15ರ ಹರೆಯದಲ್ಲೇ ವಿಶ್ವದಾಖಲೆ ಬರೆದ ವೈಭವ್ ಸೂರ್ಯವಂಶಿ, ಸಚಿನ್ ತೆಂಡೂಲ್ಕರ್ ದಾಖಲೆಯೂ ಬ್ರೇಕ್

ಭಾರತದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಜಿಂಬಾಬ್ವೆ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಕೇವಲ 15 ವರ್ಷ 118 ದಿನಗಳ ವಯಸ್ಸಿನಲ್ಲೇ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅರ್ಧಶತಕ ದಾಖಲಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಇದುವರೆಗೆ ಜಿಬ್ರಾಲ್ಟರ್‌ನ ಲೂಯಿಸ್ ಬ್ರೂಸ್ (16 ವರ್ಷ 56 ದಿನ) ಹೆಸರಿನಲ್ಲಿದ್ದ ದಾಖಲೆ ಇದೀಗ ವೈಭವ್ ಹೆಸರಿಗೆ ವರ್ಗಾವಣೆಯಾಗಿದೆ. ಅಷ್ಟೇ ಅಲ್ಲದೆ, ಪೂರ್ಣ ಸದಸ್ಯ ರಾಷ್ಟ್ರಗಳ (Full Member Nations) ಪರ ಆಡಿದ ಪುರುಷರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50+ ರನ್ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯೂ ವೈಭವ್ ಪಾಲಾಗಿದೆ. ಈ ಮೂಲಕ ಅವರು ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನೂ ಹಿಂದಿಕ್ಕಿದ್ದಾರೆ.

ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದ ಅತ್ಯಂತ ಕಿರಿಯ ಆಟಗಾರರು

  • 15 ವರ್ಷ 118 ದಿನ – ವೈಭವ್ ಸೂರ್ಯವಂಶಿ (ಭಾರತ) vs ಜಿಂಬಾಬ್ವೆ, ಹರಾರೆ (2026)
  • 16 ವರ್ಷ 56 ದಿನ – ಲೂಯಿಸ್ ಬ್ರೂಸ್ (ಜಿಬ್ರಾಲ್ಟರ್) vs ಮಾಲ್ಟಾ, ಅಲ್ಬರ್ಗಾರಿಯಾ (2021)
  • 16 ವರ್ಷ 76 ದಿನ – ಕವಿನ್ ಚಡ್ಡಾ (ಇಂಡೋನೇಷ್ಯಾ) vs ಸ್ವೀಡನ್, ಬಾಲಿ (2026)
  • 16 ವರ್ಷ 89 ದಿನ – ಅಲುಸಿನ್ ಟುರೇ (ಸಿಯೆರಾ ಲಿಯೋನ್) vs ಘಾನಾ, ಬೆನೋನಿ (2023)
  • 16 ವರ್ಷ 118 ದಿನ – ಟೆಂಜಿನ್ ರಾಬ್ಗೇ (ಭೂತಾನ್) vs ಚೀನಾ, ಕೌಲಾಲಂಪುರ (2023)

ವೈಭವ್ ಸೂರ್ಯವಂಶಿ 15 ವರ್ಷ 118 ದಿನಗಳ ವಯಸ್ಸಿನಲ್ಲಿ ಪುರುಷರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ (Men’s International Cricket) 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ವಿಶ್ವದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: T20: 19 ಎಸೆತಗಳಲ್ಲಿ ಮಿಂಚಿದ ವೈಭವ್ ಸೂರ್ಯವಂಶಿ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಭರ್ಜರಿ ಜಯ

16 ವರ್ಷ ಪೂರೈಸುವ ಮುನ್ನ ಪುರುಷರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50+ ರನ್ ದಾಖಲಿಸಿದ ಆಟಗಾರರು ಕೇವಲ ಇಬ್ಬರು.

