕ್ಷಣ ಟೆಸ್ಟ್ ಮಾಡಿಸಿ: ಜ್ವರ ಅಥವಾ ಯಾವುದೇ ರೋಗಲಕ್ಷಣ ಕಂಡುಬಂದಲ್ಲಿ ವಿಳಂಬ ಮಾಡದೆ ತಪಾಸಣೆ ಮಾಡಿಸಿಕೊಳ್ಳಿ.

ಬಿಸಿ ನೀರು ಬಳಸಿ: ಕುಡಿಯಲು ಕಾಯಿಸಿ ಆರಿಸಿದ ನೀರನ್ನೇ ಬಳಸುವುದು ಸೂಕ್ತ.

ಇದನ್ನೂ ಓದಿ: ಮಳೆಗಾಲದಲ್ಲಿ ಕಾಡುತ್ತಿದೆಯೇ ವಸಡಿನ ರಕ್ತಸ್ರಾವ, ಬಾಯಿ ದುರ್ವಾಸನೆ?: ಕಾರಣ ನಿಮ್ಮ ಈ ಹವ್ಯಾಸಗಳೇ ಇರಬಹುದು

ಡೆಂಗ್ಯೂ ಲಸಿಕೆ ಕುರಿತು ತಜ್ಞರೊಂದಿಗೆ ಚರ್ಚೆ:

ಡೆಂಗ್ಯೂ ರೋಗಕ್ಕೆ ಲಸಿಕೆ ಸಂಶೋಧನೆ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಈ ಲಸಿಕೆಯ ಕುರಿತು ಈಗಾಗಲೇ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ನಮ್ಮ ರಾಜ್ಯದ ವಾತಾವರಣಕ್ಕೆ ಈ ಲಸಿಕೆ ಎಷ್ಟು ಸೂಕ್ತ ಹಾಗೂ ಇದು ಸಾರ್ವಜನಿಕ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತು ವೈದ್ಯಕೀಯ ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *