ಬೆಳಗಿನ ಉಪಹಾರಕ್ಕೆ (Breakfast) ಏನು ತಿನ್ನಬೇಕು? ಎಂಬ ಗೊಂದಲ ಪ್ರತಿಯೊಬ್ಬರ ಮನೆಯಲ್ಲೂ ಇದ್ದೇ ಇರುತ್ತದೆ. ಆದರೆ, ಆರೋಗ್ಯ ತಜ್ಞರು ಹಾಗೂ ಪೋಷಕಾಂಶ ತಜ್ಞರ ಪ್ರಕಾರ, ಬೆಳಗಿನ ವೇಳೆಯಲ್ಲಿ ಅವಲಕ್ಕಿ ಸೇವಿಸುವುದು ದೇಹಕ್ಕೆ ಅತ್ಯಂತ ಸೂಕ್ತ ಹಾಗೂ ಆರೋಗ್ಯಕರ ಆಯ್ಕೆಯಾಗಿದೆ.
ತಯಾರಿಸಲು ಸುಲಭ ಹಾಗೂ ರುಚಿಕರವಾಗಿರುವ ಅವಲಕ್ಕಿಯಲ್ಲಿ ದೇಹಕ್ಕೆ ಅಗತ್ಯವಿರುವ ಅಪಾರ ಪ್ರಮಾಣದ ಪೋಷಕಾಂಶಗಳು ಅಡಗಿವೆ. ಬೆಳಿಗ್ಗೆ ಅವಲಕ್ಕಿ ತಿನ್ನುವುದರಿಂದ ಲಭಿಸುವ ಪ್ರಮುಖ ಆರೋಗ್ಯ ಪ್ರಯೋಜನಗಳು ಕೆಳಗಿನಂತಿವೆ.
ದಿನವಿಡೀ ಕಾಯ್ದುಕೊಳ್ಳುವ ಶಕ್ತಿ
ಅವಲಕ್ಕಿಯಲ್ಲಿ ಸುಮಾರು 76% ನಷ್ಟು ಆರೋಗ್ಯಕರ ಕಾರ್ಬೋಹೈಡ್ರೇಟ್ಗಳು ಇರುತ್ತವೆ. ಇದು ಬೆಳಿಗ್ಗೆ ದೇಹಕ್ಕೆ ತಕ್ಷಣದ ಶಕ್ತಿ ನೀಡುತ್ತದೆ ಮತ್ತು ದಿನವಿಡೀ ಉತ್ಸಾಹದಿಂದ ಕೆಲಸ ಮಾಡಲು ನೆರವಾಗುತ್ತದೆ.
ಕಬ್ಬಿಣದ ಸತ್ವಗಳ ಗಣಿ
ಅವಲಕ್ಕಿ ತಯಾರಿಕೆಯ ಪ್ರಕ್ರಿಯೆಯಿಂದಾಗಿ ಇದರಲ್ಲಿ ಕಬ್ಬಿಣದ ಸತ್ವ ಹೆಚ್ಚಾಗಿರುತ್ತದೆ. ರಕ್ತಹೀನತೆ ಅಥವಾ ಹಿಮೋಗ್ಲೋಬಿನ್ ಕೊರತೆ ಇರುವವರು ಪ್ರತಿದಿನ ಅಥವಾ ವಾರದಲ್ಲಿ ೩-೪ ಬಾರಿ ಅವಲಕ್ಕಿ ಸೇವಿಸುವುದರಿಂದ ರಕ್ತ ಹೆಚ್ಚಾಗಲು ಸಹಾಯವಾಗುತ್ತದೆ. (ಇದಕ್ಕೆ ಸ್ವಲ್ಪ ನಿಂಬೆಹಣ್ಣು ಹಿಂಡಿದರೆ ವಿಟಮಿನ್ ಸಿ ಸೇರಿ ಕಬ್ಬಿಣದ ಅಂಶವನ್ನು ದೇಹ ಬೇಗ ಹೀರಿಕೊಳ್ಳುತ್ತದೆ).
ಸಕ್ಕರೆ ಕಾಯಿಲೆ ಇದ್ದವರಿಗೂ ಸೂಕ್ತ
ಅವಲಕ್ಕಿಯಲ್ಲಿ ನಾರಿನಂಶ ಉತ್ತಮವಾಗಿದ್ದು, ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆಯಿರುತ್ತದೆ. ಇದರಿಂದಾಗಿ ಇದು ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ತಕ್ಷಣವೇ ಹೆಚ್ಚಿಸುವುದಿಲ್ಲ. ಮಧುಮೇಹಿಗಳು ತರಕಾರಿಗಳನ್ನು ಸೇರಿಸಿ ಇದನ್ನು ಧೈರ್ಯವಾಗಿ ಸೇವಿಸಬಹುದು.
ತೂಕ ಇಳಿಕೆಗೆ ಸಹಕಾರಿ
ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅವಲಕ್ಕಿ ಬೆಸ್ಟ್ ಫುಡ್. ಇದರಲ್ಲಿ ಕ್ಯಾಲೊರಿಗಳು ತೀರ ಕಡಿಮೆ ಇರುತ್ತವೆ ಮತ್ತು ನಾರಿನಂಶ ಹೆಚ್ಚಿರುವುದರಿಂದ ಹೊಟ್ಟೆ ಬೇಗ ತುಂಬಿದ ಅನುಭವ ನೀಡುತ್ತದೆ. ಇದರಿಂದ ಅನಗತ್ಯವಾಗಿ ಹೆಚ್ಚು ಆಹಾರ ಸೇವಿಸುವುದು ತಡೆಯಲ್ಪಡುತ್ತದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಕಾಡುತ್ತಿದೆಯೇ ವಸಡಿನ ರಕ್ತಸ್ರಾವ, ಬಾಯಿ ದುರ್ವಾಸನೆ?: ಕಾರಣ ನಿಮ್ಮ ಈ ಹವ್ಯಾಸಗಳೇ ಇರಬಹುದು
ಪ್ರೋಬಯೋಟಿಕ್ ಗುಣಗಳು
ಅವಲಕ್ಕಿಯನ್ನು ನೆನೆಸಿ ತಯಾರಿಸುವಾಗ ಅದು ನೈಸರ್ಗಿಕವಾಗಿ ಹುದುಗುವಿಕೆ ಪ್ರಕ್ರಿಯೆಗೆ ಒಳಪಡುವುದರಿಂದ ಅದರಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ರೂಪಗೊಳ್ಳುತ್ತವೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಪೌಷ್ಟಿಕಾಂಶ ಹೆಚ್ಚಿಸಲು ಉಪಾಯ:
ಅವಲಕ್ಕಿ ಮಾಡುವಾಗ ಅದಕ್ಕೆ ಕಡಲೆಕಾಯಿ, ಕ್ಯಾರೆಟ್, ಬೀನ್ಸ್, ಬಟಾಣಿ ಹಾಗೂ ನಿಂಬೆ ರಸ ಸೇರಿಸುವುದರಿಂದ ಪ್ರೋಟೀನ್, ವಿಟಮಿನ್ ಹಾಗೂ ಫೈಬರ್ ಸತ್ವಗಳು ದ್ವಿಗುಣಗೊಳ್ಳುತ್ತವೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