  1. ವೈಭವ್ ಸೂರ್ಯವಂಶಿ (ಭಾರತ) – 15 ವರ್ಷ 118 ದಿನಗಳ ವಯಸ್ಸಿನಲ್ಲಿ ಜಿಂಬಾಬ್ವೆ ವಿರುದ್ಧದ ಟಿ20 ಪಂದ್ಯದಲ್ಲಿ ಅರ್ಧಶತಕ (2026).
  2. ಕುಶಲ್ ಮಲ್ಲ (ನೇಪಾಳ) – 15 ವರ್ಷ 340 ದಿನಗಳ ವಯಸ್ಸಿನಲ್ಲಿ 2020ರಲ್ಲಿ ಕೀರ್ತಿಪುರದಲ್ಲಿ ಅಮೆರಿಕ ವಿರುದ್ಧದ ಏಕದಿನ (ODI) ಪಂದ್ಯದಲ್ಲಿ 50+ ರನ್ ದಾಖಲಿಸಿದ್ದರು.

ಪೂರ್ಣ ಸದಸ್ಯ ರಾಷ್ಟ್ರಗಳ (Full Member Teams) ಪರ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದ ಅತ್ಯಂತ ಕಿರಿಯ ಆಟಗಾರರು-

  • 15 ವರ್ಷ 118 ದಿನ – ವೈಭವ್ ಸೂರ್ಯವಂಶಿ (ಭಾರತ) vs ಜಿಂಬಾಬ್ವೆ, ಹರಾರೆ (ಟಿ20, 2026)
  • 16 ವರ್ಷ 213 ದಿನ – ಸಚಿನ್ ತೆಂಡೂಲ್ಕರ್ (ಭಾರತ) vs ಪಾಕಿಸ್ತಾನ, ಫೈಸಲಾಬಾದ್ (ಟೆಸ್ಟ್, 1989)
  • 16 ವರ್ಷ 214 ದಿನ – ಶಾಹಿದ್ ಅಫ್ರಿದಿ (ಪಾಕಿಸ್ತಾನ) vs ಶ್ರೀಲಂಕಾ, ನೈರೋಬಿ (ಏಕದಿನ, 1996)
  • 17 ವರ್ಷ 39 ದಿನ – ಮುಷ್ತಾಕ್ ಮೊಹಮ್ಮದ್ (ಪಾಕಿಸ್ತಾನ) vs ಭಾರತ, ಕೋಲ್ಕತ್ತಾ (ಟೆಸ್ಟ್, 1960)
  • 17 ವರ್ಷ 63 ದಿನ – ಮೊಹಮ್ಮದ್ ಅಶ್ರಫುಲ್ (ಬಾಂಗ್ಲಾದೇಶ) vs ಶ್ರೀಲಂಕಾ, ಕೊಲಂಬೊ (ಎಸ್‌ಎಸ್‌ಸಿ) (ಟೆಸ್ಟ್, 2001)

19 ಎಸೆತಗಳಲ್ಲಿ ಸಿಡಿಲಬ್ಬರದ ಅರ್ಧಶತಕ

126 ರನ್‌ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ನೀಡಿದರು. ಕೇವಲ 19 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 50 ರನ್ ಸಿಡಿಸಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿನ ತಮ್ಮ ಚೊಚ್ಚಲ ಅರ್ಧಶತಕ ದಾಖಲಿಸಿದರು.

ಅವರ ಸಿಡಿಲಬ್ಬರದ ಇನ್ನಿಂಗ್ಸ್‌ಗೆ ರಿಚರ್ಡ್ ನ್ಗರವ ತೆರೆ ಎಳೆದರು. ಆಫ್ ಸ್ಟಂಪ್ ಹೊರಗೆ ಎಸೆದ ಚೆಂಡನ್ನು ಕವರ್ ಪ್ರದೇಶದ ಮೇಲೆ ಎತ್ತಿ ಹೊಡೆಯಲು ಯತ್ನಿಸಿದ ವೈಭವ್, ಟಾಪ್ ಎಡ್ಜ್ ನೀಡಿದರು. ಪರಿಣಾಮ ಡೀಪ್ ಥರ್ಡ್ ಪ್ರದೇಶದಲ್ಲಿ ಬೆನ್ ಕರನ್ ಸುಲಭ ಕ್ಯಾಚ್ ಪಡೆದು ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *